ಸಾರಾಂಶ
ಶಿರಸಿ: ಕರ್ನಾಟಕ ಪವರ್ ಕಾರ್ಪೋರೇಶನ್ ಶರಾವತಿ ಕಣಿವೆಯಲ್ಲಿ ಭೂಗತ ಬೃಹತ್ ಜಲವಿದ್ಯುತ್ ಯೋಜನೆಯ ತಯಾರಿಯಲ್ಲಿದೆ. ಅರ್ಧ ಸ್ಥಳ ಸಮೀಕ್ಷೆಯೇ ಪೂರ್ಣ ಆಗಿರದಿದ್ದರೂ ಗಡಿಬಿಡಿಯಲ್ಲಿ ಡಿಪಿಆರ್(ವಿಸ್ತ್ರತ ಯೋಜನಾ ವರದಿ) ತಯಾರಿಸಲಾಗಿದೆ. ಪರಿಸರ ಪರಿಣಾಮ ವರದಿ ಸಿದ್ಧಗೊಂಡಿದ್ದು, ಪರಿಸರಕ್ಕೆ ಹಾನಿ ಇಲ್ಲ ಎಂದು ಇಐಎ ನಿರ್ಮಾಣ ಸಂಸ್ಥೆಗೆ ವರದಿ ನೀಡಿದೆ ಎಂದು ವೃಕ್ಷಲಕ್ಷದ ಅನಂತ ಹೆಗಡೆ ಅಶೀಸರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇತ್ತ ಪರಿಸರ ಸಂಘಟನೆಗಳು ಹೊನ್ನಾವರ, ಸಾಗರಗಳಲ್ಲಿ ಜನರ ಅಹವಾಲು ಸಭೆ ನಡೆಸಲು ಆಗ್ರಹ ಮಾಡುತ್ತಲೇ ಇವೆ. ಆದರೆ, ಅತ್ತ ಬೆಂಗಳೂರಲ್ಲಿ ರಾಜ್ಯ ಅರಣ್ಯ ಇಲಾಖೆ ಶರಾವತಿ ಕಣಿವೆ ಧ್ವಂಸ ಮಾಡುವ ಜಲವಿದ್ಯುತ್ ಯೋಜನೆಗೆ ಒಪ್ಪಿಗೆ ನೀಡಿದೆ. ಅರಣ್ಯ ಪರವಾನಗಿ ಪ್ರಸ್ತಾವನೆಗೆ ಕೇಂದ್ರ ಸರ್ಕಾರದ ಅರಣ್ಯ ಮಂತ್ರಾಲಯದ ಅನುಮತಿ ಪಡೆಯಲು ಗಡಿಬಿಡಿ ತಯಾರಿ ನಡೆದಿದೆ. ಈಗಾಗಲೇ ಬೃಹತ್ ಜಲವಿದ್ಯುತ್ ಯೋಜನೆಯ ಗುತ್ತಿಗೆಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.ಮಾಹಿತಿ ಇಲ್ಲ: ಹೊನ್ನಾವರ ತಾಲೂಕಿನ ಶರಾವತಿ ನದಿ ತೀರದಲ್ಲಿ ರೈತರು, ವನವಾಸಿಗಳು, ಮೀನುಗಾರರು ಲಕ್ಷ ಜನರಿದ್ದಾರೆ. ಇಲ್ಲಿನ ಗ್ರಾಮ ಪಂಚಾಯಿತಿ- ಗ್ರಾಮ ಸಭೆಗಳ ಒಪ್ಪಿಗೆ ಪಡೆಯದೇ ಯೋಜನೆ ಜಾರಿ ಹೇಗೆ ಸಾಧ್ಯ ಎಂದು ಶಿರಸಿ, ಶಿವಮೊಗ್ಗಾ, ಹೊನ್ನಾವರ, ಸಾಗರ, ಬೆಂಗಳೂರು ಎಲ್ಲೆಡೆ ಪ್ರಶ್ನಿಸಲಾಗಿದೆ.
