ಸಾರಾಂಶ
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರತಿಷ್ಠೆಯು ಭಾರತೀಯರಿಗೆ ಎಷ್ಟು ಸಂಭ್ರಮವನ್ನು ಉಂಟುಮಾಡಿದೆಯೋ ಅಷ್ಟೇ ಸಂಭ್ರಮ ಅಡ್ವಾಣಿಯವರಿಗೆ ‘ಭಾರತ ರತ್ನ’ ಘೋಷಣೆಯಾಗಿರುವ ಬಗ್ಗೆಯೂ ಸಂಭ್ರಮವಾಗಿದೆ ಎಂದು ಕಲ್ಕೂರ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಹರಿಪಾದ ಸೇರಿದ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರ ಪರಮ ಆಪ್ತ, ಶತಮಾನದ ರಾಜಕೀಯ ಭೀಷ್ಮ, ಉಡುಪಿ ಶ್ರೀಕೃಷ್ಣ ಮುಖ್ಯಪ್ರಾಣನ ಪರಮ ಭಕ್ತ, ಲಾಲ್‌ಕೃಷ್ಣ ಅಡ್ವಾಣಿಯವರಿಗೆ ‘ಭಾರತ ರತ್ನ’ ಗೌರವ ಲಭಿಸಿರುವುದು ಸಂಭ್ರಮದ ಸಂಗತಿ ಎಂದು ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದಾರೆ. ಪೇಜಾವರ ಹಿರಿಯ ಯತಿಗಳಾಗಿದ್ದ ಶ್ರೀವಿಶ್ವೇಶತೀರ್ಥರ ಜತೆ ಓಡಾಟ ನಡೆಸುತ್ತಿದ್ದ ಪ್ರದೀಪ್ ಕುಮಾರ್ ಕಲ್ಕೂರ ಅವರು ಆಡ್ವಾಣಿ ಅವರು ಶ್ರೀವಿಶ್ವೇಶತೀರ್ಥರ ಜತೆಗಿನ ನಿಕಟ ಸಂಪರ್ಕ ಕುರಿತು ಪ್ರಸ್ತಾಪಿಸಿದ್ದಾರೆ. ಈ ಹಿಂದೆ ಪೇಜಾವರ ಶ್ರೀ ವಿಶ್ವೇಶತೀರ್ಥರ ೪ನೇ ಪರ್ಯಾಯದ ಅವಧಿಯಲ್ಲಿ ನಾನು ಪರ್ಯಾಯ ಸಮಿತಿ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಆಡ್ವಾಣಿ ಅವರು ಉಡುಪಿಗೆ ಭೇಟಿ ನೀಡಿದ್ದರು. ಅಟಲ್ ಬಿಹಾರಿ ವಾಜಪೇಯಿಯವರು ದೇಶದ ಪ್ರಧಾನಿಯಾಗಿದ್ದ ಅಂದಿನ ದಿನಮಾನದಲ್ಲಿ ಉಪ ಪ್ರಧಾನಿಯಾಗಿದ್ದ ಆಡ್ವಾಣಿ ಉಪಸ್ಥಿತಿಯಲ್ಲಿ ಉಡುಪಿ ರಥಬೀದಿಯ ಬೃಹತ್ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಕನಕ ಜಯಂತಿಯ ವಿದ್ಯಮಾನಗಳನ್ನು ಕಲ್ಕೂರ ಸ್ಮರಿಸಿದ್ದಾರೆ.