ಸಾರಾಂಶ
ಕನ್ನಡಪ್ರಭ ವಾರ್ತೆ ಪರಶುರಾಂಪುರ ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲರ ಆರಾಧ್ಯ ದೈವ ಕೇತೇದೇವರ ಜಾತ್ರೆಗೆ ಸಮೀಪದ ಚನ್ನಮ್ಮನಾಗತಿಹಳ್ಳಿ ಸಂಭ್ರಮದಿಂದ ಸಜ್ಜಾಗಿದೆ. ಕೇತೇದೇವರ ಪರಿಷೆ ಬುಡಕಟ್ಟು ಸಂಸ್ಕೃತಿಯ ಆಚರಣೆಯನ್ನು ಎತ್ತಿ ಹಿಡಿಯುವ ಸಡಗರದ ಜಾತ್ರೆ.೧೨ ದಿನಗಳ ಕಾಲ ನಡೆಯುವ ಜಾತ್ರೆಯ ಪೂಜಾ ಮಂದಿರ ನಿರ್ಮಿಸಲು ಪೂಜಾ ಮರ ಕಡಿಯುವ ಧಾರ್ಮಿಕ ಕಾರ್ಯವು ಚಾಲನೆ ಪಡೆದುಕೊಂಡಿದೆ.
ಹುರುಳಿ, ನವಣೆ ಬಳಕೆ ನಿಷಿದ್ಧ: ಪ್ರತಿ ವರ್ಷ ಜಾತ್ರೆ ನಡೆಯುವ ದಿನದಿಂದ ಮುಗಿಯುವ ದಿನದವರೆಗೂ ಕಾಡುಗೊಲ್ಲ ಬುಡಕಟ್ಟಿಗೆ ಸೇರಿದ ಕೊಣನ ಗೊಲ್ಲರು ಮತ್ತು ಬೊಮ್ಮನ ಗೊಲ್ಲರು ಬೆಡಗಿನವರು ನವಣೆ ಮತ್ತು ಹುರುಳಿಯನ್ನು ಮನೆಯಿಂದ ಹೊರಗೆ ಹಾಕುತ್ತಾರೆ. ಈ ವರ್ಷ ಜ.11ರಂದು ಹುರುಳಿ ಕೈ ತೊಳೆದು ಮನೆಯಿಂದ ಹೊರ ಹಾಕಲಾಗಿದೆ. ಆಗಿನಿಂದ ಅವನ್ನು ಮುಟ್ಟುವುದಾಗಲೀ, ತಿನ್ನುವುದಾಗಲೀ ಮಾಡುವುದಿಲ್ಲ. ಈ ಸಂಪ್ರದಾಯವನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗಿದೆ.ಈ ಬಾರಿ ಹೋಬಳಿಯ ಬೊಮ್ಮನಕುಂಟೆ ಗ್ರಾಮದಲ್ಲಿ ಕಾಡುಗೊಲ್ಲ ಸಮುದಾಯದ ಕರಿ ಕಂಬಳಿ ಮತ್ತು ಗಂಡುಗೊಡಲಿಗಳನ್ನು ಹಿಡಿದ ಕೊಣನಗೊಲ್ಲರು ಮತ್ತು ಬೊಮ್ಮನ ಗೊಲ್ಲ ಬೆಡಗಿನವರು ಗುರುವಾರ ಪೂಜೆ ಮರ ಕಡಿದರು. ಬಳಿಕ ಮೆರವಣಿಗೆಯ ಮೂಲಕ ಜಾತ್ರೆ ನಡೆಯುವ ಪುರ್ಲಹಳ್ಳಿ ಸಮೀಪ ಇರುವ ವಸಲುದಿನ್ನೆಗೆ ಮರದ ತುಂಡನ್ನು ತಂದರು.ಜ. 21ರಂದು ದೇವಸ್ಥಾನದ ಸುತ್ತಲೂ ಕಳ್ಳೆ ಬೇಲಿ ಕಟ್ಟಲು ಕಳ್ಳೆ ಕಡಿಯುವುದು, ಜ. 22ರಂದು ಜೂಜಿನ ಕಳ್ಳೆ ಹಾಕುವುದು, 23ರಂದು ವಸಲು ದಿನ್ನೆಗೆ ತುಗ್ಗಲಿಮೋರು ಮತ್ತು ಎರದ ಕಳ್ಳೆ ತರುವುದು, 24ರಂದು ವಸಲು ದಿನ್ನೆಯಲ್ಲಿ ಬಾರೆ ಕಳ್ಳೆಯಿಂದ ಗುಡಿಕಟ್ಟುವುದು ಮತ್ತು ಕಳಶ ಸ್ಥಾಪನೆ ಮಾಡುವ ಕಾರ್ಯ ನಡೆಯಲಿದೆ.
