ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಎಲ್ಲೆಲ್ಲೂ ದೀಪಾವಳಿಯ ಸಡಗರ, ಸಂಭ್ರಮೋಲ್ಲಾಸ ಶುರುವಾಗಿದೆ. ಪ್ರತಿ ಬಾರಿ ದೀಪಾವಳಿಯಲ್ಲೂ ಮನೆಗಳಲ್ಲಿ ಹಣತೆ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಇದಕ್ಕೆಂದೇ ಮಂಗಳೂರಿನ ವಿಶೇಷ ಮಕ್ಕಳು ತಾವೂ ಕಡಿಮೆ ಇಲ್ಲ ಎಂಬಂತೆ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವ ಸಂದೇಶ ರವಾನಿಸಿದ್ದಾರೆ. ಈ ವಿಶೇಷ ಮಕ್ಕಳು ದೀಪಾವಳಿಯ ಬಣ್ಣದ ಹಣತೆ ತಯಾರಿಸಿ ಮನೆ ಬೆಳಗಲು ಕಾಯುತ್ತಿದ್ದಾರೆ.ಇವರೇ ಮಂಗಳೂರಿನ ವಿ.ಟಿ.ರಸ್ತೆಯಲ್ಲಿ ಸೇವಾಭಾರತಿಯ ಅಂಗ ಸಂಸ್ಥೆ ಚೇತನಾ ಬಾಲ ವಿಕಾಸ ಕೇಂದ್ರದ ವಿಶೇಷ ಚೇತನ ಮಕ್ಕಳು. ಈಗಂತೂ ದೀಪಾವಳಿ ಸಡಗರ. ವಿಶೇಷ ಮಕ್ಕಳು ಹಣತೆಗಳನ್ನು ರಾಶಿ ಹಾಕಿ ಬಣ್ಣ ಬಣ್ಣದ ಚಿತ್ತಾರ ಮೂಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಅದುವೇ ಪ್ರಪಂಚ, ಅದರಲ್ಲೇ ಖುಷಿ ಕಾಣುತ್ತಾರೆ. ಅವರ ನೋವಿನಲ್ಲಿ ಭಾಗಿಯಾಗಬೇಕಿದ್ದರೆ ಹಣತೆ ಖರೀದಿಸಿ ಪ್ರೋತ್ಸಾಹಿಸಿ. ಚೇತನಾ ಬಾಲವಿಕಾಸ ಕೇಂದ್ರದಲ್ಲಿ ಒಟ್ಟು ಸೇರಿರುವ ವಿಶೇಷ ಮಕ್ಕಳಲ್ಲಿ ಸುಮಾರು 25 ವಿಧದ ಮಣ್ಣಿನ ಹಣತೆಗಳಿವೆ. ಇವುಗಳಿಗೆ ಆಕರ್ಷಕ ಬಣ್ಣ ತುಂಬುವುದರೊಂದಿಗೆ ಮತ್ತಷ್ಟು ಹೊಳಪು ನೀಡುತ್ತಾರೆ. ಮಕ್ಕಳ ಪೋಷಕರೂ ಕೂಡ ಇದಕ್ಕೆ ಸಾಥ್ ನೀಡುವುದು ವಿಶೇಷ. ಮಾರಾಟವಾದ ಹಣತೆಯಿಂದ ಬಂದ ಲಾಭವನ್ನು ಈ ಮಕ್ಕಳಿಗೆ ಪ್ರತಿ ವರ್ಷಾಂತ್ಯದ ಕಾರ್ಯಕ್ರಮದಲ್ಲಿ ಹಂಚಲಾಗುತ್ತದೆ. ಈ ದಿನಕ್ಕಾಗಿ ಮಕ್ಕಳು ಕಾಯುತ್ತಿರುತ್ತಾರೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.ಹಣತೆಯೊಂದೇ ಅಲ್ಲ...: ವಿಶೇಷ ಮಕ್ಕಳ ಸರ್ವಾಂಗೀಣ ಉನ್ನತಿಗೆ ಶ್ರಮಿಸುತ್ತಿರುವ ಸೇವಾಭಾರತಿ- ಚೇತನಾ ಬಾಲವಿಕಾಸ ಕೇಂದ್ರ ಕಲಿಕೆಯ ಜೊತೆಗೆ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಲೇ ಬರುತ್ತಿದೆ. ಬಟ್ಟೆಯ ಕೈಚೀಲ, ಕಾಗದದಿಂದ ಕವರ್ ತಯಾರಿಕೆ, ಗಿಫ್ಟ್ ಕವರ್, ಮೆಡಿಕಲ್ ಕವರ್, ಸ್ಕ್ರೀನ್ ಪೈಂಟಿಂಗ್, ಅಲಂಕಾರಿಕ ಹೂವುಗಳು, ಬಟ್ಟೆಯ ಮ್ಯಾಟ್‌ಗಳು, ಕ್ಯಾಂಡಲ್ ತಯಾರಿಕೆ ಹೀಗೆ ಒಂದಲ್ಲಾ ಒಂದು ಕರಕುಶಲ ವಸ್ತುಗಳ ತಯಾರಿಯಲ್ಲಿ ಇವರು ಕ್ರಿಯಾಶೀಲರಾಗಿರುತ್ತಾರೆ. ಇದೀಗ ದೀಪಾವಳಿ ಸಡಗರವಾದ್ದರಿಂದ ಹಣತೆಗೆ ಆದ್ಯತೆ ನೀಡಲಾಗಿದೆ.
ಆಕರ್ಷಕ ರೀತಿಯ ವಿವಿಧ ಗಾತ್ರಗಳ ಹಣತೆಗಳು 10 ರು.ನಿಂದ 60 ರು. ವರೆಗಿನ ದರದಲ್ಲಿ ಇಲ್ಲಿ ಲಭ್ಯ. ವಿಶೇಷ ಮಕ್ಕಳನ್ನು ಪ್ರೋತ್ಸಾಹಿಸಬೇಕೆಂದಿದ್ದರೆ ಚೇತನಾ ಬಾಲವಿಕಾಸ ಕೇಂದ್ರವನ್ನು ಸಂಪರ್ಕಿಸಬಹುದು. ನವೆಂಬರ್1 ರ ವರೆಗೆ ಬೆಳಗ್ಗೆ 9.30 ರಿಂದ ಸಂಜೆ 6 ಗಂಟೆ ವರೆಗೆ ಕೇಂದ್ರ ಹಣತೆಗಾಗಿ ತೆರೆದಿರಲಿದೆ. ಸಂಪರ್ಕ: 9449004899............
ಕಳೆದ ಮೂರು ತಿಂಗಳಿನಿಂದ ವಿಶೇಷ ಮಕ್ಕಳು ದೀಪಾವಳಿಗಾಗಿ ಹಣತೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಬೇರೆ ರಾಜ್ಯಗಳಿಂದಲೂ ಈ ಮಕ್ಕಳ ಹಣತೆಗಾಗಿ ಬೇಡಿಕೆ ಇದೆ. ಅದಕ್ಕಾಗಿ ಹಣತೆ ಶೃಂಗರಿಸುವ ಕಾರ್ಯ ಸಾಗಿದೆ.-ಸುಪ್ರಿತಾ, ಮುಖ್ಯಶಿಕ್ಷಕಿ, ಚೇತನಾ ಬಾಲ ವಿಕಾಸ ಕೇಂದ್ರ