ಝೆಡ್‌ಪ್ಲಸ್ ಭದ್ರತೆಯಲ್ಲಿ ಸಭಾ ಕಾರ್ಯಕ್ರಮ ನಡೆಯುತ್ತಿರುವಾಗ ಛಾಯಾಗ್ರಾಹಕರೊಬ್ಬರು ಫೋಟೋ ಕ್ಲಿಕ್ಕಿಸಲು ಪ್ರಯತ್ನಿಸುತ್ತಿರುವುದನ್ನು ವೇದಿಕೆಯಿಂದಲೇ ಗಮನಿಸಿದ್ದ ಅಡ್ವಾಣಿಯವರು, ನನ್ನನ್ನು ಹತ್ತಿರ ಕರೆದು ಛಾಯಾಗ್ರಾಹಕನನ್ನು ವೇದಿಕೆಗೆ ಬರಲು ಅವಕಾಶ ಮಾಡಿಕೊಡುವಂತೆ ಸೂಚಿಸಿದ್ದರು. ತನ್ನ ಸಂಪೂರ್ಣ ಜವಾಬ್ದಾರಿಯಿಂದ ಭದ್ರತಾ ಸಿಬ್ಬಂದಿಯ ಮನವೊಲಿಸಿ ಛಾಯಾಗ್ರಾಹಕರನ್ನು ವೇದಿಕೆಗೆ ಕರೆತಂದ ಕ್ಷಣಗಳನ್ನೂ ಕಲ್ಕೂರ ನೆನಪಿಸಿಕೊಂಡಿದ್ದಾರೆ.ಆಡ್ವಾಣಿಯವರು ವೇದಿಕೆಗೆ ಆಗಮಿಸಿದ ಛಾಯಾಗ್ರಾಹಕನನ್ನು ಉದ್ದೇಶಿಸಿ, ‘ಆಪ್ ತೋ ಛಾಯಾಗ್ರಾಹಕ್ ಹೈ, ಹಮಾರೆ ಪೀಚೇಸೆ ಪೂರಾ ಸಭಾಂಗಣ್‌ಕ ಫೋಟೋ ಕೀಂಚೊ...’ ಎಂದಿದ್ದರು. ಅಲ್ಲದೆ ‘Photo shoot speak about the event, not about me’ ಸಭೆಯ ಪೂರ್ತಿ ಸನ್ನಿವೇಶವನ್ನು ಚಿತ್ರಿಸಬೇಕಲ್ಲದೆ, ಕೇವಲ ನನ್ನನ್ನೇ ಕೇಂದ್ರವಾಗಿರಿಸಿ ಫೋಟೋ ತೆಗೆಯಬೇಡಿ ಎನ್ನುವ ಕಿವಿ ಮಾತು ನೀಡಿರುವುದು ಅವರಲ್ಲಿದ್ದ ಛಾಯಾಗ್ರಹಣ ಕುರಿತಾದ ಸೂಕ್ಷ ಗ್ರಾಹ್ಯವನ್ನು ವ್ಯಕ್ತಪಡಿಸುತ್ತದೆ ಎಂಬುದಾಗಿ ಕಲ್ಕೂರ ನೆನಪಿಸಿಕೊಂಡಿದ್ದಾರೆ.ಉಡುಪಿಯ ಬಗ್ಗೆ ನಂಟನ್ನು ಇರಿಸಿಕೊಂಡಿದ್ದ ಅಡ್ವಾಣಿಯವರು ಪೇಜಾವರ ಶ್ರೀಗಳ ೫ನೇ ಪರ್ಯಾಯೋತ್ಸವದಲ್ಲೂ ಪಾಲ್ಗೊಂಡಿದ್ದರು, ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರತಿಷ್ಠೆಯು ಭಾರತೀಯರಿಗೆ ಎಷ್ಟು ಸಂಭ್ರಮವನ್ನು ಉಂಟುಮಾಡಿದೆಯೋ ಅಷ್ಟೇ ಸಂಭ್ರಮ ಅಡ್ವಾಣಿಯವರಿಗೆ ‘ಭಾರತ ರತ್ನ’ ಘೋಷಣೆಯಾಗಿರುವ ಬಗ್ಗೆಯೂ ಸಂಭ್ರಮವಾಗಿದೆ ಎಂದು ಕಲ್ಕೂರ ತಿಳಿಸಿದ್ದಾರೆ.