ಶರಾವತಿ ಕಣಿವೆಯಲ್ಲಿ ಭೂಗತ ಯೋಜನೆ ಬೇಡ, ಕಣಿವೆ ಉಳಿಸಿ ಎಂದು ೨ ವರ್ಷದಿಂದ ಜನರು ಧ್ವನಿ ಎತ್ತಿದ್ದಾರೆ. ಶರಾವತಿ ಕಣಿವೆ ಸೇರಿದಂತೆ ಘಟ್ಟ ಪ್ರದೇಶದಲ್ಲಿ ಭಾರೀ ಭೂ ಕುಸಿತ ಸಾಮಾನ್ಯವಾಗಿದೆ. ೪ ವರ್ಷ ಹಿಂದೆಯೇ ವಿಜ್ಞಾನಿಗಳು ಶರಾವತಿ ಕಣಿವೆ ಧಾರಣ ಸಾಮರ್ಥ್ಯ ಮುಗಿದಿದೆ ಎಂದು ಎತ್ತಿ ಹೇಳಿದ್ದರೂ ಈ ಯೋಜನೆಯ ಹೇರಿಕೆ ನಡೆದಿದೆ ಎಂದು ಅಶೀಸರ ಆತಂಕ ವ್ಯಕ್ತಪಡಿಸಿದ್ದಾರೆ.ಸಿಹಿ ನೀರು ಇಲ್ಲ: ಶರಾವತಿ ನದಿ ಸಮುದ್ರ ಸೇರುವ ಸ್ಥಳದಿಂದ ಗೇರುಸೊಪ್ಪವರೆಗೆ ನದಿಯಲ್ಲಿ ಉಪ್ಪು ನೀರು ಪ್ರತಿವರ್ಷ ಮೇಲೆ ಮೇಲೆ ಹೆಚ್ಚಾಗುತ್ತಿದೆ. ಭೂಗತ ಯೋಜನೆ ಜಾರಿಯಿಂದ ಗೇರುಸೊಪ್ಪ ಡ್ಯಾಂನಿಂದ ಬೇಸಿಗೆಯಲ್ಲಿ ನದಿಗೆ ನೀರೇ ಬರುವುದಿಲ್ಲ. ಆಗ ಗೇರುಸೊಪ್ಪದಿಂದ ಹೊನ್ನಾವರದವರೆಗೆ ಶರಾವತಿ ನದಿ ಉಪ್ಪು ನೀರಿನ ನದಿ ಆಗಲಿದೆ ಎಂಬ ಸಂಗತಿ ರೈತರಿಗೆ, ಮೀನುಗಾರರಿಗೆ ತಿಳಿದೇ ಇಲ್ಲ. ಆದರೆ ಈ ಬಗ್ಗೆ ಗೊತ್ತಿದ್ದೂ, ಜನಪ್ರತಿನಿಧಿಗಳು ಇತ್ತೀಚಿನ ಅಧಿವೇಶನದಲ್ಲಿ ಧ್ವನಿ ಎತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ವೈಜ್ಞಾನಿಕ ವರದಿ: ಭಾರತೀಯ ವಿಜ್ಞಾನ ಸಂಸ್ಥೆ ಶರಾವತಿ ನದಿ ನೀರಿನ ಕಣಿವೆ ಪರಿಸ್ಥಿತಿ ಬಗ್ಗೆ ಸಮಗ್ರ ವರದಿ ನೀಡಿದೆ. ಈ ವರದಿಯನ್ನು ಕರ್ನಾಟಕ ಪವರ್ ಕಾರ್ಪೋರೇಶನ್ ಕಪಾಟಿನಲ್ಲಿ ಬೀಗ ಹಾಕಿ ಭದ್ರವಾಗಿ ಇಟ್ಟಿದೆ. ಅತ್ತ, ಪರಿಸರ ಸಂಘ ಸಂಸ್ಥೆಗಳು, ರೈತರ ವಿರೋಧ, ಪ್ರತಿಭಟನೆ ಬಗ್ಗೆ ಕೆಪಿಸಿ ಹಾಗೂ ಸರ್ಕಾರ ನಿರ್ಲಕ್ಷ್ಯ ತೋರಿದೆ. ಈ ಮಧ್ಯೆ ರಾಜ್ಯ ಅರಣ್ಯ, ಪರಿಸರ ಸಚಿವರು ಯೋಜನೆಗೆ ಬೆಂಬಲ ನೀಡಿದ್ದಾರೆಯೇ ಎಂಬ ಪ್ರಶ್ನೆಯನ್ನು ಮುಂದಿಡಲಾಗಿದೆ ಎಂದು ಹೇಳಿದ್ದಾರೆ.