ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಸಿದ್ಧಾಪುರ ಗೇಟಿನ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ 2024-25ನೇ ಸಾಲಿನ ಕೊಣನೂರು ಹೋಬಳಿ ಮಟ್ಟದ ಪ್ರೌಢಶಾಲೆಗಳ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಎ.ಮಂಜು ಅವರು ಮಾತನಾಡಿ, ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಅದರಲ್ಲೂ ಗ್ರಾಮೀಣ ಮಕ್ಕಳ ಪ್ರತಿಭೆಯನ್ನು ತೋರಿಸಲು ಒಂದು ಉತ್ತಮ ಅವಕಾಶವಾಗಿದೆ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರಹಾಕಲು ಇದು ಉತ್ತಮ ವೇದಿಕೆಯಾಗಿದೆ. ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ವಿದ್ಯಾಭ್ಯಾಸದ ಬಗೆಗೂ ಹೆಚ್ಚಿನ ಗಮನವನ್ನು ನೀಡಬೇಕು. ಆರು ವರ್ಷದ ಒಳಗಿನ ಮಕ್ಕಳಿಗಾಗಿ ವಿನೂತನ ಯೋಜನೆಯದ ಮಕ್ಕಳಮನೆ ಇಲ್ಲಿನ ಕಲಿಕಾ ಯೋಜನೆಗಳ ಬಗ್ಗೆ ಈ ಸಂದರ್ಭದಲ್ಲಿ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಈ ರೀತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇದರ ಹಿಂದಿನ ಸ್ಫೂರ್ತಿ ಶಿಕ್ಷಕರಾಗಿದ್ದಾರೆ ಅವರು ಮಕ್ಕಳನ್ನು ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೇರಣೆ ನೀಡುತ್ತಿರುವುದು ನೋಡಿ ನನಗೆ ತುಂಬ ಖುಷಿಯಾಗಿದೆ. ಮಕ್ಕಳೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೋಲು ಗೆಲುವನ್ನು ಸಮಾನವಾಗಿ ತೆಗೆದುಕೊಂಡು ಸ್ಪರ್ಧಾ ಸ್ಫೂರ್ತಿಯನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಪಾಲ್ಗೊಳ್ಳಬೇಕೆಂದು ತಿಳಿಸಿದರು.ವೇದಿಕೆಯ ಕಾರ್ಯಕ್ರಮದಲ್ಲಿ ಕಾವೇರಿ ನಿಗಮದ ಅಧ್ಯಕ್ಷರಾದ ಚೌಡೇಗೌಡ ಅವರು ಮಾತನಾಡಿ, ವಿದ್ಯೆಯ ಮಹತ್ವ ಮತ್ತು ಘನತೆ ಗೌರವಗಳನ್ನು ಕಾಪಾಡಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ತಿಳಿವಳಿಕೆ ಮೂಡಿಸಿದರು.ಸರಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಿರಿಜಮ್ಮ, ಕಾವೇರಿ ನಿಗಮದ ಅಧ್ಯಕ್ಷ ಚೌಡೇಗೌಡ, ಸರಗೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಶಿಧರ, ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸ್ವಾಮಿಗೌಡ ಅವರಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮದ ಕೊನೆಯಲ್ಲಿ ಶಾಲಾ ಸಮಾಜ ವಿಜ್ಞಾನ ಶಿಕ್ಷಕರಾದ ರಮೇಶ್‌ರವರು ಕಾರ್ಯಕ್ರಮದ ಸರ್ವರಿಗೂ ವಂದನೆಗಳನ್ನು ಅರ್ಪಿಸಿದರು. ಕಾರ್ಯಕ್ರಮವು ಶಾಲಾ ಆಂಗ್ಲ ಭಾಷಾ ಶಿಕ್ಷಕರಾದ ಪಟೇಲ್‌ರವರ ನಿರೂಪಣೆಯೊಂದಿಗೆ ಅತ್ಯುತ್ತಮವಾಗಿ ಮೂಡಿ ಬಂತು. ಸಭಾ ಕಾರ್ಯಕ್ರಮದ ನಂತರ ಪ್ರತಿಭಾ ಕಾರಂಜಿಯ ಎಲ್ಲಾ ಸ್ಪರ್ಧೆಗಳು ವಿವಿಧ ಕೊಠಡಿಗಳಲ್ಲಿ ಮತ್ತು ವೇದಿಕೆಯ ಮೇಲೆ ಪ್ರಾರಂಭವಾಗಿ ವಿಜೇತರನ್ನು ಪ್ರಶಸ್ತಿ ಪತ್ರ ಮತ್ತು ಬಹುಮಾನಗಳ ವಿತರಣೆಯೊಂದಿಗೆ ಪ್ರಶಂಶಿಸಲಾಯಿತು.
ಸರಗೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸುನೀಲ್, ಬಾನಗುಂದಿ ಮಂಜಣ್ಣ, ಸದಸ್ಯರಾದ ನಾಗರಾಜ್, ಮಾಜಿ ಉಪಾಧ್ಯಕ್ಷರಾದ ಅಣ್ಣಪ್ಪಣ್ಣ, ಹಾಗೂ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ರಾಘವೇಂದ್ರ ಹಾಗೂ ಅನೇಕ ಗಣ್ಯರು ಆಗಮಿಸಿ ಸ್ಪರ್ಧೆಗೆ ಆಗಮಿಸಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಿತನುಡಿಗಳನ್ನು ಹೇಳಿ ಹರಸಿದರು.ಕಾರ್ಯಕ್ರಮಕ್ಕೆ ಸುತ್ತಮುತ್ತಲ ಗ್ರಾಮದ ಅನೇಕ ದಾನಿಗಳು ತಮ್ಮ ತನು, ಮನ, ಧನವನ್ನು ಅರ್ಪಿಸಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಲು ಸಹಕರಿಸಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆ ಸಿದ್ಧಾಪುರ ಗೇಟ್‌ನ ಶಿಕ್ಷಕರಾದ ಸಿದ್ದ ಮಲ್ಲಪ್ಪ, ಪಟೇಲ್ ಎಸ್ ಕೆ, ಲೋಕನಾಥ, ನಟರಾಜ್, ಸವಿತಾ, ಗಿರಿಜಾಂಬ, ಪುರುಷೋತ್ತಮ್, ಪ್ರಾಂಶುಪಾಲ ಮಹೇಶ್ ಮತ್ತು ಸಿಬ್ಬಂದಿ ವರ್ಗ ಹಾಗೂ ಕೊಣನೂರು ಹೋಬಳಿಯ ಎಲ್ಲಾ ಶಾಲೆಗಳಿಂದ ಆಗಮಿಸಿದ್ದ ಮುಖ್ಯ ಶಿಕ್ಷಕರು ಮತ್ತು ತೀರ್ಪುಗಾರರು, ಶಿಕ್ಷಕರು, ಪೋಷಕರು ಹಾಜರಿದ್ದು ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬರಲು ಸಹಕರಿಸಿದರು.