ಅದ್ಧೂರಿ ಮೊಹರಂ ಹಬ್ಬ ಆಚರಣೆಗೆ ಸಿದ್ಧತೆ

| Published : Jul 04 2025, 11:49 PM IST

ಸಾರಾಂಶ

ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿಯೂ ಮೊಹರಂ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಎಲ್ಲ ಸಿದ್ದತೆ ನಡೆದಿದೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿಯೂ ಮೊಹರಂ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಎಲ್ಲ ಸಿದ್ದತೆ ನಡೆದಿದೆ. ಈಗಾಗಲೇ ಪೀರಲು ದೇವರುಗಳನ್ನು ಮಸೀದಿಗಳಲ್ಲಿ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಮೊಹರಂ ಹಬ್ಬವನ್ನು ಹಿಂದೂ-ಮುಸ್ಲಿಂ ಭಾಂದವರು ಸೇರಿ ಹಬ್ಬ ಆಚರಿಸಿ ಭಾವೈಕ್ಯತೆ ಮರೆಯುತ್ತಾರೆ.

ಮುಸ್ಲಿಂ ಭಾಂದವರು ಇಲ್ಲದ ಗ್ರಾಮಗಳಾದ ಬ್ಯಾಲಹುಣ್ಸಿ, ಅಲ್ಲಿಪುರ, ಹಾಳ್‌ ತಿಮ್ಲಾಪುರ, ಶಿವಪುರ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಹಿಂದೂಗಳೇ ಮಸೀದಿ ನಿರ್ಮಿಸಿದ್ದಾರೆ. ಹಿಂದೂಗಳು ಪದ್ದತಿ ಪ್ರಕಾರ ಪೀರಲು ದೇವರುಗಳನ್ನು ಮೆರವಣಿಗೆ ಮೂಲಕ ಕರೆ ತಂದು ಪ್ರತಿಷ್ಠಾಪನೆ ಮಾಡಿದ್ದಾರೆ.

ನಂತರದಲ್ಲಿ ಅಲಾಯಿ ಕುಣಿಯನ್ನು ತೆಗೆದು ಅದರಲ್ಲಿ ಕಟ್ಟಿಗೆ ಹಾಕಿದ ಬೆಂಕಿ ಹಾಕುತ್ತಾರೆ. ಕತಲ್‌ ರಾತ್ರಿ ದಿನ, ಹರಕೆ ತೀರಿಸುವ ಭಕ್ತರು ಹಲಾಯಿ ಕುಣಿಯಲ್ಲಿ ಪೀರಲು ದೇವರುಗಳನ್ನು ಹಿಡಿದುಕೊಂಡು ಬೆಂಕಿ ಹಾಯುತ್ತಾರೆ. ಆಯಾ ಗ್ರಾಮಗಳ ಭಕ್ತರು ಮನೆಯಲ್ಲಿ ಮುಡಿಯುಡಿಯಿಂದ ಮಾದ್ಲಿ ಹಾಗೂ ಸಕ್ಕರೆಯನ್ನು ಪೀರಲು ದೇವರುಗಳಿಗೆ ಅರ್ಪಿಸುತ್ತಾರೆ. ರೈತರು ಮನೆಯಲ್ಲಿನ ಜಾನುವಾರುಗಳು ಯಾವುದೇ ಕಾಯಿಲೆ ಬರಬಾರದು, ಜತೆಗೆ ಉಣ್ಣೆ ಆಗಬಾರದೆಂಬ ಕಾರಣಕ್ಕಾಗಿ ಅಲಾಯಿ ಕುಣಿಯಲ್ಲಿ ಉಪ್ಪು ಹಾಕುತ್ತಾರೆ.

