ಸಾರಾಂಶ
ಹಾನಗಲ್ಲ: ಮಕ್ಕಳಲ್ಲಿ ಒಂದಲ್ಲ, ಒಂದು ಪ್ರತಿಭೆ ಅಡಗಿರುತ್ತದೆ. ಅಂಥ ಪ್ರತಿಭೆ ಪ್ರದರ್ಶಿಸಿ, ಹೊರ ಜಗತ್ತಿಗೆ ತೋರಿಸುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆಯಾಗಿದೆ. ವೇದಿಕೆ, ಅವಕಾಶ ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುವಂತೆ ಶಾಸಕ ಶ್ರೀನಿವಾಸ ಮಾನೆ ಕರೆ ನೀಡಿದರು. ಇಲ್ಲಿನ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆಯಲ್ಲಿ ಆಯೋಜಿಸಲಾಗಿದ್ದ ಹಾನಗಲ್ ಉರ್ದು ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಬಾರದು. ತಮ್ಮಲ್ಲಿ ಅಡಗಿರುವ ವಿಭಿನ್ನವಾದ ಜ್ಞಾನ, ಕೌಶಲ್ಯ ಹೊರಹಾಕಬೇಕು. ಅದಕ್ಕಾಗಿ ಪ್ರತಿಭಾ ಕಾರಂಜಿಯಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಶಿಕ್ಷಕರು ಸಹ ಗುರುತಿಸಿ, ಮಾರ್ಗದರ್ಶನ ನೀಡಬೇಕು. ಅಂದಾಗ ಮಾತ್ರ ವ್ಯಕ್ತಿತ್ವದ ವಿಕಸನ ಸಾಧ್ಯವಿದೆ ಎಂದು ಹೇಳಿದ ಅವರು ಸ್ಪರ್ಧೆಗಳಲ್ಲಿ ಸೋಲು, ಗೆಲುವಿಗೆ ಪ್ರಾಮುಖ್ಯತೆ ನೀಡುವುದು ಬೇಡ. ಸೋಲೇ ಗೆಲುವಿನ ಮೆಟ್ಟಿಲಾಗಿ ಪರಿವರ್ತನೆಯಾಗಲಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಫಾರುಖ್‌ಅಹ್ಮದ್ ಸುತಾರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಮಾಜಿ ಅಧ್ಯಕ್ಷರಾದ ಸಯ್ಯದ್‌ಅಹ್ಮದ್‌ಪಾಶಾ ಪೀರಜಾದೆ, ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ಇರ್ಫಾನ್‌ಅಹ್ಮದ್ ಮಿಠಾಯಿಗಾರ, ಖಾಲಿದ್‌ಅಹ್ಮದ್ ಶೇಷಗಿರಿ ಸೇರಿದಂತೆ ಎಸ್‌ಡಿಎಂಸಿ, ಅಂಜುಮನ್ ಇಸ್ಲಾಂ ಸಮಿತಿ ಸದಸ್ಯರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಮಕ್ಕಳ ಬೆಳವಣಿಗೆಯಲ್ಲಿ ಪ್ರತಿಭಾ ಕಾರಂಜಿ, ಕಲೋತ್ಸವದಂತಹ ಕಾರ್ಯಕ್ರಮಗಳು ಸಹಕಾರಿ. ಇವು ನಮ್ಮ ನಾಡಿನ ಕಲೆ, ಸಂಸ್ಕೃತಿ ಬಿಂಬಿಸಲಿವೆ. ಸಿಕ್ಕ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ವ್ಯಕ್ತಿತ್ವ ವಿಕಸಿಸಿಕೊಳ್ಳಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.