ತೀರ್ಥಹಳ್ಳಿಯಲ್ಲಿ ಮಳೆ ಅತಂಕ ನಡುವೆ ಎಳ್ಳಮಾವಾಸ್ಯೆ ಜಾತ್ರೆಗೆ ಸಿದ್ಧತೆ

| Published : Jan 11 2024, 01:30 AM IST

ಸಾರಾಂಶ

ತೀರ್ಥಹಳ್ಳಿಯಲ್ಲಿ ಮಾತೃಹತ್ಯೆ ದೋಷವನ್ನು ನಿವಾರಿಸಿದ ಐತಿಹ್ಯದ ಪುರಾಣ ಪ್ರಸಿದ್ಧವಾದ ಪಟ್ಟಣದ ಎಳ್ಳಮಾವಾಸ್ಯೆ ಜಾತ್ರೆ ಗುರುವಾರದಿಂದ ಮೂರು ದಿನಗಳ ಪರ್ಯಂತ ನಡೆಯಲಿದೆ. ಮಳೆಯೂ ಆಗಾಗ ಸುರಿಯುವ ವಾತಾವರಣದಲ್ಲಿ ಜಾತ್ರೆ ಅಂಗವಾಗಿ ಶ್ರೀ ರಾಮೇಶ್ವರ ದೇವಸ್ಥಾನ ಸಂಕೀರ್ಣ ಸೇರಿದಂತೆ ಪಟ್ಟಣವನ್ನು ಅದ್ಧೂರಿಯ ಸಿದ್ಧತೆಯೊಂದಿಗೆ ಅಲಂಕಾರಗೊಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಮಾತೃಹತ್ಯೆ ದೋಷವನ್ನು ನಿವಾರಿಸಿದ ಐತಿಹ್ಯದ ಪುರಾಣ ಪ್ರಸಿದ್ಧವಾದ ಪಟ್ಟಣದ ಎಳ್ಳಮಾವಾಸ್ಯೆ ಜಾತ್ರೆ ಗುರುವಾರದಿಂದ ಮೂರು ದಿನಗಳ ಪರ್ಯಂತ ನಡೆಯಲಿದೆ. ಇದರ ಅಂಗವಾಗಿ ಶ್ರೀ ರಾಮೇಶ್ವರ ದೇವಸ್ಥಾನ ಸಂಕೀರ್ಣ ಸೇರಿದಂತೆ ಪಟ್ಟಣವನ್ನು ಅದ್ಧೂರಿಯ ಸಿದ್ಧತೆಯೊಂದಿಗೆ ಅಲಂಕಾರಗೊಳಿಸಲಾಗಿದೆ.

ರಾಮೇಶ್ವರ ದೇವಸ್ಥಾನ ಆವರಣ, ತುಂಗಾ ತೂಗು ಸೇತುವೆ ಹಾಗೂ ತುಂಗಾನದಿಯ ಇಕ್ಕೆಲಗಳು ಹಾಗೂ ಆಜಾದ್ ರಸ್ತೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಅಳವಡಿಸಿರುವ ವಿದ್ಯುತ್ ಅಲಂಕಾರದಿಂದ ಇಡೀ ಪಟ್ಟಣ ಝಗಮಗಿಸುತ್ತಿದೆ. ಜಾತ್ರೆ ಮೂರು ದಿನಗಳ ಪರ್ಯಂತ ರಾಮೇಶ್ವರ ಮಿತ್ರವೃಂದ ವತಿಯಿಂದ ರಾಮೇಶ್ವರ ದೇವಸ್ಥಾನ ಹಿಂಭಾಗದಲ್ಲಿ ಅನ್ನದಾಸೋಹ ನಡೆಯಲಿದೆ.

ತುಂಗಾನದಿ ಮಧ್ಯದಲ್ಲಿರುವ ಪುರಾಣ ಪ್ರಸಿದ್ಧ ಪರಶುರಾಮ ಕೊಂಡದಲ್ಲಿ ಗುರುವಾರ ನಸುಕಿನಿಂದ ತೀರ್ಥಸ್ನಾನ ಹಾಗೂ ಶುಕ್ರವಾರ ಮಧ್ಯಾಹ್ನ ರಥೋತ್ಸವ ನಡೆಯಲಿದೆ. ಶನಿವಾರ ಸಂಜೆ 7 ಗಂಟೆಗೆ ತುಂಗಾನದಿಯಲ್ಲಿ ಸಿಡಿಮದ್ದು ಪ್ರದರ್ಶನದೊಂದಿಗೆ ರಾಮೇಶ್ವರ ದೇವರ ಅದ್ಧೂರಿ ತೆಪ್ಪೋತ್ಸವ ನಡೆಯಲಿದೆ.

ಅಕಾಲಿಕವಾಗಿ ಮಳೆ ಆಗುತ್ತಿರುವ ಹಿನ್ನೆಲೆ ನದಿಯಲ್ಲಿ ನೀರಿನಮಟ್ಟ ಏರಿಕೆಯಾಗಿದೆ. ತೀರ್ಥಸ್ನಾನಕ್ಕೆ ಆಗಮಿಸುವ ಭಕ್ತರ ಸುರಕ್ಷತೆಗಾಗಿ ನದಿ ಮಧ್ಯದಲ್ಲಿರುವ ರಾಮ ಮಂಟಪಕ್ಕೆ ಸಾಗುವ ಮಾರ್ಗದಲ್ಲಿ ಪಪಂ ವತಿಯಿಂದ ₹6.80 ಲಕ್ಷ ವೆಚ್ಚದಲ್ಲಿ ಸುರಕ್ಷಿತವಾದ ಕಬ್ಬಿಣದ ಡಿಟ್ಯಾಚಬಲ್ ಸೇತುವೆಯನ್ನು ನಿರ್ಮಿಸಲಾಗಿದೆ.

