ಅರಕಲಗೂಡಲ್ಲಿ 283 ಮತಗಟ್ಟೆಯಲ್ಲಿ ಮತದಾನಕ್ಕೆ ಸಿದ್ಧತೆ

| Published : Apr 03 2024, 01:33 AM IST

ಸಾರಾಂಶ

ಲೋಕಸಭಾ ಚುನಾವಣೆಗೆ ಎಲ್ಲಾ ರೀತಿಯ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಎಸ್.ಧರ್ಮಪಾಲ್ ಹೇಳಿದರು. ಅರಕಲಗೂಡು ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಸಹಾಯಕ ಚುನಾವಣಾಧಿಕಾರಿ ಎಸ್.ಧರ್ಮಪಾಲ್ । ಲೋಕಸಭೆ ಚುನಾವಣೆ

ಅರಕಲಗೂಡು: ಲೋಕಸಭಾ ಚುನಾವಣೆಗೆ ಎಲ್ಲಾ ರೀತಿಯ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಎಸ್.ಧರ್ಮಪಾಲ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ವಿಧಾನಸಭಾ ಕ್ಷೇತ್ರದ 6 ಹೋಬಳಿಗಳಲ್ಲಿ 283 ಮತಗಟ್ಟೆಗಳು ಇದ್ದು 2.30 ಲಕ್ಷ ಮತದಾರರು ಇದ್ದಾರೆ. ಮತಗಟ್ಟೆಗಳಲ್ಲಿ ಎಲ್ಲಾ ರೀತಿಯ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ, ಕಳೆದ ಬಾರಿ ಶೇ.77ರಷ್ಟು ಮತದಾನವಾಗಿದ್ದು, ಈ ಬಾರಿ ಇದನ್ನು ಶೇ 82ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ. 85 ವರ್ಷ ವಯೋಮಿತಿಯವರು ಹಾಗೂ ವಿಕಲಚೇತನರು ಮನೆಯಿಂದಲೇ ಮತಚಲಾಯಿಸಲು ಹಾಗೂ ಚುನಾವಣಾ ಕರ್ತವ್ಯನಿರತರು ಮತ್ತು ಗಡಿಯಲ್ಲಿರುವ ಸೈನಿಕರ ಮತಚಲಾವಣೆಗೂ ಅಗತ್ಯ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.

ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮದಲಾಪುರ, ಹಿಪ್ಪಲಿ, ಸಿದ್ದಾಪುರ ಗೇಟ್, ಕೇರಾಳಪುರ, ದೊಡ್ಡಹಳ್ಳಿ ಸೇರಿದಂತೆ 5 ಚೆಕ್‌ಪೋಸ್ಟ್ ತೆರೆಯಲಾಗಿದ್ದು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ಲೈಯಿಂಗ್ ಸ್ಕ್ವಾಡ್, ವಿಡಿಯೋ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಸ್ವೀಪ್ ಸಮಿತಿ ಮೂಲಕ ಮತದಾರರ ಜಾಗೃತಿ ಕುರಿತು ಕಾರ್ಯಕ್ರಮ ರೂಪಿಸಲಾಗಿದೆ. ಏ.7 ರಂದು ಚುನಾವಣಾ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ದೊಡ್ಡಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಸೂಕ್ತ ದಾಖಲಾತಿ ಒದಗಿಸದ 85,500 ರು. ಹಣವನ್ನು ವಶಕ್ಕೆ ಪಡೆಯಲಾಗಿದೆ. ಚುನಾವಣೆಗೆ ಸಂಬಂದಿಸಿದಂತೆ ಮಾಹಿತಿ, ದೂರು ಇದ್ದಲ್ಲಿ 08175-220246 ಅಥವಾ ಸಹಾಯವಾಣಿ 1950 ಸಂಖ್ಯೆಗೆ ಮಾಹಿತಿ ನೀಡಬಹುದು ಎಂದು ತಿಳಿಸಿದರು.

ಅಬಕಾರಿ ಉಪನಿರೀಕ್ಷಕ ರಘು ಮಾತನಾಡಿ, ಅಕ್ರಮ ಮದ್ಯಮಾರಾಟ, ಸಾಗಣೆ ಕುರಿತು 134 ಪ್ರಕರಣ ದಾಖಲಿಸಿದ್ದು 8 ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ. 33 ಲಕ್ಷ ರು. ಮೌಲ್ಯದ 2,390 ಲೀ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಒ ಪ್ರಕಾಶ್, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ್, ಶಿರಸ್ತೇದಾರ್ ಸ್ವಾಮಿ ಇದ್ದರು.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಹಾಯಕ ಚುನಾವಣಾಧಿಕಾರಿ ಎಸ್.ಧರ್ಮಪಾಲ್.