ವಿದ್ಯಾರ್ಥಿಗಳ ಸಾಧನೆ ಪ್ರೋತ್ಸಾಹಕ್ಕೆ ಪ್ರತಿಭಾ ಪುರಸ್ಕಾರ: ಡಾ.ಎಂ.ಎನ್‌.ಆರ್‌.

| Published : Jul 21 2024, 01:26 AM IST

ವಿದ್ಯಾರ್ಥಿಗಳ ಸಾಧನೆ ಪ್ರೋತ್ಸಾಹಕ್ಕೆ ಪ್ರತಿಭಾ ಪುರಸ್ಕಾರ: ಡಾ.ಎಂ.ಎನ್‌.ಆರ್‌.
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮದಲ್ಲಿ 37 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನವೋದಯ ಸ್ವಸಹಾಯ ಸಂಘದ ಸದಸ್ಯರ 108 ಮಂದಿ ಮಕ್ಕಳಿಗೆ ಹಾಗೂ ಬ್ಯಾಂಕ್‌ ಸಿಬ್ಬಂದಿಯ 129 ಮಂದಿ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಒಟ್ಟು 274 ಮಂದಿಗೆ 13 ಲಕ್ಷ ರು.ಗಳ ವಿದ್ಯಾರ್ಥಿ ವೇತನ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಶೈಕ್ಷಣಿಕವಾಗಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಸಾಧನೆಯನ್ನು ಪ್ರೋತ್ಸಾಹಿಸಲು ಹಾಗೂ ಭವಿಷ್ಯದ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಕಳೆದ 16 ವರ್ಷಗಳಿಂದ ಪ್ರತಿಭಾ ಪುರಸ್ಕಾರ ನೀಡುತ್ತಿದೆ. ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಇನ್ನಷ್ಟು ಸಾಧನೆ ಮಾಡಬೇಕು ಎಂದು ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ.ಎಂ.ಎನ್‌. ರಾಜೇಂದ್ರಕುಮಾರ್‌ ಹೇಳಿದರು.

