ಹಾರಂಗಿ ಡ್ಯಾಂ ನಿರ್ಬಂಧಿತ ಪ್ರದೇಶದಲ್ಲಿ ವಾಟರ್ ಸ್ಪೋರ್ಟ್ಸ್‌ಗೆ ಸಿದ್ಧತೆ
KannadaprabhaNewsNetwork | Published : Oct 23 2023, 12:15 AM IST
ಹಾರಂಗಿ ಡ್ಯಾಂ ನಿರ್ಬಂಧಿತ ಪ್ರದೇಶದಲ್ಲಿ ವಾಟರ್ ಸ್ಪೋರ್ಟ್ಸ್‌ಗೆ ಸಿದ್ಧತೆ
ಸಾರಾಂಶ
ಜಲಾಶಯದಲ್ಲಿ ಸಾಹಸಿ ವಾಟರ್ ಸ್ಪೋರ್ಟ್ಸ್ ಆರಂಭಿಸಲು ಕೆಲವರು ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ದೂರು ನೀಡಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕೀರ್ತನ ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ಸಮೀಪದ ಹಾರಂಗಿ ಅಣೆಕಟ್ಟು ಒಳಭಾಗದ ನಿರ್ಬಂಧಿತ ಪ್ರದೇಶದಲ್ಲಿ ಸಾಹಸಿ ವಾಟರ್ ಸ್ಪೋರ್ಟ್ಸ್‌ಗೆ ನಿಯಮಬಾಹಿರವಾಗಿ ಅವಕಾಶ ನೀಡಿರುವುದಾಗಿ ಸಾರ್ವಜನಿಕರ ದೂರುಗಳು ಕೇಳಿ ಬಂದಿವೆ. ಹಾರಂಗಿ ಅಣೆಕಟ್ಟಿನ ಉಸ್ತುವಾರಿ ಅಧಿಕಾರಿಗಳ ಗಮನಕ್ಕೆ ಬಾರದೆ ಕಳೆದ ಕೆಲವು ಸಮಯದಿಂದ ಜಲಾಶಯದ ಒಳಭಾಗದಲ್ಲಿ ವಾಟರ್ ಸ್ಪೋರ್ಟ್ಸ್‌ಗೆ ಸಿದ್ಧತೆಗಳು ನಡೆಯುತ್ತಿರುವುದು ಕಂಡು ಬಂದಿದೆ. ಈ ಚಟುವಟಿಕೆಗೆ ಅಣೆಕಟ್ಟು ಅಧಿಕಾರಿಗಳಿಂದ, ಕಾವೇರಿ ನೀರಾವರಿ ನಿಗಮ ಮೂಲಕ ಅಧಿಕೃತ ಅನುಮತಿ ನೀಡಿರುವುದಿಲ್ಲ ಎಂದು ಅಣೆಕಟ್ಟು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಣೆಕಟ್ಟಿನ ಭದ್ರತೆ ದೃಷ್ಟಿಯಲ್ಲಿ ಈ ರೀತಿಯ ಚಟುವಟಿಕೆಗಳು ನಡೆಸುವಂತಿಲ್ಲ ಎಂದು ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ. ಅಣೆಕಟ್ಟು ಸಮೀಪದಲ್ಲಿ ಅರಣ್ಯ ಇಲಾಖೆ ಸಾಕಾನೆ ಶಿಬಿರ ಒಂದನ್ನು ನಿರ್ಮಿಸಿದ್ದು ಸುಮಾರು 40 ಎಕರೆ ಜಾಗ ಕೃಷಿ ಇಲಾಖೆಗೆ ಸೇರಿದ್ದು ಅದು ಮೂಲವಾಗಿ ಅಣೆಕಟ್ಟು ವ್ಯಾಪ್ತಿಗೆ ಒಳಪಡುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೀಗ ಜಲಾಶಯದಲ್ಲಿ ಸಾಹಸಿ ವಾಟರ್ ಸ್ಪೋರ್ಟ್ಸ್ ಆರಂಭಿಸಲು ಕೆಲವರು ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಸ್ಥಳೀಯ ನಿವಾಸಿಗಳು ಅಧಿಕಾರಿಗಳಿಗೆ ದೂರು ನೀಡಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಬಿಗಿ ಭದ್ರತೆ ಇದ್ದರೂ ಅನಧಿಕೃತ ಚಟುವಟಿಕೆ: ಮೂರು ವರ್ಷಗಳಿಂದ ಅಣೆಕಟ್ಟು ಎದುರು ಭಾಗದಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ದಿನದ 24 ಗಂಟೆ ಕಾಲ ಅಣೆಕಟ್ಟಿನ ಭದ್ರತಾ ವ್ಯವಸ್ಥೆ ನೋಡಿಕೊಳ್ಳುತ್ತಿರುವುದು ಒಂದೆಡೆಯಾದರೆ, ಇದೀಗ ಇಲಾಖೆಗಳ ಗಮನಕ್ಕೆ ಬಾರದೆ ಜಲಾಶಯದಲ್ಲಿ ಸಾಹಸಿ ಚಟುವಟಿಕೆಗಳ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅತ್ತೂರು ಭಾಗದ ನಿವಾಸಿಗಳು ಅಧಿಕಾರಿಗಳಿಗೆ ದೂರು ನೀಡಿದ್ದು, ಅಣೆಕಟ್ಟಿನ ಸಮೀಪ ಸಾರ್ವಜನಿಕರು, ಪ್ರವಾಸಿಗರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಈ ನಡುವೆ ರಾಜ್ಯ ಕೈಗಾರಿಕಾ ಭದ್ರತಾ ಪಡೆಗಳ ತಂಡದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಅಣೆಕಟ್ಟಿನ ಭದ್ರತೆ ಹಿನ್ನೆಲೆಯಲ್ಲಿ ಯಾವುದೇ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬಾರದು ಎಂದು ಅವರು ತಿಳಿಸಿದ್ದಾರೆ. ಸರ್ಕಾರಿ ಆದೇಶದಂತೆ ಅಣೆಕಟ್ಟು ಪ್ರದೇಶದ ವ್ಯಾಪ್ತಿಯು ನಿರ್ಬಂಧಿತ ಪ್ರದೇಶವಾಗಿದ್ದು, ಈ ವ್ಯಾಪ್ತಿಯ ಪ್ರದೇಶಗಳಲ್ಲಿ ಅತಿಕ್ರಮ ಪ್ರವೇಶ ಶಿಕ್ಷಾರ್ಹ ಅಪರಾಧ ಎಂದು ಕಾವೇರಿ ನೀರಾವರಿ ನಿಗಮ ಸೂಚನಾ ಫಲಕ ಅಳವಡಿಸಲಾಗಿದ್ದರೂ, ಇಲ್ಲಿ ಇದೀಗ ನಿಯಮದ ಉಲ್ಲಂಘನೆ ಆಗುತ್ತಿರುವುದು ಕಂಡು ಬಂದಿದೆ. ಈ ಸಾಹಸಿ ಸ್ಪೋರ್ಟ್ಸ್ ಪ್ರದೇಶ ಅತ್ತೂರು ಮೀಸಲು ಅರಣ್ಯಕ್ಕೆ ತಾಗಿಕೊಂಡಿದ್ದು ನಿರಂತರ ಆನೆಗಳ ಸಂಚಾರ, ವನ್ಯಜೀವಿಗಳ ಓಡಾಟ ಇಲ್ಲಿ ಸಾಮಾನ್ಯವಾಗಿದೆ. ಇದರೊಂದಿಗೆ ಈ ಪ್ರದೇಶ ಮೊಸಳೆಗಳ ಆವಾಸ ಸ್ಥಾನವಾಗಿದ್ದು ಬೋಟ್‌ಗಳು ಸಂಚರಿಸಿದಲ್ಲಿ ಜಲಾಶಯದ ನೀರು ಕಲುಷಿತಗೊಂಡು ಜಲಚರಗಳ ಜೀವಕ್ಕೆ ಅಪಾಯವಾಗಲಿದೆ. ಜಲಾಶಯದಲ್ಲಿ ನೀರಿನ ಕೆಳಭಾಗದಲ್ಲಿ ಭಾರಿ ಗಾತ್ರದ ಮರಗಳು ನೆಲೆಕಂಡಿದ್ದು ಇವುಗಳು ಪ್ರವಾಸಿಗರಿಗೆ ಅಪಾಯವನ್ನು ಒಡ್ಡುವ ಸಾಧ್ಯತೆಗಳೂ ಇವೆ. ಯಾವುದೇ ಚಟುವಟಿಕೆಗಳಿಗೆ ಅವಕಾಶ ಇಲ್ಲ: ಶಾಸಕ ಮಂತರ್ ಗೌಡ ಹಾರಂಗಿಗೆ ಶನಿವಾರ ಭೇಟಿ ನೀಡಿದ್ದ ಮಡಿಕೇರಿ ಕ್ಷೇತ್ರ ಶಾಸಕ ಮಂತರ್ ಗೌಡ ಅವರು ಕನ್ನಡಪ್ರಭದೊಂದಿಗೆ ಪ್ರತಿಕ್ರಿಯಿಸಿ, ಅಣೆಕಟ್ಟು ಸಮೀಪದಲ್ಲಿ ಯಾವುದೇ ರೀತಿಯ ಸಾಹಸಿ ಸ್ಪೋರ್ಟ್ಸ್ ಅಥವಾ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುವುದಿಲ್ಲ ಎಂದು ಸ್ವಸ್ಥಪಡಿಸಿದರು. ಅಲ್ಲದೆ ಈ ಸಂಬಂಧ ಅಣೆಕಟ್ಟು ಅಧಿಕಾರಿಗಳಿಗೆ ಸೂಚನೆ ನೀಡಿದರು. --- ಇಲ್ಲಿ ವಾಟರ್ ಸ್ಪೋರ್ಟ್ಸ್ ನಡೆಸಲು ನಾವು ಯಾವುದೇ ರೀತಿಯ ಅನುಮತಿ ನೀಡಿಲ್ಲ. ಈ ಬಗ್ಗೆ ಜಲಸಂಪನ್ಮೂಲ ಹಿರಿಯ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಲಿಖಿತ ಮಾಹಿತಿ ಒದಗಿಸಲಾಗಿದೆ - ದೇವೇಗೌಡ, ಹಾರಂಗಿ ಅಣೆಕಟ್ಟು ಕಾರ್ಯಪಾಲಕ ಅಭಿಯಂತರ