ಸಾರಾಂಶ
ದೊಡ್ಡಬಳ್ಳಾಪುರ: ಹಾಸನದ ಸಂಸತ್ ಸದಸ್ಯ ಪ್ರಜ್ವಲ್ ರೇವಣ್ಣನಿಂದ ನಡೆದಿರುವ ವಿಕೃತ ಲೈಂಗಿಕ ಹಗರಣವನ್ನು ವಿರೋಧಿಸಿ ಮೇ 30ರಂದು ನಡೆಯಲಿರುವ ''''''''ಹೋರಾಟದ ನಡಿಗೆ ಹಾಸನದ ಕಡೆಗೆ'''''''' ಬೃಹತ್ ಪ್ರತಿಭಟನೆ ಹಾಗೂ ಬಹಿರಂಗ ಸಭೆ ತಾಲೂಕಿನ ಜನಪರ ಸಂಘಟನೆಗಳಿಂದ ನೂರಾರು ಜನ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ ಸಂಚಾಲಕ ಆರ್.ಚಂದ್ರತೇಜಸ್ವಿ ಹೇಳಿದರು.ನಗರದ ರೈತ ಕಾರ್ಮಿಕರ ಸಂಘದ ಕಚೇರಿಯಲ್ಲಿ ಸಂವಿಧಾನ ರಕ್ಷಣೆಗಾಗಿ ನಾಗರಿಕರ ವೇದಿಕೆ ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ತನ್ನ ರಾಜಕೀಯ ಅಧಿಕಾರ, ಕುಟುಂಬದ ಹಿನ್ನೆಲೆ ಮತ್ತು ಪ್ರಬಲ ಜಾತಿಯ ಅಹಮಿಕೆಯನ್ನು ಬಳಸಿಕೊಂಡು ನೂರಾರು ಜನ ಮಹಿಳೆಯರ ಮೇಲೆ ಪ್ರಭಾವ ಬೀರಿ,ಒತ್ತಡ ಹಾಕಿ ಬಳಸಿಕೊಂಡಿರುವುದು ಹೀನ ಕೃತ್ಯವಾಗಿದೆ. ಪ್ರಜ್ವಲ್ ರೇವಣ್ಣ ಇಂತಹ ನೀಚ ಕೃತ್ಯದಲ್ಲಿ ಭಾಗಿಯಾಗಿರುವ ಕುರಿತು ಅರಿವಿದ್ದರೂ ಲೋಕಸಭಾ ಚುನಾವಣೆಯಲ್ಲಿ ಆತನನ್ನೇ ಮತ್ತೆ ಹಾಸನ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿದ ಬಿಜೆಪಿ ಮತ್ತು ಜೆಡಿಎಸ್ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ನಡೆ ತೀವ್ರ ಖಂಡನೀಯ ಎಂದರು.
ಮತದಾರರ ಮೇಲೆ ಪ್ರಭಾವ ಬೀರುವ ದುರುದ್ದೇಶದಿಂದ ಅಭ್ಯರ್ಥಿ ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಮತ್ತು ಚಿತ್ರಗಳನ್ನು ಪೆನ್ ಡ್ರೈವ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಹಂಚಿರುವುದು ಮತ್ತು ದೌರ್ಜನ್ಯಕ್ಕೊಳಗಾದ ಮಹಿಳೆಯರ ಗೌಪ್ಯತೆ ಮತ್ತು ಘನತೆಯನ್ನು ಸಾರ್ವಜನಿಕವಾಗಿ ಹಾಳು ಮಾಡಿರುವುದು ಸಹ ಅತ್ಯಂತ ಖಂಡನೀಯ ಕೃತ್ಯವಾಗಿದೆ. ಹಾಸನದ ಬಿಜೆಪಿ ಮುಖಂಡ ಜಿ.ದೇವರಾಜೇಗೌಡ ಮಾಧ್ಯಮಗಳ ಮುಖಾಂತರ ಹಲವು ತಿಂಗಳ ಹಿಂದೆಯೇ ಮತ್ತೆ ಮತ್ತೆ ಪ್ರಸ್ತಾಪ ಮಾಡಿದ್ದರು. ಆ ತಕ್ಷಣವೇ ಅವರನ್ನು ಮತ್ತು ಪ್ರಜ್ವಲ್ ರೇವಣ್ಣ ಕಾರಿನ ಮಾಜಿ ಚಾಲಕ ಕಾರ್ತಿಕ್ ಇಬ್ಬರನ್ನು ಬಂಧಿಸಿ ಹೆಚ್ಚಿನ ವಿಡಿಯೋಗಳು ಹಂಚಿಕೆಯಾಗದಂತೆ ತಡೆಯುವುದರಲ್ಲಿ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿರುವು ಈ ಸಾಮಾಜಿಕ ತಲ್ಲಣಕ್ಕೆ ಕಾರಣವಾಗಿದೆ ಎಂದರು.