ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿಸಿ ಗ್ರಾಮದಲ್ಲಿ ಮೆರವಣಿಗೆ

| Published : Apr 30 2024, 02:01 AM IST

ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿಸಿ ಗ್ರಾಮದಲ್ಲಿ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕಪ್ಪೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎನ್ನುವುದು ಜನರ ನಂಬಿಕೆ. ಮಳೆಬಂದರೆ ಮಾತ್ರ ನಮ್ಮ ಬೆಳೆ ಉಳಿದು ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲು ಸಾಧ್ಯ. ಮೌಢ್ಯ ಎಂದು ಭಾವಿಸದೆ ನಮ್ಮ ಹಿರಿಯರ ಆಚರಣೆಗಳ ಮೇಲೆ ನಂಬಿಕೆಯಿಟ್ಟು ಕಪ್ಪೆಗಳ ಮದುವೆ ಮಾಡಿದ್ದೇವೆ. ವಿಶೇಷ ಪೂಜೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದು ವರುಣನ ಕೃಪೆಗಾಗಿ ಕಾಯುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಳೆಗಾಗಿ ಪ್ರಾರ್ಥಿಸಿ ತಾಲೂಕಿನ ಮೊಸಳೆಕೊಪ್ಪಲು ಗ್ರಾಮಸ್ಥರು ಕಪ್ಪೆಗಳಿಗೆ ಮದುವೆ ಮಾಡಿಸಿ ಮೆರವಣಿಗೆ ನಡೆಸಿದರು.

ಭೀಕರ ಬರಗಾಲದಿಂದ ತತ್ತರಿಸಿರುವ ಗ್ರಾಮೀಣ ಪ್ರದೇಶದ ಜನ ಮಳೆಗಾಗಿ ಪ್ರಾರ್ಥಿಸಿ ಮೌಢ್ಯಗಳ ಕಡೆಗೆ ಹೋಗುತ್ತಿದ್ದು, ಕಪ್ಪೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎನ್ನುವುದು ಒಂದು ನಂಬಿಕೆಯಾಗಿದೆ.

ಕಾಕತಾಳೀಯ ಎಂಬಂತೆ ಕೆಲವೊಮ್ಮೆ ನಾವು ಆಚರಿಸುವ ಸಾಂಪ್ರದಾಯಕ ಆಚರಣೆಗಳು ಫಲಿಸಿ ಮಳೆಬಂದು ಜನಸಾಮಾನ್ಯರ ನಂಬಿಕೆಗಳನ್ನು ಇಮ್ಮಡಿಗೊಳಿಸಿರುವ ಉದಾಹರಣೆಗಳೂ ಉಂಟು. ಈ ಹಿನ್ನೆಲೆಯಲ್ಲಿ ತಾಲೂಕಿನ ಕಸಬಾ ಹೋಬಳಿಯ ಮೊಸಳೆಕೊಪ್ಪಲು ಗ್ರಾಮದಲ್ಲಿ ಕಪ್ಪೆಗಳ ಹಬ್ಬ ಆಚರಿಸಲಾಯಿತು.

ಗ್ರಾಮದಲ್ಲಿ ಹಣ ಹಾಗೂ ಧಾನ್ಯವನ್ನು ಸಂಗ್ರಹಿಸಿದ ಗ್ರಾಮಸ್ಥರು ಗ್ರಾಮದ ಸಮೀಪವಿರುವ ಕೆರೆಬಳಿ ಕಳಸಪೂಜೆ ನಡೆಸಿ, ಸಂಗ್ರಹಿಸಲ್ಪಟ್ಟ ಧಾನ್ಯದಿಂದ ಅಡುಗೆ ಮಾಡಿ ಮಳೆಗಾಗಿ ದೇವರನ್ನು ಪ್ರಾರ್ಥಿಸಿ ಊರಿನ ಜನರು ಸಾಮೂಹಿಕವಾಗಿ ಊಟ ಮಾಡಿದರು.

ಕಪ್ಪೆಗಳನ್ನು ಹಿಡಿದು ತಂದು ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ಅವುಗಳಿಗೆ ಮದುವೆ ಮಾಡಿಸಲಾಯಿತು. ಬಾಲಕನ ನ ತಲೆ ಮೇಲೆ ವಧು-ವರ ಕಪ್ಪೆಗಳನ್ನು ಅಲಂಕೃತ ಬುಟ್ಟಿಯೊಂದರಲ್ಲಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದರು.

ಮೆರವಣಿಗೆ ಮನೆಗಳ ಮುಂದೆ ಬಂದಾಗ ಕಪ್ಪೆಗಳನ್ನು ಹೊತ್ತು ಬರುವ ದಾರಿಯುದ್ದಕ್ಕೂ ಗ್ರಾಮಸ್ಥರು ತಮ್ಮ ಮನೆಯ ಬಾಗಿಲಿಗೆ ನೀರು ಹಾಕಿ ಮೆರವಣಿಗೆಯನ್ನು ಸ್ವಾಗತಿಸಿದರಲ್ಲದೆ ಕಪ್ಪೆಯನ್ನು ತಲೆಯ ಮೇಲೆ ಹೊತ್ತು ಬರುತ್ತಿದ್ದ ಬಾಲಕರ ಕಾಲಿಗೂ ನೀರು ಹಾಕಿ ಮದುವೆಯನ್ನು ಸಂಭ್ರಮಿಸಿದರು.

ಈ ಬಗ್ಗೆ ಮಾತನಾಡಿದ ಗ್ರಾಮದ ಮುಖಂಡ ದಿನೇಶ್, ಕಪ್ಪೆಗಳ ಮದುವೆ ಮಾಡಿದರೆ ಮಳೆ ಬರುತ್ತದೆ ಎನ್ನುವುದು ಜನರ ನಂಬಿಕೆ. ಮಳೆಬಂದರೆ ಮಾತ್ರ ನಮ್ಮ ಬೆಳೆ ಉಳಿದು ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲು ಸಾಧ್ಯ. ಮೌಢ್ಯ ಎಂದು ಭಾವಿಸದೆ ನಮ್ಮ ಹಿರಿಯರ ಆಚರಣೆಗಳ ಮೇಲೆ ನಂಬಿಕೆಯಿಟ್ಟು ಕಪ್ಪೆಗಳ ಮದುವೆ ಮಾಡಿದ್ದೇವೆ. ವಿಶೇಷ ಪೂಜೆ ಮಾಡಿ ಮಳೆಗಾಗಿ ಪ್ರಾರ್ಥಿಸಿದ್ದು ವರುಣನ ಕೃಪೆಗಾಗಿ ಕಾಯುತ್ತಿದ್ದೇವೆ ಎಂದರು.

ಈ ವೇಳೆ ಗ್ರಾಮಸ್ಥರಾದ ಕೃಷ್ಣೇಗೌಡ, ಎಂ.ಡಿ.ಕಾಂತಾರಾಜು, ಕೇಬಲ್ ಅಶೋಕ, ಎಂ.ಆರ್.ಸುರೇಶ ಅಣ್ಣೇಗೌಡ, ಸುರೇಶ(ಲಕ್ಷ), ವಿಜಯ್ ಕುಮಾರ್ ಸೇರಿದಂತೆ ಹಲವರು ಇದ್ದರು.