ರೈತರ ಬದುಕು ಅತಂತ್ರ: ಶರಾವತಿ ನದಿಯಿಂದ(ಮಾವಿನ ಹೊಳೆ) ಹೊನ್ನಾವರಕ್ಕೆ ಕುಡಿಯುವ ನೀರು ಸರಬರಾಜಾಗುತ್ತಿದೆ. ಬಹಳ ಹಿಂದೆ ಮುರ್ಡೇಶ್ವರಕ್ಕೆ ಇದೇ ನದಿಯಿಂದ ನೀರಿನ ಯೋಜನೆ ಜಾರಿ ಆಗಿದೆ. ಲಕ್ಷಾಂತರ ರೈತರು, ಮೀನುಗಾರರು, ನದಿ ತೀರದಲ್ಲಿ ತೆಂಗು, ಅಡಕೆ, ಭತ್ತ, ನದಿ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ. ಭೂಗತ ವಿದ್ಯುತ್ ಯೋಜನೆಯಿಂದ ಇವರ ಬದುಕು ಅತಂತ್ರವಾಗಲಿದೆ.
ಶೀಘ್ರ ಜನಾಂದೋಲನಶಿರಸಿಯಲ್ಲಿ ನಡೆದ ರಾಜ್ಯ ಪರಿಸರ ಸಮ್ಮೇಳನ, ಮೂಡಬಿದ್ರೆಯ ಕೆರೆ ಸಮ್ಮೇಳನ, ಹೊಸನಗರ, ಸಾಗರದ ಮಲೆನಾಡು ಪರಿಸರ ಸಮಾವೇಶಗಳಲ್ಲಿ ಶರಾವತಿ ಕಣಿವೆ ಉಳಿಸಿ ನಿರ್ಣಯ ಕೈಗೊಳ್ಳಲಾಗಿದೆ. ೪ ತಿಂಗಳು ಹಿಂದೆ ಶಿವಮೊಗ್ಗದಲ್ಲಿ ಅರಣ್ಯ ಸಚಿವರು, ರಾಜ್ಯ ಅರಣ್ಯ ಅಧಿಕಾರಿಗಳ ಸಭೆಯಲ್ಲಿ ಶರಾವತಿ ಕಣಿವೆಯಲ್ಲಿ ಬೃಹತ್ ಯೋಜನೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಲಾಗಿದೆ. ೨೦೧೯ರಲ್ಲೇ ಜೋಗ- ತಳಕಳಲೆ ಬಳಿ ಸಮೀಕ್ಷಾ ಕಾರ್ಯಕ್ಕೆ ತಡೆ ಒಡ್ಡಲಾಗಿತ್ತು. ೨೦೨೫ರ ಜನವರಿ ೨ನೇ ವಾರದಲ್ಲಿ ಗೇರುಸೊಪ್ಪ, ಹೊನ್ನಾವರಗಳಲ್ಲಿ ಜಾಗೃತಿ ಸಭೆ ಜಾಥಾ ನಡೆಯಲಿದೆ ಎಂದು ವೃಕ್ಷಲಕ್ಷದ ಅನಂತ ಅಶೀಸರ ತಿಳಿಸಿದ್ದಾರೆ.