ಮರಕ್ಕೆ ಕಾರು ಡಿಕ್ಕಿ: ಗರ್ಭಿಣಿ ದಾರುಣ ಸಾವು

| Published : Jul 02 2025, 11:47 PM IST / Updated: Jul 02 2025, 11:48 PM IST

ಸಾರಾಂಶ

ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅರ್ಚನಾ ತನ್ನನ್ನು ಕರೆದೊಯ್ಯಲು ಬಂದಿದ್ದ ಆಕೆಯ ಮಾವ ನಾರಾಯಣಸ್ವಾಮಿ ಜತೆ ಕಾರಿನಲ್ಲಿ ಸ್ವಗ್ರಾಮ ಕೊರಚನೂರಿಗೆ ವಾಪಸ್ ಬರುತ್ತಿರುವಾಗ ಈ ಘಟನೆ ಭಾವನಹಳ್ಳಿ ರಸ್ತೆಯ ಪುರ ಗೇಟ್‌ ಬಳಿ ಸಂಭವಿಸಿದೆ.

ಮಾಲೂರು: ಎದುರಿಗೆ ಬರುತ್ತಿದ್ದ ಲಾರಿಯನ್ನು ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡ ಕಾರೊಂದು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಗರ್ಭಿಣಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡಿರುವ ಚಾಲಕನನ್ನು ಮಾಲೂರು ಆಸ್ಪತ್ರೆಗೆ ಸೇರಿಸಲಾಗಿದೆ. ಮೃತಳನ್ನು ತೊರ್ನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಶ್ರೂಶಕಿಯಾಗಿದ್ದ ಅರ್ಚನಾ (23) ಎಂದು ಗುರುತಿಸಲಾಗಿದೆ. ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದ ಅರ್ಚನಾ ತನ್ನನ್ನು ಕರೆದೊಯ್ಯಲು ಬಂದಿದ್ದ ಆಕೆಯ ಮಾವ ನಾರಾಯಣಸ್ವಾಮಿ ಜತೆ ಕಾರಿನಲ್ಲಿ ಸ್ವಗ್ರಾಮ ಕೊರಚನೂರಿಗೆ ವಾಪಸ್ ಬರುತ್ತಿರುವಾಗ ಈ ಘಟನೆ ಭಾವನಹಳ್ಳಿ ರಸ್ತೆಯ ಪುರ ಗೇಟ್‌ ಬಳಿ ಸಂಭವಿಸಿದೆ. ಎದುರಿಗೆ ಬಂದ ಲಾರಿಯನ್ನು ತಪ್ಪಿಸಲು ಹೋದ ನಾರಾಯಣಸ್ವಾಮಿ ವೇಗವಾಗಿ ಎಡಗಡೆ ನುಗ್ಗಿ ಮರಕ್ಕೆ ರಭಸವಾಗಿ ಗುದ್ದಿದ ಪರಿಣಾಮ ಕಾರಿನಲ್ಲಿ ಎಡಗಡೆ ಕುಳಿತಿದ್ದ ಅರ್ಚನಾಳ ದೇಹದಿಂದ ರುಂಡ ಹಾಗೂ ಎಡಗೈ ಭಾಗ ಪ್ರತ್ಯೇಕವಾಗಿದ್ದು, ಅಪಘಾತದ ಭೀಕರತೆ ಸಾರುತ್ತಿತ್ತು. 8 ತಿಂಗಳ ಗರ್ಭಿಣಿಯನ್ನು ಕಳೆದುಕೊಂಡ ಪತಿ ಪ್ರಸನ್ನ ಹಾಗೂ ಕುಟುಂಬದ ಆಕ್ರಂದನ ಮುಗಿಲುಮುಟ್ಟಿತ್ತು. ಘಟನೆ ಸ್ಥಳಕ್ಕೆ ಮಾಲೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.