ಸಂಕೀರ್ಣ ಹಾಗೂ ಅಸಾಮಾನ್ಯ ಲೈಂಗಿಕ ದೌರ್ಜನ್ಯ ಹಗರಣ ಆಗಿರುವುದರಿಂದ ಈ ಪ್ರಕರಣದಲ್ಲಿ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಹಾಗೂ ಸಂತ್ರಸ್ತರು ನೇರವಾಗಿ ಎಸ್ಐಟಿ ಮುಂದೆ ಹಾಜರಾಗಲು ಹಿಂಜರಿಯುತ್ತಿದ್ದಾರೆ. ಅದ್ದರಿಂದ ಎಸ್ಐಟಿ ಯೇ ನೇರವಾಗಿ ಇವರನ್ನು ಸಂಪರ್ಕಿಸಿ ಅವರಲ್ಲಿ ಧೈರ್ಯ ತುಂಬಬೇಕು. ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಒದಗಿಸಿ ಅವರ ಗೌಪ್ಯತೆ ಕಾಪಾಡುವ ಹಾಗೂ ಅಗತ್ಯ ನೆರವು ನೀಡುವ ಭರವಸೆಯನ್ನು ಸರ್ಕಾರ ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ಈ ಕೃತ್ಯದ ಬಗ್ಗೆ ಅಧಿಕೃತ ಮಾಹಿತಿ ಇದ್ದರೂ ಮೌನವಾಗಿರುವ ಬಿಜೆಪಿಗೆ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯಕ್ಕಿಂತ ಜೆಡಿಎಸ್ ಮೈತ್ರಿಯಿಂದ ಆಗಬಹುದಾದ ರಾಜಕೀಯ ಲಾಭವಷ್ಟೇ ಮುಖ್ಯವಾಗಿದೆ. ಪ್ರಜ್ವಲ್ ರೇವಣ್ಣನನ್ನು ಬಂಧಿಸಲು ಕೇಂದ್ರ ಸರ್ಕಾರ ಅನುಸರಿಸಬೇಕಾದ ರಾಜತಾಂತ್ರಿಕ ಕ್ರಮಗಳನ್ನು ಅನುಸರಿಸದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಈ ಹಗರಣದ ದಿಕ್ಕುತಪ್ಪಿಸುವ ಉದ್ದೇಶದಿಂದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಡ ಹೇರುತ್ತಿವೆ. ಕಾಂಗ್ರೆಸ್ ಕೂಡ ಈ ಕೆಸರೆರಚಾಟದಲ್ಲಿ ತೊಡಗಿರುವುದು ಹಗರಣದ ಗಂಭೀರತೆಗೆ ಧಕ್ಕೆ ತರುತ್ತಿದೆ ಎಂದು ದೂರಿದರು.ಪೂರ್ವಭಾವಿ ಸಭೆಯಲ್ಲಿ ಸಂವಿಧಾನ ರಕ್ಷಣೆಗಾಗಿ ನಾಗರೀಕ ವೇದಿಕೆ ಸಂಚಾಲಕ ರಾಜುಸಣ್ಣಕ್ಕಿ, ಸಿಪಿಐಎಂ ತಾಲ್ಲೂಕು ಕಾರ್ಯದರ್ಶಿ ರುದ್ರಾರಾಧ್ಯ,ಕನ್ನಡ ಪಕ್ಷದ ಮುಖಂಡ ಸಂಜೀವನಾಯಕ, ಮುನಿಪಾಪಯ್ಯ, ಕಾರ್ಮಿಕ ಮುಖಂಡರಾದ ಪಿ.ಎ.ವೆಂಕಟೇಶ್, ಮಾನವ ಬಂಧುತ್ವ ವೇದಿಕೆಯ ವೆಂಕಟೇಶ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾಧ್ಯಕ್ಷ ಶಿವಶಂಕರ್ ಇತರರಿದ್ದರು.
25ಕೆಡಿಬಿಪಿ2-ದೊಡ್ಡಬಳ್ಳಾಪುರದಲ್ಲಿ ಸಂವಿಧಾನ ರಕ್ಷಣೆಗಾಗಿ ನಾಗರೀಕ ವೇದಿಕೆ ನೇತೃತ್ವದಲ್ಲಿ ಹೋರಾಟದ ನಡಿಗೆ ಹಾಸನದ ಕಡೆಗೆ ಅಭಿಯಾನದ ಪೂರ್ವ ಸಿದ್ದತಾಸಭೆ ನಡೆಯಿತು.