ಜ. 25ರಂದು ಗುಡುಕಟ್ಟಿನ ಪರಿವಾರದ ದೇವರು ಚನ್ನಮ್ಮನಾಗತಿಹಳ್ಳಿಗೆ ಬರುವುದು, 26ರಂದು ಹುತ್ತದ ಪೂಜೆ ಮತ್ತು ಕೊಣನ ಪೂಜೆ ಮಾಡುವುದು, 27ರಂದು ಹಾವಿನ ಗೂಡು ಪೂಜೆ, 28ರಂದು ನವಣೆ ಅನ್ನದ ನೈವೇದ್ಯ ದಾಸೋಹ, 29ರಂದು ಜಾತ್ರೆಯ ಪ್ರಧಾನ ಘಟ್ಟ ಬಾರೆ ಕಳ್ಳೆಯ ಗುಡಿಯ ಮೇಲಿನ ಕಳಶ ಕೀಳುವ ಆಚರಣೆ ನಡೆಯಲಿದೆ.ಫೆ.1ರಂದು ಹುರುಳಿ ನೈವೇದ್ಯ ಮಾಡಿ ವೃತ ಕಂಕಣ ವಿಸರ್ಜನೆ ಮಾಡುವ ಮೂಲಕ ಹುರುಳಿ ನೈವೇದ್ಯವನ್ನು ದೇವಸ್ಥಾನದಲ್ಲಿ ಪ್ರಸಾದವಾಗಿ ಸ್ವೀಕರಿಸಿದ ಮೇಲೆಯೇ ಮತ್ತೆ ಮನೆಯೊಳಗೆ ಹುರಳಿ ಮತ್ತು ನವಣೆಯನ್ನು ಸೇರಿಸುತ್ತಾರೆ. ರೆಡ್ಡಿ ಜನಾಂಗದವರು ಕ್ಯಾತಪ್ಪನನ್ನು ಹುರುಳಿ ಮತ್ತು ನವಣೆ ಕಣಜದಲ್ಲಿಟ್ಟಿದ್ದರಿಂದ ಈ ಆಚರಣೆ ಮಾಡುತ್ತಾ ಬಂದಿದ್ದಾರೆ.
ಕ್ಯಾತಪ್ಪ ದೇವರ ಹಿನ್ನೆಲೆಕ್ಯಾತಪ್ಪ ದೇವರು ಮೊದಲು ರೆಡ್ಡಿ ಜನಾಂಗದ ಹೇಮರೆಡ್ಡಿ ಮತ್ತು ಭೀಮರೆಡ್ಡಿ ಎಂಬುವವರಿಗೆ ಒಲಿದಿದ್ದು, ಅವರು ಶ್ರೀಮಂತರಾದ ಮೇಲೆ ದೇವರನ್ನು ನಿರ್ಲಕ್ಷಿಸಿ ನವಣೆ ಮತ್ತು ಹುರುಳಿಯ ಕಣಜದಲ್ಲಿ ಮುಚ್ಚಿಟ್ಟರಂತೆ. ಇದರಿಂದ ಕೋಪಗೊಂಡ ದೇವರು ಅವರ ಮನೆಯಲ್ಲಿ ದನ ಕಾಯುತ್ತಿದ್ದ ಬೊಮ್ಮಲಿಂಗ ಎನ್ನುವ ಕಾಡು ಗೊಲ್ಲರ ಯುವಕನಿಗೆ ಒಲಿ ಯಿತು. ಆಗಿನಿಂದ ಈ ಜನಾಂಗದ ಆರಾಧ್ಯ ದೈವನಾದ ಎನ್ನುವ ಪ್ರತೀತಿ ಇದೆ ಎನ್ನುತ್ತಾರೆ ಹಿರಿಯರು.