ಅನಧಿಕೃತ ಲೇಔಟ್‌ಗಳ ಸಮೀಕ್ಷೆಗೆ ಸಿದ್ಧತೆ!

| Published : Oct 24 2025, 01:00 AM IST

ಸಾರಾಂಶ

ಅನಧಿಕೃತ ವಿನ್ಯಾಸಗಳಲ್ಲಿನ ಸಮಸ್ಯೆ ಬಗ್ಗೆ ಅರಿಯಲು, ಸಮೀಕ್ಷೆ ಮಾಡಲು ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದ್ದೇನೆ. ಆದಷ್ಟು ಶೀಘ್ರದಲ್ಲೇ ಸಮೀಕ್ಷೆ ಪ್ರಾರಂಭವಾಗಲಿದೆ ಎಂದು ಹುಡಾ ಅಧ್ಯಕ್ಷ ಶಾಕೀರ ಸನದಿ ಹೇಳಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿರುವ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಇದೀಗ ಅನಧಿಕೃತ ಲೇಔಟ್‌ಗಳ ಸಮೀಕ್ಷೆಗೆ ಮುಂದಾಗಿದೆ. ಅದು ಕೂಡ ಬರೀ ಈಗಿನದ್ದಷ್ಟೇ ಅಲ್ಲದೇ ಕಳೆದ 30 ವರ್ಷಗಳಿಂದ ಎಷ್ಟು ಅನಧಿಕೃತ ಲೇಔಟ್‌ಗಳು ನಿರ್ಮಾಣವಾಗಿವೆ. ಅವುಗಳ ಸ್ಥಿತಿ ಸದ್ಯ ಏನಿದೆ ಎಂಬುದರ ಸರ್ವೇ ನಡೆಸಲಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ಸಾಕಷ್ಟು ಅನಧಿಕೃತ ಲೇಔಟ್‌ಗಳು ನಿರ್ಮಾಣಗೊಂಡಿವೆ. ಕಳೆದ 30-40 ವರ್ಷಗಳ ಹಿಂದೆ ಭೂಮಿಯ ದರ ಕಡಿಮೆ ಇತ್ತು. ಆಗ ಕೆಲ ಕೃಷಿಕರು ಕೃಷಿ ಬಿಟ್ಟು ತಮ್ಮ ಜಮೀನಿನ್ನೇ ನಿವೇಶನಗಳಂತೆ ರಚಿಸಿ, ಬಾಂಡ್‌ಗಳ ಅಥವಾ ನೋಟರಿ ದಾಖಲೆ ಮೂಲಕ ಬರೆದು ಮಾರಾಟ ಮಾಡಿರುವುದುಂಟು. ಅವುಗಳಿಗೆ ಆಗಿನ ದರದಂತೆ ಪೂರ್ಣ ಹಣ ಕೊಟ್ಟು ಕಟ್ಟಿಸಿಕೊಂಡು ಸಾವಿರಾರು ಕುಟುಂಬಗಳು ಅಲ್ಲಿ ವಾಸವಾಗಿವೆ. ಇಂಥ ವಿನ್ಯಾಸಗಳು ನಗರಾಭಿವೃದ್ಧಿ ಪ್ರಾಧಿಕಾರದ ನಿಯಮದಡಿ ಅನುಮೋದನೆ ಆಗಿರುವುದಿಲ್ಲ. ಹೀಗೆ ಹತ್ತಾರು ಕಡೆಗಳಲ್ಲಿ ಅನಧಿಕೃತ ವಿನ್ಯಾಸಗಳು ನಿರ್ಮಾಣಗೊಂಡು, ಅಲ್ಲಿ ಹಲವು ಕುಟುಂಬಗಳು ವಾಸವಾಗಿವೆ. ಖರೀದಿ ಪತ್ರ (ಸೆಲ್‌ಡಿಡ್‌) ಇರುವುದಿಲ್ಲ. ಆದರೆ, ಅಲ್ಲಿ ವಾಸವಾಗಿರುವ ಕಾರಣ ವಿದ್ಯುತ್‌ ಬಿಲ್‌, ನೀರಿನ ಟ್ಯಾಕ್ಸ್‌ ಪಾವತಿಸುತ್ತಿದ್ದಾರೆ.