ವಿವಿಧ ರೀತಿಯ ಹರಕೆ ಹೊತ್ತಿರುವ ಭಕ್ತರು ದೀಡ್‌ ನಮಸ್ಕಾರ, ಪೀರಲು ದೇವರುಗಳ ದಾನ ನೀಡುತ್ತಾರೆ, ಮಕ್ಕಳು ಆಗದವರು ಸಕ್ಕರೆಯನ್ನು ದಾನವಾಗಿ ನೀಡುತ್ತಾರೆ. ಕತಲ್‌ ರಾತ್ರಿ ದಿನ ಅಲಾಯಿ ಪದಗಳು, ಸವಾಲ್‌ ಪದಗಳನ್ನು ಹಾಡುತ್ತಾರೆ.

ತಾಲೂಕಿನ ಎಲ್ಲ ಕಡೆಗೂ ಜು.6 ರಂದು ಕತಲ್‌ ರಾತ್ರಿ ಆಚರಿಸಲಾಗುತ್ತಿದೆ. ಆದರೆ ಬ್ಯಾಲಹುಣ್ಸಿ ಗ್ರಾಮದಲ್ಲಿ ಮುಸ್ಲಿಮರು ಇಲ್ಲದ ಕಾರಣ, ಕತಲ್‌ ರಾತ್ರಿಯನ್ನು ಶುಕ್ರವಾರ ದಿನ ಮಾಡಲಾಗಿದೆ.

ಮೊಹರಂ ಹಬ್ಬದ ಅಂಗವಾಗಿ ಹರಕೆ ಹೊತ್ತ ಭಕ್ತರು ಹುಲಿ ವೇಷ, ಹಿಂಡಬಿ ಹೀಗೆ ನಾನಾ ವೇಷ ಹಾಕಿಕೊಂಡು ಹಲಗೆ ನಾದಕ್ಕೆ ಕುಣಿದು ಜನರಿಗೆ ಮನರಂಜನೆ ನೀಡುತ್ತಾರೆ. ಕತಲ್‌ ರಾತ್ರಿ ಆಚರಣೆ ಮಾಡಿದ ಬಳಿಕ ವಿವಿಧ ಬಣ್ಣದ ಹಾಳೆಗಳಿಂದ ಅಲಂಕಾರ ಮಾಡಿರುವ ದೋಲಿಯಲ್ಲಿ ಪೀರಲು ದೇವರುಗಳನ್ನು ಗ್ರಾಮದಲ್ಲಿ ಮೆರವಣಿಗೆ ಮೂಲಕ ನದಿಗೆ ತೆಗೆದುಕೊಂಡು ಪೂಜೆ ಸಲ್ಲಿಸುತ್ತಾರೆ.

ಬ್ಯಾಲಹುಣ್ಸಿ ಗ್ರಾಮದಲ್ಲಿ ಮೊಹರಂ ಹಬ್ಬದ ಅಂಗವಾಗಿ ಮಸೀದಿ ಇಲ್ಲದ ಕಾರಣ, ಪಕ್ಕೀರ ಸ್ವಾಮಿ ದೇವಸ್ಥಾನದಲ್ಲಿ ಪೀರಲು ದೇವರುಗಳನ್ನು ಸಂಪ್ರದಾಯದಂತೆ ಪ್ರತಿಷ್ಠಾಪನೆ ಮಾಡುತ್ತೇವೆ. ಗ್ರಾಮದಲ್ಲಿ ಮುಸ್ಲಿಮರು ಇಲ್ಲ ಪಕ್ಕದ ಮಕರಬ್ಬಿ ಗ್ರಾಮದಿಂದ ಮುಲ್ಲಾ ಸಾಹೇಬರನ್ನು ಕರೆ ತಂದು ಆಚರಣೆ ಮಾಡುತ್ತೇವೆ. ಇದಕ್ಕೆ ಇಡೀ ಗ್ರಾಮಸ್ಥರು ಸಹಕಾರ ನೀಡುತ್ತಾರೆ ಎನ್ನುತ್ತಾರೆ ಬ್ಯಾಲಹುಣ್ಸಿ ನಿವಾಸಿ ಬಿ.ಲಕ್ಷ್ಮಣ.