ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ ಪರಿಹರಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜಿಸಲಾಗಿದೆ. ಸರ್ಕಾರದ ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು.

ಕುಂದಗೋಳ:

ತಾಲೂಕಿನ ಸಂಶಿ ಗ್ರಾಮದ ವಾಲ್ಮೀಕಿ ಭವನದಲ್ಲಿ ಶನಿವಾರ ಶಾಸಕ ಎಂ.ಆರ್‌. ಪಾಟೀಲ ನೇತೃತ್ವದಲ್ಲಿ ನಡೆದ ಸಂಶಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸಾರ್ವಜನಿಕರಿಂದ 70 ಅರ್ಜಿ ಸ್ವೀಕರಿಸಲಾಯಿತು. ಆದರೆ, ಸಭೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಆಲಿಸಿ ಪರಿಹರಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜಿಸಲಾಗಿದೆ. ಸರ್ಕಾರದ ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ಆರ್‌. ಪಾಟೀಲ ಹೇಳಿದರು.

ಸಭೆಯಲ್ಲಿ ಹೆಸ್ಕಾಂ ಇಲಾಖೆಯ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಸಿಬ್ಬಂದಿ ಕೊರತೆಯಿಂದ ನೂರಾರು ಸಮಸ್ಯೆಗಳು ಎದುರಾಗುತ್ತಿದ್ದು, ಅಧಿಕಾರಿಗಳು ದೂರವಾಣಿ ಕರೆಗಳಿಗೂ ಸ್ಪಂದಿಸುತ್ತಿಲ್ಲ. ಹೋಬಳಿ ಮಟ್ಟದ ಸಭೆಗೆ ಸಂಬಂಧಪಟ್ಟ ತಾಲೂಕು ಮಟ್ಟದ ಹೆಸ್ಕಾಂ ಅಧಿಕಾರಿಗಳು ಗೈರಾಗಿದ್ದಾರೆಂದು ಜನರು ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ ಉಪವಿಭಾಗಾಧಿಕಾರಿ ಪ್ರಭಾವತಿ ಮಾತನಾಡಿ, ಸಭೆ ನಡೆದ ಸ್ಥಳ ಇಕ್ಕಟ್ಟಾಗಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಮುಂದಿನ ಸಭೆಗಳಲ್ಲಿ ಬಯಲು ಪ್ರದೇಶದಲ್ಲಿ ಪೆಂಡಾಲ್‌, ಗಾಳಿ-ಬೆಳಕು, ಕುಡಿಯುವ ನೀರು ಹಾಗೂ ಇಲಾಖಾವಾರು ಪ್ರತ್ಯೇಕ ಕೌಂಟರ್‌ ವ್ಯವಸ್ಥೆ ಮಾಡಲಾಗುವುದು ಎಂದರು. ಸಭೆಯ ಮಧ್ಯದಲ್ಲಿ ವಿದ್ಯುತ್ ಹಾಗೂ ಸರ್ವರ್ ಸಮಸ್ಯೆ ಉಂಟಾಗಿದ್ದರಿಂದ ಮುಂದಿನ ಬಾರಿ ಇಂತಹ ಲೋಪವಾಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಮ್ಮ ಹೊಲ ನಮ್ಮ ದಾರಿ, ಕುಡಿಯುವ ನೀರು, ಹೈಮಾಸ್ಟ್‌ ಕಂಬಗಳ ದುರಸ್ತಿ, ಪಿಂಚಣಿ, ವಿಧವಾ ವೇತನ, ಹೆಸ್ಕಾಂ, ಆರೋಗ್ಯ ಹಾಗೂ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಸಲ್ಲಿಕೆಯಾದವು.

ಸಭೆಯಲ್ಲಿ ತಹಸೀಲ್ದಾರ್ ರಾಜು ಮಾವರಕರ, ಕುಂದಗೋಳ ಪಿಎಸ್‌ಐ ಶರಣಬಸಪ್ಪ ಸಂಗಳದ, ಗುಡಗೇರಿ ಠಾಣೆಯ ಪಿಎಸ್‌ಐ ಪ್ರವೀಣ ನೇಸರ್ಗಿ, ಉಪತಹಸೀಲ್ದಾರ್ ಮಹಾಂತೇಶ ಮುಗದುಮ, ಕಂದಾಯ ನಿರೀಕ್ಷಕ ಎಸ್.ವೈ. ಕರಿಗಾರ, ಅಶೋಕ ಮಲ್ಲೂರ, ಗ್ರಾಮ ಲೆಕ್ಕಾಧಿಕಾರಿ ಚೈತ್ರಾ ಕೆ. ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರಿದ್ದರು.