ಇದೀಗ ಜಮೀನು ಕೊಟ್ಟಂತಹ ಮಾಲೀಕರಲ್ಲಿ ಹಲವರು ಇಲ್ಲ. ಜತೆಗೆ ಭೂಮಿಯ ದರವೂ ಹತ್ತು ಪಟ್ಟು ಹೆಚ್ಚಾಗಿದೆ. ಹೀಗಾಗಿ ಆಗ ಬಾಂಡ್‌ಗಳ ಮೇಲೆ ಬರೆದುಕೊಟ್ಟ ಮಾಲೀಕರ ವಾರಸುದಾರರೋ, ಅವರ ಮೊಮ್ಮಕ್ಕಳೋ ನಮ್ಮ ಜಾಗೆಯಲ್ಲಿ ಅನಧಿಕೃತವಾಗಿ ವಾಸವಾಗಿದ್ದೀರಿ ಎಂದು ದಬಾಯಿಸುವುದು. ಭೂಮಿಯನ್ನು ವಶಕ್ಕೆ ಪಡೆಯಲು ಯತ್ನಿಸುವುದು, ನಿವಾಸಿಗಳಿಗೆ ಕಿರುಕುಳ ನೀಡುವುದು, ಪ್ರತಿಯೊಬ್ಬರು ಇಂತಿಷ್ಟು ದುಡ್ಡು ಕೊಟ್ಟರೆ ಮಾತ್ರ ಸುಮ್ಮನೆ ಬಿಡುತ್ತೇವೆ ಅಥವಾ ನ್ಯಾಯಾಲಯಕ್ಕೆ ಹೋಗುತ್ತೇವೆ. ನಮ್ಮ ಜಾಗೆಯಲ್ಲಿ ಅನಧೀಕೃತವಾಗಿ ಇರುವಂತಿಲ್ಲ, ಜಾಗೆ ಖಾಲಿ ಮಾಡಿ ಎಂದು ಒತ್ತಾಯಿಸುವ, ಹೆದರಿಸುವ ಕೆಲಸಗಳು ನಡೆಯುತ್ತವೆ. ಇದರಿಂದ ಹೆದರಿ ಅಲ್ಲಿ ವಾಸವಾಗಿರುವವರು ಇಂತಿಷ್ಟು ಎಂದು ದುಡ್ಡು ಕೊಡುತ್ತಿರುವುದುಂಟು. ಇದು ಕೆಲವರಿಗೆ ದುಡ್ಡು ಮಾಡುವ ಮಾರ್ಗವೂ ಆದಂತಾಗಿದೆ ಎಂಬುದು ಹಲವು ದೂರುಗಳು ಬಂದಿವೆಯಂತೆ.

ಸಮೀಕ್ಷೆ:

ಈ ರೀತಿ ಅನಧಿಕೃತ ವಿನ್ಯಾಸಗಳು ಹುಬ್ಬಳ್ಳಿ-ಧಾರವಾಡದಲ್ಲಿ ಎಷ್ಟಿವೆ. ಅಭಿವೃದ್ಧಿಪಡಿಸಿದವರ ಹೆಸರು, ವಿಳಾಸ, ರಸ್ತೆ, ಮೂಲಸೌಕರ್ಯ ಸ್ಥಿತಿ, ವಿನ್ಯಾಸದಲ್ಲಿನ ಕುಟುಂಬಗಳ ಸಂಖ್ಯೆ, ಖರೀದಿದಾರರ ಮಾಹಿತಿ, ಉಲ್ಲಂಘನೆಯ ಸ್ವರೂಪ, ಪ್ರಮಾಣ, ನ್ಯಾಯಾಂಗ ಪ್ರಕರಣಗಳಿದ್ದರೆ ವಿವರ ಹೀಗೆ ಪ್ರತಿಯೊಂದು ಮಾಹಿತಿಯನ್ನು ಪಡೆದುಕೊಂಡು ವರದಿ ಸಲ್ಲಿಸುವಂತೆ ಹುಡಾ ಅಧಿಕಾರಿಗಳಿಗೆ ಸೂಚಿಸಿದೆ.

