ಸಾರಾಂಶ
ಪಕ್ಷದಲ್ಲಿದ್ದಾಗ ಅಂತಹದ್ಯಾವುದು ಇರಲ್ಲ. ಅವರು ಕಾಂಗ್ರೆಸ್‌ನಲ್ಲಿದ್ದರು, ಹೀಗಾಗಿ ಟೀಕೆ ಮಾಡುತ್ತಿದ್ದರು. ನಾವು ಟೀಕೆ ಮಾಡುತ್ತಿದ್ದೇವು. ಬೇರೆ ಬೇರೆ ಪಕ್ಷದಲ್ಲಿದ್ದಾಗ ಟೀಕೆ ಮಾಡುವುದು ಸಹಜ. ಈಗ ಶೆಟ್ಟರ್ ಅವರು ಪಕ್ಷ ಸೇರಿದ್ದಾರೆ. ಎಲ್ಲರೂ ಕೂಡಿಯೇ ಇರುತ್ತೇವೆ. ಎಲ್ಲರೂ ಸೇರಿಕೊಂಡು ಲೋಕಸಭೆ ಚುನಾವಣೆ ಎದುರಿಸುತ್ತೇವೆ
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿಗೆ ಬಂದಿರುವುದನ್ನು ಸ್ವಾಗತಿಸುತ್ತೇನೆ. ನಮ್ಮನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡೇ ಶೆಟ್ಟರ್ ರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ತೀರ್ಮಾನವನ್ನು ನಾವೆಲ್ಲ ಸ್ವಾಗತಿಸುತ್ತೇವೆ ಎಂದರು.ಶೆಟ್ಟರ್ ಅವರನ್ನು ಲೋಕಸಭೆಗೆ ಸ್ಪರ್ಧಿಸಬೇಕೋ ಬೇಡವೋ, ಸ್ಪರ್ಧಿಸುವುದಾದರೆ ಯಾವ ಕ್ಷೇತ್ರದಿಂದ ಟಿಕೆಟ್ ಕೊಡಬೇಕು ಎಂಬುದನ್ನೆಲ್ಲ ಹೈಕಮಾಂಡ್ ನಿರ್ಧರಿಸುತ್ತದೆ. ಅದಕ್ಕೆ ನಾವು ಬದ್ಧರಿರುತ್ತೇವೆ ಎಂದರು.
ಹೈಕಮಾಂಡ್ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಪ್ರಶ್ನೆಗೆ, ನಾಲ್ಕು ಚೌಕಟ್ಟಿನ ನಡುವೆ ಸಂಧಾನ ಅದು. ಮಾತುಕತೆ ನಡೆಯುತ್ತಲೇ ಇರುತ್ತದೆ. ಅವುಗಳನ್ನೆಲ್ಲ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದರು.ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶೆಟ್ಟರ್ ಸೇರ್ಪಡೆ ವೇಳೆ ಭಾಗಿಯಾಗದ ಕುರಿತು ಕೇಳಿದ ಪ್ರಶ್ನೆಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಪಕ್ಷ ನಿರ್ಧಾರ ಮಾಡಿರುತ್ತದೆ ಎಂದು ನುಡಿದರು.
ತಮ್ಮ ಹಾಗೂ ಶೆಟ್ಟರ್ ನಡುವಿನ ಅಸಮಾಧಾನದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿದ್ದಾಗ ಅಂತಹದ್ಯಾವುದು ಇರಲ್ಲ. ಅವರು ಕಾಂಗ್ರೆಸ್‌ನಲ್ಲಿದ್ದರು, ಹೀಗಾಗಿ ಟೀಕೆ ಮಾಡುತ್ತಿದ್ದರು. ನಾವು ಟೀಕೆ ಮಾಡುತ್ತಿದ್ದೇವು. ಬೇರೆ ಬೇರೆ ಪಕ್ಷದಲ್ಲಿದ್ದಾಗ ಟೀಕೆ ಮಾಡುವುದು ಸಹಜ. ಈಗ ಶೆಟ್ಟರ್ ಅವರು ಪಕ್ಷ ಸೇರಿದ್ದಾರೆ. ಎಲ್ಲರೂ ಕೂಡಿಯೇ ಇರುತ್ತೇವೆ. ಎಲ್ಲರೂ ಸೇರಿಕೊಂಡು ಲೋಕಸಭೆ ಚುನಾವಣೆ ಎದುರಿಸುತ್ತೇವೆ ಎಂದರು.