ಪ್ರಕೃತಿ ವಿಕೋಪ ಸಂದರ್ಭ ಮುಂಜಾಗ್ರತೆ ಅವಶ್ಯಕ: ತಹಸೀಲ್ದಾರ

| Published : Jan 24 2025, 12:46 AM IST

ಪ್ರಕೃತಿ ವಿಕೋಪ ಸಂದರ್ಭ ಮುಂಜಾಗ್ರತೆ ಅವಶ್ಯಕ: ತಹಸೀಲ್ದಾರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕವಾಗಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರು ಮುಂಜಾಗ್ರತೆ ವಹಿಸುವುದು ಅತ್ಯವಶ್ಯಕವಾಗಿದೆ ಎಂದು ತಹಸೀಲ್ದಾರ ವಿಠಲ್ ಚೌಗಲಾ ಹೇಳಿದರು.

ತಾಲೂಕಿನ ಹಿರೇಸಿಂದೋಗಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎನ್.ಡಿ.ಆರ್.ಎಫ್ ಮತ್ತು ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರು ವಹಿಸಬೇಕಾದ ಮುಂಜಾಗ್ರತೆಯ ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರವಾಹ, ಅಗ್ನಿ ಅವಘಡ, ಗ್ಯಾಸ್ ಸಿಲಿಂಡರ್ ಸ್ಪೋಟ ಸೇರಿದಂತೆ ಇತರೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿಯನ್ನು ಎಲ್ಲರೂ ಸರಿಯಾಗಿ ತಿಳಿದುಕೊಂಡು ಇದನ್ನು ತಮ್ಮ ಅಕ್ಕ- ಪಕ್ಕದವರಿಗೂ ತಿಳಿಸಬೇಕೆಂದು ಹೇಳಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್.ಡಿ.ಆರ್.ಎಫ್) ಇನ್‌ಸ್ಪೆಕ್ಟರ್ ಅಜಯ ಕುಮಾರ್ ಮಾತನಾಡಿ, ಪ್ರವಾಹ, ಅಪಘಾತ, ಹೃದಯಾಘಾತ, ಭೂಕಂಪ ಸೇರಿದಂತೆ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹೇಗೆ ಮುಂಜಾಗ್ರತೆ ವಹಿಸಬೇಕು ಎಂಬುದರ ಕುರಿತು ನಮ್ಮ ತಂಡ ಅಣಕು ಪ್ರದರ್ಶನಗಳ ಮೂಲಕ ಸಾರ್ವಜನಿಕರಿಗೆ ಹಾಗೂ ಶಾಲಾ- ಕಾಲೇಜುಗಳ ಮಕ್ಕಳಿಗೆ ಮಾಹಿತಿ ನೀಡಲಿದೆ. ಇದಕ್ಕೆ ಸಂಬಂಧಿಸಿದ ತಮ್ಮ ಯಾವುದೇ ಪ್ರಶ್ನೆಗಳಿದ್ದರೆ ಕೇಳಬಹುದು. ಅದಕ್ಕೆ ಉತ್ತರಿಸಲಾಗುವುದು ಎಂದರು.

ನೈಸರ್ಗಿಕ ಪ್ರಕೃತಿ ವಿಕೋಪಗಳು, ಭೂಕಂಪ, ಸುನಾಮಿ, ಚಂಡಮಾರುತ, ಪ್ರವಾಹ, ಕೋಲ್ಡ್‌ ಮತ್ತು ಹೀಟ್ ಅಲೆಗಳಾದರೆ, ಮಾನವ ನಿರ್ಮಿತ ವಿಕೋಪಗಳು, ಟ್ರೇನ್, ಡ್ಯಾಂ ಸೇರಿದಂತೆ ಮಾನವನಿಂದ ನಿರ್ಮಿತವಾದವುಗಳಾಗಿವೆ. ಯಾವುದೇ ವಿಕೋಪ ಸಂದರ್ಭದಲ್ಲಿ ಮುಂಜಾಗ್ರತೆ ವಹಿಸಿದರೆ ಸಾವಿರಾರು ಜನರ ಜೀವಗಳು ಉಳಿಯುತ್ತವೆ ಎಂದು ಹೇಳಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಹೆಡ್ ಕಾನ್‌ಸ್ಟೇಬಲ್ ಶಂಕ್ರೆಪ್ಪ ದೂಪದಾಳ ಹಾಗೂ ಕಾನ್‌ಸ್ಟೇಬಲ್ ವಜ್ರ ಚೇತನ ಮಾಹಿತಿ ನೀಡಿದರು.

ಈ ಸಂದರ್ಭ ಕೊಪ್ಪಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಹಿರೇಸಿಂದೋಗಿ ಗ್ರಾಪಂ ಅಧ್ಯಕ್ಷ ರುದ್ರಮುನಿ ಮಠದ, ಅಗ್ನಿಶಾಮಕ ಇಲಾಖೆಯ ಅಧಿಕಾರಿ ನರಸಪ್ಪ, ಅಳವಂಡಿ ಪೊಲೀಸ್ ಠಾಣೆಯ ಪಿಎಸ್‌ಐ ಪ್ರಹ್ಲಾದ ನಾಯಕ ಸೇರಿದಂತೆ ಗ್ರಾಪಂ ಸದಸ್ಯರು, ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯಗುರು ಮಲ್ಲಪ್ಪ ಹಾಗೂ ಎಸ್.ಡಿ.ಎಂ.ಸಿ ಸದಸ್ಯರು, ವಿವಿಧ ಶಾಲಾ-ಕಾಲೇಜುಗಳ ಮಕ್ಕಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು