ಸಮಾಜದ ಕಟ್ಟಕಡೆ ವ್ಯಕ್ತಿಗೂ ಸರ್ಕಾರಿ ಸೌಲಭ್ಯ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ

| Published : Jan 27 2024, 01:15 AM IST

ಸಮಾಜದ ಕಟ್ಟಕಡೆ ವ್ಯಕ್ತಿಗೂ ಸರ್ಕಾರಿ ಸೌಲಭ್ಯ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯುವ ಪವಿತ್ರ ಗ್ರಂಥ ಸಂವಿಧಾನ. ಎಂತಹ ಸವಾಲು, ಸಮಸ್ಯೆಗಳು ಎದುರಾದರೂ ಸಂವಿಧಾನದಲ್ಲಿ ಅದಕ್ಕೆ ಪರಿಹಾರೋಪಾಯಗಳಿವೆ. ರಾಷ್ಟ್ರೀಯ ಭಾವೈಕ್ಯತೆ, ಸಹಬಾಳ್ವೆ, ಸೌಹಾರ್ದತೆ ನಮ್ಮೆಲ್ಲರ ಉಸಿರಾಗಬೇಕು. ಯುವ ಜನತೆ ತಮ್ಮ ಹೊಣೆಯನ್ನರಿತು ದುಶ್ಚಟಗಳಿಗೆ ಬಲಿಯಾಗದೇ, ಮಾನವ ಸಂಪನ್ಮೂಲವಾಗಿ ರೂಪುಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ವರಿಗೂ ಸಮಪಾಲು, ಸಮಬಾಳು ತತ್ವದಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯಗಳು ಸಿಗಬೇಕೆಂಬ ಸದುದ್ದೇಶದಿಂದ ನೀಡಿದ್ದ ಐದೂ ಗ್ಯಾರಂಟಿಗಳ ಅನುಷ್ಠಾನಗೊಳಿಸಿ ಸರ್ಕಾರ ನುಡಿದಂತೆ ನಡೆದಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ತೋಟಗಾರಿಕೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ, ಪಾಲಿಕೆಯಿಂದ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಆಕರ್ಷಕ ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿ ಮಾತನಾಡಿ ಪ್ರಜಾಪ್ರಭುತ್ವದ ಆಶಯ ಎತ್ತಿ ಹಿಡಿಯುವ ಪವಿತ್ರ ಗ್ರಂಥ ಸಂವಿಧಾನ. ಎಂತಹ ಸವಾಲು, ಸಮಸ್ಯೆಗಳು ಎದುರಾದರೂ ಸಂವಿಧಾನದಲ್ಲಿ ಅದಕ್ಕೆ ಪರಿಹಾರೋಪಾಯಗಳಿವೆ. ರಾಷ್ಟ್ರೀಯ ಭಾವೈಕ್ಯತೆ, ಸಹಬಾಳ್ವೆ, ಸೌಹಾರ್ದತೆ ನಮ್ಮೆಲ್ಲರ ಉಸಿರಾಗಬೇಕು. ಯುವ ಜನತೆ ತಮ್ಮ ಹೊಣೆಯನ್ನರಿತು ದುಶ್ಚಟಗಳಿಗೆ ಬಲಿಯಾಗದೇ, ಮಾನವ ಸಂಪನ್ಮೂಲವಾಗಿ ರೂಪುಗೊಳ್ಳಬೇಕು. ಸಂವಿಧಾನದ ಆಶಯಗಳ ಬಗ್ಗೆ ಜನ ಸಾಮಾನ್ಯರಿಗೂ ತಿಳಿಸುವ ಉದ್ದೇಶದಿಂದ ಈ ಅಮೃತ ಮಹೋತ್ಸವದಲ್ಲಿ ಫೆ.23ರವರೆಗೆ ಜಿಲ್ಲಾದ್ಯಂತ 194 ಗ್ರಾಪಂಗಳ ಕೇಂದ್ರ ಮತ್ತು 7 ಸ್ಥಳೀಯ ಸಂಸ್ಥೆಗಳ ಕೇಂದ್ರಗಳಿಗೆ ತಲುಪಿ, ಸಂವಿಧಾನದ ಅರಿವು ಜಾಥಾ, ಸ್ತಬ್ಧಚಿತ್ರ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

44 ವಾರಕ್ಕೆ ಆಗುವಷ್ಟು ಮೇವು ಸಂಗ್ರಹ:

