ತಾಯಿ ಮರಣ ತಡೆಗೆ ಮುಂಜಾಗ್ರತೆ ಅಗತ್ಯ: ಡಿಸಿ ಜಾನಕಿ

| Published : Jan 17 2025, 12:47 AM IST

ಸಾರಾಂಶ

ಗರ್ಭಾವಸ್ಥೆ ಸಮಯದಲ್ಲಿ ತಾಯಿ ಮರಣ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ತಡೆಯಲು ಮುಂಜಾಗ್ರತಾ ಕ್ರಮಕೈಗೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಗರ್ಭಾವಸ್ಥೆ ಸಮಯದಲ್ಲಿ ತಾಯಿ ಮರಣ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ತಡೆಯಲು ಮುಂಜಾಗ್ರತಾ ಕ್ರಮಕೈಗೊಳ್ಳುವುದು ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಗುರುವಾರ ನಡೆದ ತಾಯಿ ಮರಣ, ಜಿಲ್ಲಾ ಕಣ್ಗಾವಲು ಸಮಿತಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಹಾಗೂ ಕಾಯಕಲ್ಪ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯವರು ತಮ್ಮ ಭಾಗದ ಗರ್ಭಿಣಿಯರನ್ನು ಗುರುತಿಸಿ ನೋಂದಣಿ ಮಾಡಿಕೊಳ್ಳಬೇಕು. ಇದರಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಿ ಆಗ ಬಹುದಾದ ಗಂಡಾಂತರಗಳಿಂದ ರಕ್ಷಿಸಲು ಸಾಧ್ಯವಾಗುತ್ತಿದೆ. ಇದರಿಂದ ತಾಯಿ ಮರಣ ತಡೆಗೆಯಲು ಸಾಧ್ಯವಾಗುತ್ತದೆ ಎಂದರು.

ಸಾರ್ವಜನಿಕರು ಕೂಡಾ ಸರಕಾರಿ ಆಸ್ಪತ್ರೆಗಳಲ್ಲಿ ಗರ್ಭಿಣಿಯರ ಬಗ್ಗೆ ಹಾಗೂ ಕುಟುಂಬಸ್ಥರು ತಮ್ಮ ಮನೆಯಲ್ಲಿದ್ದ ಗರ್ಭಿಣಿಯರು ಇದ್ದಲ್ಲಿ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಬೇಕು. ಗರ್ಭಾವಸ್ಥೆಯಲ್ಲಿ ಮೇಲಿಂದ ಮೇಲೆ ಪರೀಕ್ಷೆಗೆ ಒಳಗಾಗುವ ಕಾರ್ಯವಾದಲ್ಲಿ ಬಾಹ್ಯರೋಗಗಳಿಂದ ತೊಂದರೆಯಾಗುವುದಿಲ್ಲ. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಏಪ್ರಿಲ್ 2024 ರಿಂದ ಇಲ್ಲಿಯವರೆಗೆ ಒಟ್ಟು 10 ತಾಯಿ ಮರಣ ಪ್ರಕರಣಗಳು ಕಂಡುಬಂದಿದ್ದು, ಇದರಲ್ಲಿ ಖಾಸಗಿ ಆಸ್ಪತ್ರೆಯಲ್ಲಿ 7, ಸರಕಾರಿ ಆಸ್ಪತ್ರೆಯಲ್ಲಿ 2 ಮಾತ್ರ ಪ್ರಕರಣಗಳು ಕಂಡುಬಂದಿವೆ ಎಂದರು. ಸಾವು ತಪ್ಪಿಸಲು ಸಾಧ್ಯವಿಲ್ಲವಾದರೂ ನಮ್ಮ ಜವಾಬ್ದಾರಿ ಮಾತ್ರ ಮರೆಯುವಂತಿಲ್ಲವೆಂದರು.

