ಪ್ರಸಾದ, ವಿನಯಗೆ ನಿಗಮ ಮಂಡಳಿ ಅಧ್ಯಕ್ಷಗಿರಿ

| Published : Jan 27 2024, 01:15 AM IST

ಸಾರಾಂಶ

ಇದೀಗ ಸರ್ಕಾರ ನಿಗಮ ಮಂಡಳಿಗಳಿಗೆ ಶಾಸಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಇನ್ನೆರಡು ದಿನಗಳಲ್ಲಿ ಕಾರ್ಯಕರ್ತರನ್ನು ನೇಮಕ ಮಾಡಿದ ಆದೇಶ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಯಾವ ಕಾರ್ಯಕರ್ತರಿಗೆ ಲಕ್‌ ಹೊಡೆಯುತ್ತದೆ ಎಂಬ ನಿರೀಕ್ಷೆಯಿದೆ.

ಹುಬ್ಬಳ್ಳಿ: ರಾಜ್ಯ ಸರ್ಕಾರ ಅಂತೂ ಇಂತೂ ನಿಗಮಮಂಡಳಿಗೆ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಧಾರವಾಡ ಜಿಲ್ಲೆಯ ಧಾರವಾಡ ಗ್ರಾಮಾಂತರ ಶಾಸಕ ವಿನಯ ಕುಲಕರ್ಣಿ ಹಾಗೂ ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ನಿಗಮ ಮಂಡಳಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವಿನಯ ಕುಲಕರ್ಣಿ ಮೂರನೆಯ ಬಾರಿ ಶಾಸಕರಾದವರು. ಜಿಪಂ ಸದಸ್ಯ ಯೋಗೇಶಗೌಡ ಹತ್ಯೆ ಪ್ರಕರಣದ ಆರೋಪ ಎದುರಿಸುತ್ತಿರುವ ವಿನಯ ಧಾರವಾಡ ಜಿಲ್ಲೆಗೆ ಪ್ರವೇಶ ನಿಷೇಧವಿದೆ. ಆದರೂ ಕ್ಷೇತ್ರದ ಹೊರಗಿದ್ದುಕೊಂಡೇ ಚುನಾವಣೆ ಗೆದ್ದ ಹಿರಿಮೆ ಇವರದು. ಈಗಲೂ ಜಿಲ್ಲೆಗೆ ಬರಲು ಇವರಿಗೆ ಅವಕಾಶವಿಲ್ಲ. ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಆರೋಪ ಎದುರಿಸುತ್ತಿರುವ ಕಾರಣ ಸಚಿವ ಸ್ಥಾನ ಕೊಟ್ಟರೆ ಸರ್ಕಾರಕ್ಕೆ ಮುಜುಗರವಾಗುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಸಚಿವಗಿರಿ ಕೊಟ್ಟಿರಲಿಲ್ಲ ಎಂದು ಹೇಳಲಾಗಿದೆ. ಆದರೆ ಇದೀಗ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನೇಮಕ ಮಾಡಿದೆ. ಈ ಬಗ್ಗೆ ಅವರಿಗೂ ಯಾವುದೇ ಅಸಮಾಧಾನವಿಲ್ಲ.

ಕೊಳಚೆ ಅಭಿವೃದ್ಧಿ ಮಂಡಳಿಗೆ ಅಬ್ಬಯ್ಯ: ಇನ್ನು ಮೂರು ಬಾರಿ ಸತತ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಗೆಲವು ಸಾಧಿಸಿರುವ ಪ್ರಸಾದ ಅಬ್ಬಯ್ಯಗೂ ಕರ್ನಾಟಕ ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿದೆ. ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರಿಂದ ಸಹಜವಾಗಿ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಅದಕ್ಕೆ ತಕ್ಕಂತೆ ಅಬ್ಬಯ್ಯ ಕೂಡ ಪ್ರಯತ್ನ ನಡೆಸಿದ್ದರು. ಆದರೆ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ಜಾಸ್ತಿ ಇದ್ದುದ್ದರಿಂದ ಇವರಿಗೆ ಸಚಿವಗಿರಿ ಸಿಗಲಿಲ್ಲ. ಇದೀಗ ಸರ್ಕಾರ ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿದೆ. ಈ ಮೂಲಕ ಸಮಾಧಾನ ಪಡಿಸುವ ಪ್ರಯತ್ನ ಮಾಡಿದೆ. ಜಿಲ್ಲೆಯ ಇಬ್ಬರು ಶಾಸಕರು ಅನುಭವ ಅರ್ಹತೆ ಇದ್ದವರೇ. ಇಬ್ಬರಿಗೂ ಅವರ ಅನುಭವಕ್ಕೆ ತಕ್ಕಂತೆ ಸರ್ಕಾರ ಮಣೆ ಹಾಕಿದೆ.