ಅಧಿಕಾರಿ ವರ್ಗ ವರದಿ ಕೊಟ್ಟ ಬಳಿಕ ಮುಂದೆ ಏನು ಮಾಡಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಿದೆ ಎಂದು ಹುಡಾ ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ದಶಕಗಳ ಹಿಂದೆ ನಿರ್ಮಾಣವಾಗಿರುವ ಅನಧಿಕೃತ ವಿನ್ಯಾಸ, ನಿವಾಸಿಗಳನ್ನು ಮೂಲ ಮಾಲೀಕರ ವಾರಸುದಾರರರಿಂದ ಅನುಭವಿಸುತ್ತಿರುವ ಕಿರುಕುಳದಿಂದ ಮುಕ್ತ ಮಾಡಲು ಹುಡಾ ಮೊದಲ ಹೆಜ್ಜೆ ಇಟ್ಟಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ.!ಮುಖ್ಯಮಂತ್ರಿಗೆ ಪತ್ರ

ಈ ನಡುವೆ ಇದು ಬರೀ ಹುಬ್ಬಳ್ಳಿ-ಧಾರವಾಡದಲ್ಲಿನ ಸಮಸ್ಯೆಯಲ್ಲ. ರಾಜ್ಯದ ಪ್ರತಿ ನಗರ, ಪಟ್ಟಣ ಅಷ್ಟೇ ಅಲ್ಲ. ಹಳ್ಳಿಗಳಲ್ಲೂ ಇಂತಹ ಸಮಸ್ಯೆ ಕಾಣುತ್ತೇವೆ. ಮುಂದೆ ಇದು ಸಾಮಾಜಿಕ ಅಶಾಂತಿ ಹಾಗೂ ಕಾನೂನಿನ ಸವಾಲಿನ ರೂಪ ಪಡೆಯುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಆದಕಾರಣ ರಾಜ್ಯದಲ್ಲೇ ಇಂಥ ಸಮೀಕ್ಷೆ ಮಾಡಬೇಕು. ಇಂಥ ವಿನ್ಯಾಸಗಳನ್ನು ಕಾನೂನುಬದ್ಧವಾಗಿ ನಿಯಮಿತಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಹಾಗಾದರೆ ಮುಂದೆ ಭೂ ಸುಧಾರಣೆ ಕ್ರಾಂತಿಯಂತೆ ಪರಿಣಿಮಿಸುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಹುಡಾ ಅಧ್ಯಕ್ಷ ಶಾಕೀರ ಸನದಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ಅನಧಿಕೃತ ವಿನ್ಯಾಸಗಳಲ್ಲಿ ಸಮಸ್ಯೆ ಬಗ್ಗೆ ಅರಿಯಲು, ಸಮೀಕ್ಷೆ ಮಾಡಲು ಅಧಿಕಾರಿ ವರ್ಗಕ್ಕೆ ಸೂಚನೆ ನೀಡಿದ್ದೇನೆ. ಆದಷ್ಟು ಶೀಘ್ರದಲ್ಲೇ ಸಮೀಕ್ಷೆ ಪ್ರಾರಂಭವಾಗಲಿದೆ. ವರದಿ ಪಡೆದು ಸರ್ವ ಸದಸ್ಯರ ಸಭೆಯಲ್ಲಿ ಚರ್ಚಿಸಿ ಮುಂದೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸಲಾಗುವುದು.

ಶಾಕೀರ ಸನದಿ, ಅಧ್ಯಕ್ಷರು, ಹುಡಾ