ನಗರದ ಎಸ್‌ಸಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ಶನಿವಾರ 2023-24ನೇ ಸಾಲಿನಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪದವಿ ಪೂರ್ವ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬ್ಯಾಂಕ್‌ನ ಸಿಬ್ಬಂದಿಯ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳ ಸಾಧನೆ ಗುರುತಿಸಲು ಸಹಕಾರಿ ಪಿತಾಮಹ ದಿ. ಮೊಳಹಳ್ಳಿ ಶಿವರಾವ್‌ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ವಿತರಿಸಲಾಗುತ್ತಿದೆ. ಆ ಮೂಲಕ ಶಿಕ್ಷಣಕ್ಕೆ ಬ್ಯಾಂಕ್‌ ಪ್ರೋತ್ಸಾಹ ನೀಡುತ್ತಿದೆ. ಎಸ್‌ಸಿಡಿಸಿಸಿ ಬ್ಯಾಂಕ್‌ ಈಗಾಗಲೇ ಮೂರು ವೈದ್ಯಕೀಯ ಕಾಲೇಜುಗಳಿಗೆ ಸಾಲ ಸೌಲಭ್ಯ ಒದಗಿಸಿದೆ. ಇದೀಗ ಮತ್ತೊಂದು ವೈದ್ಯಕೀಯ ಕಾಲೇಜಿಗೆ ಸಾಲಕ್ಕೆ ಬೇಡಿಕೆ ಸಲ್ಲಿಸಿದೆ. ಬ್ಯಾಂಕ್‌ನಿಂದ ಸಾಲ ಪಡೆದ ಎಲ್ಲ ವೈದ್ಯಕೀಯ ಕಾಲೇಜುಗಳು ಉತ್ತಮ ಭವಿಷ್ಯ ಪಡೆದಿವೆ ಎಂದರು.ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿದ ಮಂಗಳೂರಿನ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ಅಧ್ಯಕ್ಷ ಡಾ.ಯು.ಕೆ. ಮೋನು ಮಾತನಾಡಿ, ವಿದ್ಯಾರ್ಥಿ ವೇತನದ ಮೂಲಕ ಮುಂದಿನ ಪೀಳಿಗೆಗೆ ಹುಮ್ಮಸ್ಸು ತುಂಬುವ ಎಸ್‌ಸಿಡಿಸಿಸಿ ಬ್ಯಾಂಕ್‌ನ ಕಾರ್ಯ ಶ್ಲಾಘನೀಯ. ಹಿಂದಿನ ಕಾಲದಲ್ಲಿ ಶಿಕ್ಷಣ ಪಡೆಯುವುದು ಕಷ್ಟಸಾಧ್ಯವಾಗಿತ್ತು. ಈಗ ಎಲ್ಲ ಮೂಲಸೌಕರ್ಯದೊಂದಿಗೆ ಮಕ್ಕಳಿಗೆ ಶಿಕ್ಷಣ ದೊರೆಯುತ್ತಿದೆ. ಹೆಚ್ಚು ಅಂಕ ಪಡೆದವರು ಮುಂದಕ್ಕೆ ಸಾಧನೆ ಮಾಡಿ ಇನ್ನೊಬ್ಬರಿಗೆ ನೆರವಾಗಬೇಕು ಎಂದರು.ಸಂಸ್ಥೆಯೊಂದನ್ನು ಸ್ಥಾಪಿಸುವುದು ಕಷ್ಟ, ಮುನ್ನಡೆಸುವುದು ಇನ್ನೂ ಕಷ್ಟ. ಎಸ್‌ಸಿಡಿಸಿಸಿ ಬ್ಯಾಂಕ್‌ನ್ನು ಡಾ. ಎಂ.ಎನ್‌. ರಾಜೇಂದ್ರಕುಮಾರ್‌ ಸಮರ್ಥವಾಗಿ ನಡೆಸಿ, ದೇಶದ ಪ್ರಗತಿಗೆ ಕೊಡುಗೆ ನೀಡಿದ್ದಾರೆ ಎಂದರು.ಬ್ಯಾಂಕ್‌ ಉಪಾಧ್ಯಕ್ಷ ವಿನಯ್‌ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಭಾಸ್ಕರ್‌ ಎಸ್‌. ಕೋಟ್ಯಾನ್‌, ಎಂ.ವಾದಿರಾಜ ಶೆಟ್ಟಿ, ಎಸ್‌.ರಾಜು ಪೂಜಾರಿ, ಎಸ್‌. ಬಿ. ಜಯರಾಮ ರೈ, ಮೋನಪ್ಪ ಶೆಟ್ಟಿಎಕ್ಕಾರು, ಎಂ.ಮಹೇಶ್‌ ಹೆಗ್ಡೆ, ಬಿ.ಅಶೋಕ್‌ ಕುಮಾರ್‌ ಶೆಟ್ಟಿ, ಕೆ. ಜೈರಾಜ್‌ ಬಿ. ರೈ, ಕುಶಾಲಪ್ಪ ಗೌಡ ಪಿ., ಸದಾಶಿವ ಉಳ್ಳಾಲ್‌, ಸ್ಕ್ಯಾ‌ಡ್ಸ್‌ ಅಧ್ಯಕ್ಷ ರವೀಂದ್ರ ಕಂಬಳಿ ಇದ್ದರು.ನಿರ್ದೇಶಕ ಶಶಿಕುಮಾರ್‌ ರೈ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್‌ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ತನುಶ್ರೀ ಪಿತ್ರೋಡಿ ಅವರಿಂದ ಯೋಗ ಪ್ರದರ್ಶನ ನಡೆಯಿತು.ಕಾರ್ಯಕ್ರಮದಲ್ಲಿ 37 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನವೋದಯ ಸ್ವಸಹಾಯ ಸಂಘದ ಸದಸ್ಯರ 108 ಮಂದಿ ಮಕ್ಕಳಿಗೆ ಹಾಗೂ ಬ್ಯಾಂಕ್‌ ಸಿಬ್ಬಂದಿಯ 129 ಮಂದಿ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಒಟ್ಟು 274 ಮಂದಿಗೆ 13 ಲಕ್ಷ ರು.ಗಳ ವಿದ್ಯಾರ್ಥಿ ವೇತನ ನೀಡಲಾಯಿತು.