ಸಾರಾಂಶ
ಹಾಸನ : ತನ್ನ ಮೇಲೆ ಎಚ್.ಡಿ.ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಸಂತ್ರಸ್ತ ಮಹಿಳೆಯ ಅತ್ತೆಯೇ ಇದೀಗ ರೇವಣ್ಣ ಹಾಗೂ ಪ್ರಜ್ವಲ್ ಪರ ನಿಂತಿದ್ದು, ತನ್ನ ಸೊಸೆಯೇ ಸರಿಯಿಲ್ಲ. ರೇವಣ್ಣ, ಪ್ರಜ್ವಲ್ ಹಾಗೂ ಭವಾನಿ ಅಕ್ಕನವರು ದೇವರಿದ್ದಂತೆ ಎಂದು ಹೇಳಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಸಂತ್ರಸ್ತ ಮಹಿಳೆಯ ಅತ್ತೆ ಗೌರಮ್ಮ (ಪತಿಯ ತಾಯಿ), ‘ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲು ಮಾಡಿರುವ ಸಂತ್ರಸ್ತೆ ಈ ಹಿಂದೆ ಸಾಲ ಮಾಡಿಕೊಂಡಿದ್ದಳು. ಆ ವೇಳೆ ಸಾಲ ಕೊಟ್ಟವರ ಜೊತೆಗೆ ಗಲಾಟೆ ಮಾಡುತ್ತಿದ್ದರು. ಅದಾದ ಬಳಿಕ ಭವಾನಿ ರೇವಣ್ಣ ಅವರ ಮನೆಯಲ್ಲಿ ನಾಲ್ಕು ವರ್ಷ ಮನೆ ಕೆಲಸ ಮಾಡಿದ್ದಾರೆ. ಆ ಸಮಯದಲ್ಲಿ ಆಕೆಯನ್ನು ಭವಾನಿ, ರೇವಣ್ಣ ಹಾಗೂ ಪ್ರಜ್ವಲ್ ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ಅವರ ಮನೆಯಲ್ಲಿ ಕೆಲಸ ಬಿಟ್ಟು ಹೋಗಿದ್ದಾಳೆ. ಅದಾದ ಬಳಿಕ ಇಷ್ಟು ದಿನ ಕಳೆದರೂ ದೂರು ನೀಡದ ಮಹಿಳೆ, ಚುನಾವಣೆ ವೇಳೆ ಯಾರದೋ ಮಾತು ಕೇಳಿಕೊಂಡು ದೇವೇಗೌಡರ ಕುಟುಂಬದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾಳೆ’ ಎಂದು ದೂರಿದರು.
‘ಕೆಲಸಕ್ಕೆ ಬಂದ ಐದು ವರ್ಷದ ಹಿಂದೆಯೇ ಆರೋಪ ಮಾಡಬಹುದಿತ್ತು. ಆದರೆ, ಚುನಾವಣೆ ಸಂದರ್ಭದಲ್ಲಿ ಮಾಡಿರುವುದು ಸುಳ್ಳು ಆರೋಪ. ಬೇಕಾದರೆ ಶ್ರೀ ಮಂಜುನಾಥ ಸ್ವಾಮಿಯ ಮೇಲೆ ಆಣೆ ಮಾಡಲು ನಾವು ಸಿದ್ಧ’ ಎಂದು ಹೇಳಿದರು. ‘ವಿಡಿಯೋ ಮಿಕ್ಸಿಂಗ್ ಮಾಡಿರಬಹುದು. ಇದು ಸತ್ಯವಲ್ಲ. ಹತ್ತಿರದಿಂದ ನೋಡಿರುವ ನಾವು ಅವರ ಬಗ್ಗೆ ತಿಳಿದುಕೊಂಡಿದ್ದೇವೆ’ ಎಂದು ಸ್ಪಷ್ಟಪಡಿಸಿದರು. ಎಚ್.ಡಿ.ರೇವಣ್ಣರ ಸಂಬಂಧಿಕರಾದ ಜಯಂತಿ, ಶಿಲ್ಪ, ವಕೀಲರಾದ ಗೋಪಾಲ್, ರಾಧ, ಜ್ಯೋತಿ, ಮಂಜುನಾಥ್ ಇದ್ದರು.