ಸಾರಾಂಶ
ಕನ್ನಡಪ್ರಭ ವಾರ್ತೆ ಹಾವೇರಿ
ಜಿಲ್ಲೆಯಲ್ಲಿ ಬೇಸಿಗೆ ಅವಧಿಯಲ್ಲಿ ಉಂಟಾಗುವ ಕುಡಿಯುವ ನೀರಿನ ತೊಂದರೆ ನಿವಾರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕುಡಿಯುವ ನೀರು ಹಾಗೂ ಬರ ನಿರ್ವಹಣೆಗೆ ಅನುದಾನ ಕೊರತೆ ಇಲ್ಲ. ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ೫೪ ವಾರ್ಡುಗಳಲ್ಲಿ ಹಾಗೂ ೨೫೪ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇದ್ದು, ಅಂತಹ ಪ್ರದೇಶಗಳಿಗೆ ಖಾಸಗಿ ಕೊಳವೆಬಾವಿಗಳನ್ನು ಸಹ ಮುಂಚಿತವಾಗಿ ಗುರುತಿಸಿ ಅಗತ್ಯ ಕ್ರಮವಹಿಸಲಾಗುವುದು ಎಂದರು.
ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ, ಕಾಗಿನೆಲೆ ಹಾಗೂ ರಾಮಗೊಂಡನಹಳ್ಳಿ ಸೇರಿ ಮೂರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದ್ದು, ಏಳು ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ಅನುದಾನದಲ್ಲಿ ಹೊಸ ಕೊಳವೆಬಾವಿ ಕೊರೆಸಲು ಅವಕಾಶವಿಲ್ಲ. ಗ್ರಾಪಂ ೧೫ನೇ ಹಣಕಾಸು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅನುದಾನದಲ್ಲಿ ಹೊಸ ಕೊಳವೆಬಾವಿ ಕೊರೆಸಬಹುದಾಗಿದೆ ಎಂದು ತಿಳಿಸಿದರು.ಬರ ನಿರ್ವಹಣೆಗೆ ಜಿಲ್ಲೆಯ ಪ್ರತಿ ಹೋಬಳಿ ಮಟ್ಟದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳೆಂದು ನೇಮಿಸಲಾಗಿದೆ. ಆಯಾ ತಾಲೂಕಿನ ಹೋಬಳಿ ಮಟ್ಟದಲ್ಲಿ ನೇಮಿಸಿದ ಅಧಿಕಾರಿಗಳು ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಮೇವಿನ ಕೊರತೆ ಇಲ್ಲ:ಜಿಲ್ಲೆಯಲ್ಲಿ ಜಾನುವಾರುಗಳಿಗೆ ಯಾವುದೇ ಮೇವಿನ ಕೊರತೆ ಇರುವುದಿಲ್ಲ. ಮುಂದಿನ ೫೩ ವಾರುಗಳಿಗೆ ಸಾಕಾಗುವಷ್ಟು ೮.೫೨ ಲಕ್ಷ ಟನ್ ಮೇವಿನ ಲಭ್ಯತೆ ಇದೆ. ಜಿಲ್ಲೆಗೆ ೧೦,೨೫೯ ಮೇವಿನ ಬೀಜದ ಮಿನಿ ಕಿಟ್‌ಗಳನ್ನು ಪೂರೈಸಲಾಗಿದೆ. ನೀರಿನ ಸೌಲಭ್ಯ ಇರುವ ರೈತರಿಗೆ ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಮೇವಿನ ಬೀಜದ ಕಿಟ್ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಬೆಳೆ ನಷ್ಟ ಪರಿಹಾರ:ಜಿಲ್ಲೆಯಲ್ಲಿ ಬೆಳೆ ಪರಿಹಾರಕ್ಕೆ ಸಂಬಂಧಿಸಿದಂತೆ ರೈತರ ಮಾಹಿತಿಯನ್ನು ಫ್ರೂಟ್ ವೆಬ್‌ಸೈಟ್‌ನಲ್ಲಿ ೪,೦೫,೯೫೫ ಡಾಟಾ ಎಂಟ್ರಿ ಮಾಡುವ ಮೂಲಕ ಶೇ.೮೩.