ಅಕಾಲಿಕ ಮಳೆ:

ಕಳೆದ ಎರಡು ದಿನಗಳಿಂದ ಸತತವಾಗಿ ತಾಲೂಕಿನಲ್ಲಿ ಸಂಜೆ ಹೊತ್ತಿನಲ್ಲಿ ಮಳೆಯಾಗುತ್ತಿದೆ. ಮಳೆಯಿಂದ ಜಾತ್ರೆಗೆ ಹಿನ್ನಡೆ ಆತಂಕವೂ ಇದೆ. ದೂರದ ಊರುಗಳಿಂದ ಜಾತ್ರೆ ವ್ಯಾಪಾರಕ್ಕೆ ದೊಡ್ಡ ಸಂಖ್ಯೆಯಲ್ಲಿ ಬಂದು ಸೇರಿರುವ ಬೀದಿ ವ್ಯಾಪಾರಸ್ಥರು ಮಳೆ ಅಡಚಣೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.

- - -

ಬಾಕ್ಸ್‌

ಪರಶುರಾಮಕೊಂಡಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿತೀರ್ಥಹಳ್ಳಿ: ಮಾತೃಹತ್ಯಾದೋಷವನ್ನು ನಿವಾರಿಸಿದ ಈ ಪುಣ್ಯಕ್ಷೇತ್ರಕ್ಕೆ ಆಗಮಿಸುವ ಸಧ್ಭಕ್ತರ ಸಕಲ ಸಂಕಷ್ಠಗಳು ನಿವಾರಣೆಯಾಗಿ ನಾಡಿನ ಸಕಲರಿಗೂ ಶ್ರೀ ರಾಮೇಶ್ವರನ ಕೃಪಾಕಟಾಕ್ಷ ದೊರೆಯುವಂತಾಗಲಿ ಎಂದು ಎಳ್ಳಮವಾಸ್ಯೆ ಜಾತ್ರಾ ಸಮತಿ ಗೌರವಾಧ್ಯಕ್ಷ ಹಾಗೂ ಶಾಸಕ ಆರಗ ಜ್ಞಾನೇಂದ್ರ ಹಾರೈಸಿದರು.

ಬುಧವಾರ ಸಂಜೆ ತುಂಗಾನದಿಯ ರಾಮ ಮಂಟಪ ಬಳಿ ಪಟ್ಟಣ ಪಂಚಾಯಿತಿ ವತಿಯಿಂದ ನಿರ್ಮಿಸಲಾದ ಕಿರುಸೇತುವೆ ಉದ್ಘಾಟನೆ ನೆರವೇರಿಸಿ, ಅನಂತರ ಪರಶುರಾಮಕೊಂಡಕ್ಕೆ ಭೇಟಿ ನೀಡಿ, ಪಪಂ ಮತ್ತು ಜಾತ್ರಾ ಸಮಿತಿ ವತಿಯಿಂದ ಮಾಡಿರುವ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರು ಮಾತನಾಡಿದರು. ಅನಾದಿ ಕಾಲದಿಂದ ವೈಭವಯುತವಾಗಿ ನಡೆಯುತ್ತಿರುವ ಈ ಜಾತ್ರೆಗೆ ರಾಜ್ಯದ ಎಲ್ಲೆಡೆಯಿಂದ ಭಕ್ತರು ಆಗಮಿಸುತ್ತಿದ್ದಾರೆ. ತೀರ್ಥಸ್ನಾನ ವೇಳೆ ಸುರಕ್ಷತೆ ದೃಷ್ಟಿಯಿಂದ ನಿರ್ಮಿಸಲಾಗಿರುವ ಕಿರುಸೇತುವೆ ಉಪಯುಕ್ತವಾಗಿದೆ. ಪ.ಪಂ. ಕಾರ್ಯ ಶ್ಲಾಘನೀಯವಾಗಿದೆ ಎಂದರು. ಅಧ್ಯಕ್ಷೆ ಗೀತಾ ರಮೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ ಸೇರಿದಂತೆ ಪ.ಪಂ. ಸದಸ್ಯರು, ಮುಖ್ಯಾಧಿಕಾರಿ ಕುರಿಯಾಕೋಸ್, ಜಾತ್ರಾ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ, ಡಾ. ಜೀವಂಧರ ಜೈನ್, ವಕೀಲರಾದ ಸಂಜಯ್, ಹರೀಶ್ ಮುಂತಾದವರು ಇದ್ದರು. - - - -10ಟಿಟಿಎಚ್ 01: ಎಳ್ಳಮಾವಾಸ್ಯೆ ತೀರ್ಥಸ್ನಾನಕ್ಕೆ ಆಗಮಿಸುವ ಭಕ್ತರ ಸುರಕ್ಷತೆಗಾಗಿ ರಾಮ ಮಂಟಪಕ್ಕೆ ಸಾಗುವ ಮಾರ್ಗದಲ್ಲಿ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವತಿಯಿಂದ ₹6.80 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಡಿಟ್ಯಾಚಬಲ್ ಸೇತುವೆ.-10ಟಿಟಿಎಚ್05: ಕಿರುಸೇತುವೆ ಉದ್ಘಾಟಿಸಿದ ಶಾಸಕ ಜ್ಞಾನೇಂದ್ರ ಪರಶುರಾಮಕೊಂಡಕ್ಕೆ ಭೇಟಿ ನೀಡಿದರು.