ಮಳೆ ತೀವ್ರ ಕೊರತೆಯಿಂದಾಗಿ ಜಿಲ್ಲೆಯ ಎಲ್ಲಾ ತಾಲೂಕುಗಳ ಬರ ಪೀಡಿತವೆಂದು ಘೋಷಿಸಿದೆ. ಆದರೂ, ಜಿಲ್ಲೆಯಲ್ಲಿ 44 ವಾರಕ್ಕೆ ಆಗುವಷ್ಟು ಜಾನುವಾರು ಮೇವು ಸಂಗ್ರಹವಿದೆ. 4,13,888 ತಾಕುಗಳ ಫ್ರೂಟ್ಸ್ ತಂತ್ರಾಂಶದಲ್ಲಿ ಅಳವಡಿಸಿ 74,188 ರೈತರಿಗೆ ಮೊದಲ ಕಂತಾಗಿ ರಾಜ್ಯ ಸರ್ಕಾರ ಪ್ರತಿ ರೈತರಿಗೆ 2 ಸಾವಿರ ಬೆಳೆ ಪರಿಹಾರ ಪಾವತಿಸಿದೆ. ಜನರಿಗೆ ಉದ್ಯೋಗ ನೀಡಲು ಖಾತರಿಯಡಿ ಈವರೆಗೆ 27.35 ಲಕ್ಷ ಮಾನವ ದಿನಗಳನ್ನು ಸೃಜಿಸಿ, ಒಟ್ಟು 114.16 ಕೋಟಿ ಪಾವತಿಸಿದೆ. ₹571 ಕೋಟಿಯಲ್ಲಿ ಕುಡಿಯುವ ನೀರಿನ ಕಾಮಗಾರಿ ಜಿಲ್ಲೆಯಲ್ಲಿ ಸಾಗಿವೆ ಎಂದು ವಿವರಿಸಿದರು.

ತೋಟಗಾರಿಕೆ ಬೆಳೆ, ಸಂಸ್ಕರಣಾ ಘಟಕ, ಶೀತಲಗೃಹ, ನೆರಳು ಪರದೆ ನಿರ್ಮಾಣಕ್ಕಾಗಿ 2326 ಫಲಾನುಭ‍ವಿಗಳಿಗೆ ₹6.25 ಕೋಟಿ ಸಹಾಯಧನ ನೀಡಲಾಗಿದೆ. ಹನಿ ನೀರಾವರಿ ಯೋಜನೆಯಡಿ ಜಿಲ್ಲೆಯ 1165 ರೈತರಿಗೆ ₹7.36 ಕೋಟಿ ಸಹಾಯಧನ ನೀಡಲಾಗಿದೆ. ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ದಿನದ 24 ಗಂಟೆ ನೀರು ಪೂರೈಸುವ ಜಲಸಿರಿ ಕಾಮಗಾರಿ ನಡೆದಿದ್ದು, ಕೆಲ ಬಡಾವಣೆಗಳಿಗೆ ಈಗಾಗಲೇ ನೀರು ಪೂರೈಸಲಾಗುತ್ತಿದೆ. ಮಾರ್ಚ್ ಅಂತ್ಯದೊಳಗೆ ಪಾಲಿಕೆಯ ಎಲ್ಲಾ ವಲಯಗಳಿಗೂ ಜಲಸಿರಿ ನೀರು ಪೂರೈಸಲಾಗುವುದು ಎಂದು ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಹೇಳಿದರು.

ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಪೂರ್ವ ವಲಯ ಐಜಿಪಿ ಡಾ.ಕೆ.ತ್ಯಾಗರಾಜನ್‌, ಜಿಪಂ ಸಿಇಒ ಸುರೇಶ ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ, ಎಸಿ ದುರ್ಗಾಶ್ರೀ, ತಹಸೀಲ್ದಾರ್‌ ಡಾ.ಅಶ್ವತ್ಥ, ದೂಡಾ ಆಯುಕ್ತ ಬಸನಗೌಡ ಕೋಟೂರು, ಪಾಲಿಕೆ ಆಯುಕ್ತೆ ರೇಣುಕಾ, ಸದಸ್ಯರಾದ ಕೆ.ಚಮನ್ ಸಾಬ್‌, ಜಿ.ಎಸ್.ಮಂಜುನಾಥ ಗಡಿಗುಡಾಳ ಇತರರಿದ್ದರು.

.........

