ಸಾರಾಂಶ
ಪೆನ್‌ಡ್ರೈವ್ ಹಗರಣ ಖಂಡಿಸಿ ಮೇ 30ರಂದು ಹಾಸನ ಚಲೋ ಚಳವಳಿಯಲ್ಲಿ ಸಿಂಧನೂರಿನಿಂದ 100ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಳ್ಳಲಿದ್ದಾರೆ
ಕನ್ನಡಪ್ರಭ ವಾರ್ತೆ ಸಿಂಧನೂರು
ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಪೆನ್‌ಡ್ರೈವ್ ಹಗರಣ ಖಂಡಿಸಿ ಮೇ 30ರಂದು ಹಾಸನ ಚಲೋ ಚಳವಳಿಯಲ್ಲಿ ಸಿಂಧನೂರಿನಿಂದ 100ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಳ್ಳಲಿದ್ದಾರೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತಾಲೂಕು ಘಟಕದ ಅಧ್ಯಕ್ಷೆ ಶಕುಂತಲಾ ಪಾಟೀಲ್ ಹೇಳಿದರು.ಅವರು ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ಸುಮಾರು 2900 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ವಿಡಿಯೋಗಳಿರುವ ಪೆನ್‌ಡ್ರೈವ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದರಿಂದ್ದ ಕರ್ನಾಟಕ ರಾಜ್ಯವಷ್ಟೇ ಅಲ್ಲ, ಇಡೀ ದೇಶವೇ ತಲೆತಗ್ಗಿಸುವಂತಾಗಿದೆ. ಆ ವಿಡಿಯೋಗಳಲ್ಲಿರುವ ಮಹಿಳೆಯರು ಸಮಾಜಕ್ಕೆ ಮುಖ ತೋರಿಸಲಾಗದೆ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಪೆನ್‌ಡ್ರೈವ್ ಸುಳ್ಳು ಎಂದು ಹೇಳುವ ಪ್ರಜ್ವಲ್ ವಿದೇಶಕ್ಕೆ ಓಡಿ ಹೋಗಿರುವುದೇಕೆ ಎಂದು ಪ್ರಶ್ನಿಸಿದರು.
ಈ ವಿಷಯದ ಕುರಿತು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ದಿನಕ್ಕೊಂದು ಹೇಳಿಕೆ ನೀಡಿ, ರಾಜಕೀಯ ಕೆಸರೆರೆಚಾಟ ಮಾಡಿ ಜನರ ದಿಕ್ಕು ತಪ್ಪುಸುವುದು ಒಳ್ಳೆಯದಲ್ಲ. ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವ ಮಹಿಳೆಯರಿಗೆ ಮಾನಸಿಕ ಧೈರ್ಯ ತುಂಬುವ ಹಾಗೂ ಆರೋಪಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ಮೇ 30ರಂದು ಹಾಸನ ಚಲೋ ಚಳವಳಿ ಹಮ್ಮಿಕೊಳ್ಳಲಾಗಿದೆ. ಈ ಹೋರಾಟಕ್ಕೆ ಚಿಂತಕರು, ಬರಹಗಾರರು, ಸಾಹಿತಿಗಳು, ಮಹಿಳಾ ಹೋರಾಟಗಾರರು, ವಿದ್ಯಾರ್ಥಿ, ಯುವಜನರು ಸೇರಿ ಸುಮಾರು 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ. ರಾಯಚೂರು ಜಿಲ್ಲೆಯಿಂದ 300ಜನರು ತೆರಳಿದ್ದೇವೆ. ಇದು ಯಾವುದೇ ಪಕ್ಷದ ಪ್ರೇರಿತ ಹೋರಾಟ ಅಲ್ಲ. ಸಂತ್ರಸ್ತ ಮಹಿಳೆಯರಿಗೆ ಸೂಕ್ತ ರಕ್ಷಣೆ ಹಾಗೂ ಪರಿಹಾರ ನೀಡಬೇಕು ಹಾಗೂ ಆರೋಪಿ ಪ್ರಜ್ವಲ್ ರೇವಣ್ಣಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.ನಂತರ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವಂತರಾಯಗೌಡ ಕಲ್ಲೂರು, ಸಮುದಾಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಕಟ್ಟಡ ಕಾರ್ಮಿಕರ ಸಂಘದ ಸಂಚಾಲಕ ಅನ್ವರ್ಪಾಷಾ, ಮುಖಂಡ ಶಂಕ್ರಪ್ಪ ಕೆಂಗಲ್ ಇದ್ದರು.