ಜಿಲ್ಲಾ ಕಣ್ಗಾವಲು ಸಮಿತಿ:

ಸಮಗ್ರ ರೋಗಗಳ ಕಣ್ಗಾವಲು ಯೋಜನೆಯ ಸಾಂಕ್ರಾಮಿಕ ರೋಗಗಳ ಅಂಕಿ ಅಂಶಗಳೊಂದಿಗೆ ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮ ಹಾಗೂ ಹಾವು ಕಡಿತ ನಿಯಂತ್ರಣ ಕಾರ್ಯಕ್ರಮ ಅಂಕಿ ಅಂಶಗಳನ್ನು ಜಿಲ್ಲಾ ಸಮೀಕ್ಷಾಣಾಧಿಕಾರಿ ಡಾ.ದಯಾನಂದ ಕರೇನ್ನವರ ಸಭೆಗೆ ತಿಳಿಸಿದಾಗ ರೇಬಿಸ್ ಹಾಗೂ ಹಾವು ಕಡಿತ ಪ್ರಕರಣಗಳಿಗೆ ಯಾವುದೇ ರೀತಿಯ ಲಸಿಕೆಗಳ ಕೊರತೆ ಆಗದಂತೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮೇಲು ದರ್ಜೆ ಆಸ್ಪತ್ರೆಗಳಲ್ಲಿ ದಾಸ್ತಾನು ಇಟ್ಟುಕೊಳ್ಳಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ರಾಷ್ಟ್ರೀಯ ತಂಬಾಕು ನಿಯಂತ್ರಣ:

ಕೋಟ್ಪಾ ಕಾಯ್ದೆಯಡಿ ತಾಲೂಕು ಮಟ್ಟದಲ್ಲಿ ಹೆಚ್ಚಾಗಿ ಕಾರ್ಯಾಚರಣೆ ನಡೆಸಿ ಕೇವಲ ದಂಡ ಹಾಕುವ ಬದಲು ಪ್ರಕರಣ ದಾಖಲಿಸಿಕೊಂಡು ದಂಡ ಮತ್ತು ಶಿಕ್ಷೆಗೆ ಒಳಪಡಿಸುವ ಕಾರ್ಯವಾಗಬೇಕು. ಶಾಲಾ ಕಾಲೇಜುಗಳಲ್ಲಿ 100 ಗಜಗಳಲ್ಲಿ ತಂಬಾಕು ಮಾರಾಟ ಮಾಡದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ದೂರುಗಳು ಬರುತ್ತಿವೆ. ಶಾಲಾ ಕಾಲೇಜುಗಳ ಹತ್ತಿರ ತಂಬಾಕು ಮಾರಾಟ ಮಾಡುವ ಅಂಗಡಿಗಳಿದ್ದರೆ ಅವುಗಳನ್ನು ತೆರವುಗೊಳಿಸಲು ಕ್ರಮವಹಿಸಬೇಕು. ತಂಬಾಕು ಮಾರಾಟ ಮಾಡುವ ಅಂಗಡಿಗಳಿಗೆ ಕಡ್ಡಾಯವಾಗಿ ಪರವಾನಿಗೆ ಪಡೆದಿರಬೇಕು. ಇಲ್ಲದಿದ್ದರೆ ಕ್ರಮಕೈಗೊಳ್ಳಲು ಸೂಚಿಸಿದರು.

ಕಾಯಕಲ್ಪ ವ್ಯವಸ್ಥೆ:

ಜಿಲ್ಲೆಯ ಒಟ್ಟು 106 ಸರಕಾರಿ ಆಸ್ಪತ್ರೆಗಳಿಗೆ ಸುವ್ಯವಸ್ಥಿತ ಕಾಯಕಲ್ಪ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಇದರಲ್ಲಿ ಒಂದು ಜಿಲ್ಲಾ ಆಸ್ಪತ್ರೆ, ಮೂರು ತಾಲೂಕಾ ಆಸ್ಪತ್ರೆ, 2 ಸಮುದಾಯ ಆರೋಗ್ಯ ಕೇಂದ್ರ 27 ಪ್ರಾಥಮಿಕ ಆರೋಗ್ಯ ಕೇಂದ್ರ, 3 ನಗರ ಆರೋಗ್ಯ ಕೇಂದ್ರ, 71 ಉಪ ಕೇಂದ್ರಗಳು ಇವೆ ಎಂದು ಸಭೆಗೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ ಡಿ.ಎನ್, ಜಿಲ್ಲಾ ಲಸಿಕಾ ಅಧಿಕಾರಿ ಡಾ.ರಾಜಕುಮಾರ ಯರಗಲ್ಲ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಅರವಿಂದ ಪಟ್ಟಣಶೆಟ್ಟಿ, ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಶಿವನಗೌಡ ಪಾಟೀಲ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ ಸೇರಿದಂತೆ ತಾಲೂಕಾ ವೈಧ್ಯಾಧಿಕಾರಿಗಳು ಉಪಸ್ಥಿತರಿದ್ದರು.