೪೦ರಷ್ಟು ಸಾಧನೆ ಮಾಡಲಾಗಿದೆ. ರಾಜ್ಯದಲ್ಲೇ ಹಾವೇರಿ ೩ನೇ ಸ್ಥಾನದಲ್ಲಿದೆ. ಫ್ರೂಟ್ ಐಡಿಯಲ್ಲಿ ಆರ್‌ಟಿಸಿ ನೋಂದಣಿ ಬಾಕಿ ಇರುವ ರೈತರು ಕೂಡಲೇ ಆಯಾ ತಾಲೂಕಿನ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ ಅಥವಾ ಗ್ರಾಮ ಆಡಳಿತಾಧಿಕಾರಿಗಳನ್ನು ಸಂಪರ್ಕಿಸಿ ಫ್ರೂಟ್ಸ್ ಐಡಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.₹೧೨ ಕೋಟಿ ಅನುದಾನ:ಪ್ರಸಕ್ತ ೨೦೨೩-೨೪ನೇ ಸಾಲಿನ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಪ್ರಕೃತಿ ವಿಕೋಪದ ಪಿಡಿ ಖಾತೆಗೆ ರು.೧೨ ಕೋಟಿ ಅನುದಾನ ಬಿಡುಗಡೆಯಾಗಿದೆ. ಜಿಲ್ಲೆಯ ಎಲ್ಲ ತಾಲೂಕು ತಹಸೀಲ್ದಾರರ ಪ್ರಕೃತಿ ವಿಕೋಪ ನಿರ್ವಹಣೆ ಪಿಡಿ ಖಾತೆಗೆ ತಲಾ ರು.೫೦ ಲಕ್ಷಗಳಂತೆ ನಾಲ್ಕು ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. ಜಿಲ್ಲಾಡಳಿತ ಬಳಿ ರು. ೮ ಕೋಟಿ ಅನುದಾನ ಲಭ್ಯವಿದೆ ಎಂದು ತಿಳಿಸಿದರು.ಜಿಲ್ಲೆಯಲ್ಲಿ ಕೋವಿಡ್ ಭಯ ಬೇಡ; ನಿರ್ವಹಣೆಗೆ ಅಗತ್ಯ ಸಿದ್ಧತೆ:ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ಕಂಡುಬಂದಿಲ್ಲ. ಕೋವಿಡ್ ನಿರ್ವಹಣೆಗೆ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಅಂತರವನ್ನು ಕಾಯ್ದುಕೊಳ್ಳಬೇಕು. ೬೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಡಯಾಬಿಟಿಸ್, ಅಧಿಕ ರಕ್ತದೊತ್ತಡ ಇತರೆ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಮುಂಜಾಗ್ರತಾ ಕ್ರಮವಾಗಿ ಮಾಸ್ಕ್ ಧರಿಸಬೇಕು ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಮನವಿ ಮಾಡಿದರು.
ಸರ್ಕಾರಿ ೧೦೨೪ ಹಾಗೂ ಖಾಸಗಿ ೩೪೦ ಸೇರಿ ೧೩೬೪ ಬೆಡ್‌ಗಳು ಹಾಗೂ ೧೮೩ ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ೬೩ ಹಾಗೂ ಖಾಸಗಿ ಎರಡು ಸೇರಿ ೬೬ ಐಸಿಯು ಸಹಿತ ವೆಂಟಿಲೇಟರ್ ಬೆಡ್ ಕಾಯ್ದಿರಿಸಲಾಗಿದೆ ಎಂದರು.ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಸುವ್ಯಸ್ಥೆಯಲ್ಲಿದ್ದು, ೯೯೫ ಆಕ್ಸಿಜನಲ್ ಸಿಲೆಂಡರ್‌ಗಳು ಲಭ್ಯವಿವೆ. ಆರ್‌ಟಿಪಿಸಿಆರ್ ೪೧ ಹಾಗೂ ರ‍್ಯಾಟ್ ೨೯ ಸೇರಿ ೭೦ ಪರೀಕ್ಷೆಗಳ ಗುರಿ ನೀಡಲಾಗಿದ್ದು, ಪ್ರತಿದಿನ ೨೦೦ ಪರೀಕ್ಷೆ ಮಾಡಲಾಗುತ್ತಿದೆ. ಡಿ.೨೫ ರಿಂದ ಜ.೧ರವರೆಗೆ ೧೪೨ ರ‍್ಯಾಟ್ ಹಾಗೂ ೧೩೦೨ ಆರ್‌ಟಿಪಿಸಿಆರ್ ಸೇರಿ ಒಟ್ಟು ೧೪೪೪ ಪರೀಕ್ಷೆ ಮಾಡಲಾಗಿದೆ. ಜಿಲ್ಲೆಗೆ ೭೮೦ ಬೂಟ್ಸ್ ಡೋಸ್ ವ್ಯಾಕ್ಸ್ ಸರಬರಾಜಾಗಿದೆ ಎಂದು ಮಾಹಿತಿ ನೀಡಿದರು.
ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ ಇತರರಿದ್ದರು.