ತಂತ್ರಜ್ಞಾನದ ಜತೆಗೆ ರಾಷ್ಟ್ರಪ್ರಜ್ಞೆಯನ್ನೂ ಬೆಳೆಸಿಕೊಳ್ಳಿ

| N/A | Published : Jul 04 2025, 11:49 PM IST / Updated: Jul 06 2025, 10:59 AM IST

ಸಾರಾಂಶ

 ತಂತ್ರಜ್ಞಾನ ನಿಪುಣತೆ ಎಂದರೆ ಉತ್ತಮ ತಂತ್ರಜ್ಞ ಅಥವಾ ವಿಜ್ಞಾನಿಯ ಜತೆಗೆ ನಾನೊಬ್ಬ ಒಳ್ಳೆಯ ಗುಣವುಳ್ಳ ರಾಷ್ಟ್ರಪ್ರಜ್ಞೆ ಇರುವ ಪ್ರಜ್ಞಾವಂತ ನಾಗರಿಕನಾಗಿ ಜವಾಬ್ದಾರಿಯನ್ನು ಅರಿತು ಬದುಕುವುದೇ ಜೀವನ  

 ಬೆಳಗಾವಿ :  ಜೀವನದಲ್ಲಿ ತಂತ್ರಜ್ಞಾನವೊಂದೇ ಬದುಕಲ್ಲ. ನೀವು ಬದುಕಿನಲ್ಲಿ ಉತ್ತಮ ತಂತ್ರಜ್ಞ, ವಿಜ್ಞಾನಿ ಅಥವಾ ಯಾವುದಾದರೂ ವೃತ್ತಿಪರ ನಿಪುಣರು ಆಗಲು ಬಯಸುತ್ತಿರಿ. ಆದರೆ, ತಂತ್ರಜ್ಞಾನ ನಿಪುಣತೆ ಎಂದರೆ ಉತ್ತಮ ತಂತ್ರಜ್ಞ ಅಥವಾ ವಿಜ್ಞಾನಿಯ ಜತೆಗೆ ನಾನೊಬ್ಬ ಒಳ್ಳೆಯ ಗುಣವುಳ್ಳ ರಾಷ್ಟ್ರಪ್ರಜ್ಞೆ ಇರುವ ಪ್ರಜ್ಞಾವಂತ ನಾಗರಿಕನಾಗಿ ಜವಾಬ್ದಾರಿಯನ್ನು ಅರಿತು ಬದುಕುವುದೇ ಜೀವನ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರರು ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರೊ. ಅಜಯ್ ಕುಮಾರ್ ಸೂದ್ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 25ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ಇದು ನಿಮ್ಮ ಶೈಕ್ಷಣಿಕ ಪ್ರಯಾಣದ ಮುಕ್ತಾಯವಲ್ಲ. ಹೊಸ ಆರಂಭದ ಹೊಸ್ತಿಲು. ಈ ಆರಂಭದಲ್ಲಿ ತರಗತಿ, ತರಬೇತಿ ಮತ್ತು ಪರೀಕ್ಷೆಗಳಾಚೆಗಿನ ಜಗತ್ತಿನೊಂದಿಗೆ ತಾವು ಕಾಲಿಡುತ್ತಿದ್ದೀರಿ. ಹೊರಗಡೆ ನಿಮಗಾಗಿ ಸಾಕಷ್ಟು ಅವಕಾಶಗಳು ತೆರೆದಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ತಂತ್ರಜ್ಞಾನ ನಿಮ್ಮ ಅತ್ಯುತ್ತಮ ಸಾರಥಿ. ಜತೆಗೆ ಅದು ಸಹಾಯಕವೂ ಹೌದು. ಇದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಮಾರ್ಗಗಳನ್ನು ರೂಪಿಸುತ್ತದೆ. ಜತೆ ಜತೆಗೆ ಶಕ್ತಿಶಾಲಿ ಮತ್ತು ಸ್ವಾವಲಂಭಿ ಭಾರತವನ್ನು ನಿರ್ಮಿಸುವಲ್ಲಿಯೂ ನಿರ್ಣಾಯಕ ಪಾತ್ರ ವಹಿಸುತ್ತದೆ. ತಂತ್ರಜ್ಞಾನವು ರಾಷ್ಟ್ರೀಯ ಪ್ರಗತಿಯ ವೇಗವರ್ಧಕ ಮತ್ತು ಮೂಲಾಧಾರವಾಗಿ, ನಮ್ಮ ಜೀವನ ಶೈಲಿ, ಕಾರ್ಯವಿಧಾನ ಮತ್ತು ಇತರರೊಂದಿಗೆ ಹೇಗೆ ಸಂಪರ್ಕ ಸಾಧಿಸುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ ಎಂದ ಅವರು, ನಾವೀನ್ಯತೆ ತಂತ್ರಜ್ಞಾನು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಕೃಷಿ ಮತ್ತು ಆರೋಗ್ಯ ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎಂದರು. 

ವಿವಿ ಕುಲಾಧಿಪತಿ ಹಾಗೂ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಮಾತನಾಡಿ, ಪದವೀಧರರು ತಮ್ಮ ನಾವೀನ್ಯತೆ ಮತ್ತು ಕ್ರಿಯಾಶೀಲ ಮನೋಭಾವದ ಮೂಲಕ ಹೊಸ ಉದ್ಯಮಗಳನ್ನು ಹುಟ್ಟುಹಾಕಬೇಕು. ಈ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಬೇಕು. ಈ ಮೂಲಕ ಉದ್ಯೋಗ ನೀಡುವಂತರಾಗಬೇಕು. ಅಷ್ಟೇ ಅಲ್ಲದೆ ಇವತ್ತಿನ ಪದವೀಧರರು ಪರಿಸರ ಸಂರಕ್ಷಣೆಯತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದ ಅವರು, ವಿಕಸಿತ ಭಾರತದ ದೃಷ್ಟಿಕೋನದೊಂದಿಗೆ ನಮ್ಮ ಜವಾಬ್ದಾರಿ ಅರಿತು ನಮ್ಮ ರಾಷ್ಟ್ರವನ್ನು ಜಾಗತಿಕವಾಗಿ ಶಕ್ತಿ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸಬೇಕು ಎಂದು ಕರೆ ನೀಡಿದರು. 

ಗೌರವ ಡಾಕ್ಟರೇಟ್ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರದಾನ:

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಡಾ.ವಿ.ನಾರಾಯಣನ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಎಕ್ಸೆಲ್ ಇಂಡಿಯಾ ಸಂಸ್ಥಾಪಕ ಪ್ರಶಾಂತ್ ಪ್ರಕಾಶ್, ಬೆಂಗಳೂರು ಏಟ್ರಿಯ ವಿಶ್ವವಿದ್ಯಾಲಯ ಕುಲಾಧಿಪತಿ ಸಿ.ಎಸ್‌.ಸುಂದರ್ ರಾಜು ಅವರಿಗೆ ಡಾಕ್ಟರ್ ಆಫ್ ಸೈನ್ಸ್‌ ಗೌರವ ಪದವಿ ಪ್ರದಾನ ಮಾಡಲಾಯಿತು.

Read more Articles on