ಯಾರಿಗೆ ಲಕ್‌ : ಇದೀಗ ಸರ್ಕಾರ ನಿಗಮ ಮಂಡಳಿಗಳಿಗೆ ಶಾಸಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಇನ್ನೆರಡು ದಿನಗಳಲ್ಲಿ ಕಾರ್ಯಕರ್ತರನ್ನು ನೇಮಕ ಮಾಡಿದ ಆದೇಶ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಯಾವ ಕಾರ್ಯಕರ್ತರಿಗೆ ಲಕ್‌ ಹೊಡೆಯುತ್ತದೆ ಎಂಬ ನಿರೀಕ್ಷೆಯಿದೆ.

ಬಲ್ಲ ಮೂಲಗಳ ಪ್ರಕಾರ ಮಾಜಿ ಸಂಸದ ಐ.ಜಿ. ಸನದಿ ಅವರ ಪುತ್ರ ಶಾಕೀರ ಸನದಿ ಹಾಗೂ ಯುವ ಮುಖಂಡ ವಿನೋದ ಅಸೂಟಿ ಹೆಸರು ಮುಂಚೂಣಿಗೆ ಬಂದಿವೆ. ಶಾಕೀರ ಸನದಿ ಕಳೆದ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ಕೇಳಿದ್ದರು. ಜತೆಗೆ ವಿಧಾನಸಭೆ ಚುನಾವಣೆಯಲ್ಲಿ ಸೆಂಟ್ರಲ್‌ ಕ್ಷೇತ್ರ ಅಥವಾ ಶಿಗ್ಗಾವಿ ಸವಣೂರ ಕ್ಷೇತ್ರದಲ್ಲಾದರೂ ಟಿಕೆಟ್‌ ಕೊಡಿ ಎಂದು ಕೇಳಿದ್ದರು. ಆದರೆ ಲೋಕಸಭೆ- ವಿಧಾನಸಭೆಯಲ್ಲೂ ಟಿಕೆಟ್‌ ಸಿಕ್ಕಿರಲಿಲ್ಲ. ಹೀಗಾಗಿ ಇದೀಗ ದೆಹಲಿ ಮಟ್ಟದಲ್ಲೇ ಪ್ರಭಾವ ಹೊಂದಿರುವ ಶಾಕೀರಗೆ ಇದೀಗ ನಿಗಮ ಮಂಡಳಿಯಲ್ಲಿ ಮಣೆ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ವಿನೋದ ಅಸೂಟಿ ಕಳೆದ ಚುನಾವಣೆಯಲ್ಲಿ ನವಲಗುಂದ ಕ್ಷೇತ್ರವನ್ನು ಜೆಡಿಎಸ್‌ನಿಂದ ಬಂದಿದ್ದ ಎನ್‌.ಎಚ್‌. ಕೋನರಡ್ಡಿ ಅವರಿಗೆ ಬಿಟ್ಟು ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ನಿಗಮಮಂಡಳಿಯಲ್ಲಿ ಮಣಿ ಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಆದರೂ ಪಟ್ಟಿ ಬಿಡುಗಡೆಯಾದ ಬಳಿಕವೇ ಈ ಬಗ್ಗೆ ತಿಳಿದು ಬರಲಿದೆ.