ಶಿಸ್ತಿನ ಪಥಸಂಚಲನಗೈದ ತಂಡಗಳಿಗೆ ಪ್ರಶಸ್ತಿ

ಗಣರಾಜ್ಯೋತ್ಸವ ದಿನ ಒಟ್ಟು 27 ತಂಡ ಆಕರ್ಷಕ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದವು. ಈ ಪಥ ಸಂಚಲನದಲ್ಲಿ ಭಾಗಿಯಾದ ಭಾರತ ಸೇವಾದಳ ತಂಡಕ್ಕೆ ಪ್ರಥಮ, ಸಿದ್ದೇಶ್ವರ ಶಾಲೆಯ ತಂಡಕ್ಕೆ ದ್ವಿತೀಯ, ಭಾರತ ಸೇವಾದಳ ತಂಡಕ್ಕೆ ತೃತೀಯ ಬಹುಮಾನ ದೊರಕಿತು. ಬೆಸ್ಟ್ ಎನ್‍ಸಿಸಿ ವಿಭಾಗದಲ್ಲಿ ಶಾಮನೂರು ಶಿವಶಂಕರಪ್ಪ ಶಾಲೆ ತೋಳಹುಣಸೆ ಪ್ರಥಮ, ಪೊಲೀಸ್ ಪಬ್ಲಿಕ್ ಶಾಲೆ ದ್ವಿತೀಯ, ಮೌನೇಶ್ವರ ಕಿವುಡ ಮತ್ತು ಮೂಕರ ಶಾಲೆ ತೃತೀಯ ಬಹುಮಾನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ, ಜಿಎಂಐಟಿ ದ್ವಿತೀಯ, ಸೇಂಟ್ ಪಾಲ್ಸ್ ಶಾಲೆ ತೃತೀಯ, ಬಹುಮಾನ ದೊರಕಿತು. ಬೆಸ್ಟ್ ಡ್ರೆಸ್ ವಿಭಾಗದಲ್ಲಿ ಜೈನ್ ಪಬ್ಲಿಕ್ ಶಾಲೆ ಪ್ರಥಮ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ದ್ವಿತೀಯ, ಶಾಮನೂರು ಶಿವಶಂಕರಪ್ಪ ಶಾಲೆ ತೋಳಹುಣಸೆ ತೃತೀಯ ಸ್ಥಾನ ಲಭಿಸಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಜು ಏಷಿಯಾ ನವೋದಯ ಪ್ರೌಢಶಾಲೆ, ಅಮೃತ ವಿದ್ಯಾಲಯಂ, ಪೋದಾರ್ ಇಂಟರ್ ನ್ಯಾಷನಲ್ ಶಾಲೆ, ಪಿ.ಎಸ್.ಎಸ್.ಇ.ಎಂ.ಆರ್ ತೋಳಹುಣಸೆ ಶಾಲೆಯ ಮಕ್ಕಳ ತಂಡಗಳು ದೇಶಪ್ರೇಮ, ತ್ಯಾಗ, ಬಲಿದಾನದ ಸಾರವನ್ನು ಹೊಂದಿದಂತಹ ನೃತ್ಯರೂಪಕಗಳನ್ನು ಪ್ರದರ್ಶಿಸಿದ್ದು ನೋಡುಗರ ಕಣ್ಮನ ಸೆಳೆಯುವಂತಿತ್ತು.

ಅತ್ಯುತ್ತಮ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸನ್ಮಾನ

ದಾವಣಗೆರೆಯ ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್ ಗೆ ಮೊದಲ ಸ್ಥಾನ, ಸುಕ್ಷೇಮ ಆಸ್ಪತ್ರೆ 2ನೇ ಸ್ಥಾನ, ಕೆರೆಬಿಳಚಿಯ ಸರ್ಕಾರಿ ಆಸ್ಪತ್ರೆಗೆ ಮೂರನೇ ಸ್ಥಾನ, ಹರಿಹರದ ದಾಮೋದರ ಮಂಜುನಾಥ ಸ್ಮಾರಕ ಆಸ್ಪತ್ರೆಗೆ ನಾಲ್ಕನೇ ಸ್ಥಾನ, ಹೊನ್ನಾಳಿಯ ಬಿ.ಎಸ್ ಕ್ಯಾಸನಕೆರೆಯ ಆಸ್ಪತ್ರೆಗೆ ಐದನೇ ಸ್ಥಾನ ನೀಡಲಾಯಿತು. ಸಿದ್ದಗಂಗಾ ಶಾಲೆಯ ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಬರೆದ ಚಿತ್ರವನ್ನು ಸಚಿವ ಎಸ್ಸೆಸ್ ಮಲ್ಲಿಕಾರ್ಜನ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.