ಮೈಸೂರು, ಮಂಡ್ಯದಲ್ಲಿಯೋಧರಿಗಾಗಿ ಪ್ರಾರ್ಥನೆ

| N/A | Published : May 18 2025, 11:48 PM IST / Updated: May 19 2025, 09:30 AM IST

Indian Army

ಸಾರಾಂಶ

  ಆಪರೇಷನ್‌ ಸಿಂದೂರ ಯಶಸ್ಸಿನ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರ ಒಳಿತಿಗಾಗಿ ಭಾನುವಾರ ಮೈಸೂರು ಮತ್ತು ಮಂಡ್ಯಗಳಲ್ಲಿ ಯೋಧರಿಗಾಗಿ ಪ್ರಾರ್ಥನೆಗಳು ನಡೆದವು.

ಮಂಡ್ಯ/ಮೈಸೂರು: ಆಪರೇಷನ್‌ ಸಿಂದೂರ ಯಶಸ್ಸಿನ ಹಿನ್ನೆಲೆಯಲ್ಲಿ ಭಾರತೀಯ ಸೈನಿಕರ ಒಳಿತಿಗಾಗಿ ಭಾನುವಾರ ಮೈಸೂರು ಮತ್ತು ಮಂಡ್ಯಗಳಲ್ಲಿ ಯೋಧರಿಗಾಗಿ ಪ್ರಾರ್ಥನೆಗಳು ನಡೆದವು.

ಮಂಡ್ಯದ ಕಾಳಿಕಾಂಬ ದೇವಸ್ಥಾನದ ಮುಂಭಾಗವಿರುವ ಗಜೇಂದ್ರ ಮೋಕ್ಷ ಕಲ್ಯಾಣಿ ಆವರಣದಲ್ಲಿ ಭಾರತೀಯ ಸೇನೆಯ ರಕ್ಷಣೆಗಾಗಿ ರಕ್ಷಾ ಸುದರ್ಶನ ಮಹಾಯಾಗ ಕೈಗೊಳ್ಳಲಾಯಿತು. ನಗರಸಭೆ ಅಧ್ಯಕ್ಷ ನಾಗೇಶ್ ಅವರು ವಿಷ್ಣು ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಮಾಜಿ ಸೈನಿಕರಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ, ರಕ್ಷಾ ಸುದರ್ಶನ ಮಹಾಯಾಗ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಮೈಸೂರಿನ ಅವಧೂತ‌ದತ್ತ ಪೀಠದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಭಗವದ್ಗೀತಾ ಪಾರಾಯಣ ಮಾಡಿ ನಮ್ಮ ಸೈನಿಕರಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು.

ಬಳಿಕ, ಆಶ್ರಮದ ನಾದಮಂಟಪದಲ್ಲಿ ಇಂಟರ್ ನ್ಯಾಷನಲ್ ಗೀತಾ ಫೌಂಡೇಶನ್ ವತಿಯಿಂದ ನಡೆದ ಭಗವದ್ಗೀತೆ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದವರಿಗೆ ಪದಕ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.ದಾವಣಗೆರೆಯಲ್ಲಿ ಮಾಕ್‌ ಡ್ರಿಲ್‌

ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಿನ್ನೆಲೆಯಲ್ಲಿ ವೈಮಾನಿಕ ದಾಳಿ ಎದುರಾದಾಗ ಸ್ಥಳಿಯ ಜನರು ಭಯಭೀತರಾಗದೆ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕೆಂದು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ದಾವಣಗೆರೆಯಲ್ಲಿ ಭಾನುವಾರ ಅಣಕು ಪ್ರದರ್ಶನ ನಡೆಸಲಾಯಿತು. ನಗರದ ಮಹಾನಗರ ಪಾಲಿಕೆ ಆವರಣದಲ್ಲಿ ಭಾನುವಾರ ಸಂಜೆ ಮಾಕ್‌ ಡ್ರಿಲ್‌ ಹಮ್ಮಿಕೊಳ್ಳಲಾಗಿತ್ತು.ಅಪರಾಧ ಸ್ಥಳ ಪರಿಶೀಲನಾ ಅಧಿಕಾರಿಗಳು (ಎಫ್‌ಎಸ್‌ಎಲ್) ಮತ್ತು ಸೋಕೋ ಪಡೆಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ಷ್ಮಮತ್ತು ತಾಂತ್ರಿಕ ಸಾಕ್ಷಿಗಳನ್ನು ಕಲೆ ಹಾಕುವುದನ್ನು ಅಣಕು ಪ್ರದರ್ಶನ ಮೂಲಕ ತೋರಿಸಿದರು. 

ಸರ್ಕಾರದ ಸೂಚನೆಯಂತೆ ಸಾರ್ವಜನಿಕರು, ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ, ಎನ್.ಸಿ.ಸಿ, ಸ್ಕೌಟ್ಸ್‌ ಆ್ಯಂಡ್ ಗೈಡ್ಸ್, ಆರೋಗ್ಯ ಇಲಾಖೆ, ಬೆಸ್ಕಾಂ ಇಲಾಖೆ ಇತರ ಇಲಾಖೆಗಳ ಸಹಯೋಗದಲ್ಲಿ ಅವಘಡಗಳು ಸಂಭವಿಸಿದಾಗ ಕೈಗೊಳ್ಳುವ ತುರ್ತು ಕ್ರಮಗಳನ್ನು ಅಭ್ಯಾಸ ಮಾಡಲಾಗಿದೆ. ಇದು ಇಲ್ಲಿಗೆ ಮುಗಿಯುವುದಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಜನಸಂದಣಿ ಪ್ರದೇಶಗಳಲ್ಲಿ ಅಣಕು ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಜನರಿಗೆ ಅವಘಡಗಳ ಕುರಿತು ತಕ್ಷಣ ಮಾಹಿತಿ ನೀಡುವುದು ಪ್ರಮುಖವಾಗಿರುತ್ತದೆ. ಆದ್ದರಿಂದ ಅಣಕು ಪ್ರದರ್ಶನದಲ್ಲಿ ಮೊದಲು ಮಿಸೈಲ್‌ ದಾಳಿಯ ಸೈರನ್ ಮೊಳಗಿಸುವ ಮೂಲಕ ಜನರನ್ನು ಎಚ್ಚರಿಸಬೇಕು. ನಂತರ ಜನರು ಸುರಕ್ಷತೆ ಸ್ಥಳಗಳಿಗೆ ಹೇಗೆ ತೆರಳಬೇಕು ಎನ್ನುವುದನ್ನು ಅಣಕು ಪ್ರದರ್ಶನದ ಮೂಲಕ ಪ್ರಸ್ತುತಪಡಿಸಿದರೆ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಅನುಕೂಲ ಆಗಲಿದೆ ಎಂದರು.

Read more Articles on