ಸಾರಾಂಶ
ಶಿಗ್ಗಾಂವಿ: ತಾಲೂಕಿನಲ್ಲಿ ಎಡಬಿಡದೆ ಮಳೆ ಸುರಿದ ಹಿನ್ನೆಲೆಯಲ್ಲಿ ಬೆಳೆಗಳ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆ ಇದೆ. ಈ ಬೆಳೆಗಳ ನಿರ್ವಹಣೆಗಾಗಿ ಮುಂದಿನ ಕ್ರಮಗಳನ್ನು ಅನುಸರಿಸಬೇಕು ಎಂದು ಶಿಗ್ಗಾಂವಿಯ ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ ಗೆಜಲಿ ಸುದ್ದಿಗಾರರಿಗೆ ತಿಳಿಸಿದರು.
ಹೆಚ್ಚಾದ ಮಳೆ ನೀರನ್ನು ಬಸಿದು ಹೋಗುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ. ಗೋವಿನಜೋಳ : ೪೫ ರಿಂದ ೬೦ ದಿವಸದ ಬೆಳೆಯಿದ್ದು, ಸೈನಿಕ ಹುಳು ಹತೋಟಿಗಾಗಿ ಇಮಾಮೆಕ್ಟಿನ್ ಬೆಂಜೋಯೇಟ್ ೦.೫ ಗ್ರಾಂ ಅಥವಾ ೦.೪ ಮಿ.ಲೀ ಕ್ಲೊರಾಂಟ್ರಿನಿಲಿಪ್ರೋಲ್ ಇವುಗಳಲ್ಲಿ ಒಂದನ್ನು ಪ್ರತಿ ಲೀ ನೀರಿನಲ್ಲಿ ಬೆರಿಸಿ ಪ್ರತಿ ಸುಳಿ ತುಂಬುವಂತೆ ಸಿಂಪಡಿಸಬೇಕು. ತುಕ್ಕು ರೋಗ ಬಾಧೆ ಇದ್ದಲ್ಲಿ ಹತೋಟಿಗಾಗಿ ಪ್ರತಿ ಲೀ. ನೀರಿಗೆ ೨.ಗ್ರಾಂ ಮ್ಯಾಂಕೋಜೆಬ್ ಅಥವಾ ೧ ಮಿ.ಲೀ ಹೆಕ್ಸಾಕೊನಜೋಲ್ ಸಿಂಪಡಿಸಬೇಕು. ಭತ್ತ:- ೪೦ರಿಂದ ೬೦ ದಿನದ ಬೆಳೆಯಿದ್ದು, ಕಾಂಡ ಕೊರೆಯುವ ಹುಳು ಮತ್ತು ಎಲೆ ಸುರುಳಿ ಹುಳುವಿನ ಬಾಧೆಯಿದ್ದಲ್ಲಿ ನಿರ್ವಹಣೆಗಾಗಿ ಕ್ಲೊರಾಂಟ್ರಿನಿಲಿಪ್ರೋಲ್ ೦.೪ ಮಿ.ಲೀ. ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.ಬೆಂಕಿ ರೋಗ:- ಬೆಂಕಿ ರೋಗ ಬಾಧೆ ಇದ್ದಲ್ಲಿ ನಿರ್ವಹಣೆಗಾಗಿ ಕೀಟಾಜಿನ್ ೧ ಮಿ.ಲೀ. ಅಥವಾ ೧ ಮಿ.ಲೀ. ಪ್ರೊಪಿಕೋನಾಜೋಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಶೇಂಗಾ: ಅಲ್ಲಲ್ಲಿ ಶೇಂಗಾ ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿರುವುದರಿಂದ ೧೯:೧೯:೧೯ ಗೊಬ್ಬರವನ್ನು ೫ ರಿಂದ ೮ ಗ್ರಾಂ ಪ್ರತಿ ಲೀ ನೀರಿಗೆ ಬೆರೆಸಿ ಸಿಂಪಡಿಸುವುದು. ಸುರುಳಿ ಪೂಚಿ ಮತ್ತು ಎಲೆತಿನ್ನುವ ಕೀಟ ಕಂಡು ಬಂದಲ್ಲಿ ಇಮಾಮೆಕ್ಟಿನ್ ಬೆಂಜೋಯೇಟ್ ೦.೪ ಗ್ರಾಂ ಪ್ರತಿ ಲೀ ನೀರಿಗೆ ಬೆರಿಸಿ ಸಿಂಪಡಿಸುವುದು. ಸೋಯಾಅವರೆ:- ಎಲೆ ತಿನ್ನುವ ಕೀಡೆ ನಿರ್ವಹಣೆಗಾಗಿ ರೈನಾಕ್ಸಿಪೈರ್ ಅಥವಾ ಪ್ಲುಬೆಂಡಿಯಾಮೈಡ್ ೦.೨ ಮಿ.ಲಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ತುಕ್ಕುರೋಗ: ಬಾಧೆ ಇದ್ದಲ್ಲಿ ಪ್ರತಿ ಲೀಟರ್ ನೀರಿಗೆ ೧ ಮಿ.ಲೀ. ಹೆಕ್ಸಾಕೊನಾಜೋಲ್ ಶಿಲೀಂಧ್ರನಾಶಕವನ್ನು ಸಿಂಪಡಿಸಬೇಕು. ಅತಿಯಾದ ಮಳೆಯಿಂದಾಗಿ ಎಲ್ಲಾ ಬೆಳೆಗಳಲ್ಲಿ ಸಾಮಾನ್ಯವಾಗಿ ಪೋಷಕಾಂಶಗಳ ಕೊರತೆಯಿದೆ. ಆದುದರಿಂದ ಬೆಳೆಗಳ ಹಂತ ಗಮನಿಸಿ ಪ್ರತಿ ಲೀ ನೀರಿಗೆ ೫-೧೦ ಗ್ರಾಂ ೧೯:೧೯:೧೯ ಮತ್ತು ೫.ಮಿ.ಲೀ ಲಘು ಪೋಷಕಾಂಶಗಳ ದ್ರಾವಣವನ್ನು ಪೀಡೆನಾಶಕಗಳ ಜೊತೆಯಲ್ಲಿ ಸಿಂಪಡಿಸುವುದು ಅತಿ ಅವಶ್ಯ ಸಂದೇಹಗಳಿದ್ದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಸಂಪರ್ಕಿಸಲು ಕೋರಿದೆ.