ಈ ಬಾರಿ ಸಹ ಸಕಲೇಶ್ವರಸ್ವಾಮಿ ರಥೋತ್ಸವವನ್ನು ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಈ ಬಾರಿ ಸಂಸದ ಯದುವೀರ್ ಅವರನ್ನು ರಥೋತ್ಸವಕ್ಕೆ ಕರೆಸುವ ಎಲ್ಲಾ ಪ್ರಯತ್ನ ಮಾಡೋಣ, ನಾನು ಸಹ ಖುದ್ದಾಗಿ ನಿಮ್ಮ ಜೊತೆ ಅವರನ್ನು ಆಹ್ವಾನಿಸಲು ಬರುತ್ತೇನೆ ಎಂದರು. ಈ ಬಾರಿಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ಯಾವುದೆ ಗೊಂದಲಗಳಿಲ್ಲದೆ ಅಚ್ಚುಕಟ್ಟಾಗಿ ಮಾಡಲಾಗುವುದು ಎಂದರು.
ಕನ್ನಡಪ್ರಭ ವಾರ್ತೆ ಸಕಲೇಶಪುರ
ಪ್ರತಿ ವರ್ಷದಂತೆ ಈ ಬಾರಿ ಸಹ ಸಕಲೇಶ್ವರಸ್ವಾಮಿ ರಥೋತ್ಸವವನ್ನು ಅದ್ಧೂರಿಯಾಗಿ, ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಮುಂಬರುವ ಸಕಲೇಶ್ವರಸ್ವಾಮಿರವರ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಇಲ್ಲಿನ ಸಕಲೇಶ್ವರಸ್ವಾಮಿ ದೇವಸ್ಥಾನಕ್ಕೆ ಸುಮಾರು 2000 ವರ್ಷಗಳ ಇತಿಹಾಸವಿದೆ ಹಾಗೂ ಸಾವಿರಾರು ವರ್ಷಗಳಿಂದ ಇಲ್ಲಿ ರಥೋತ್ಸವ ಮಾಡಿಕೊಂಡು ಬರಲಾಗುತ್ತಿದೆ. ಮೈಸೂರು ಮಹರಾಜರು ಸಹ ಈ ದೇವಸ್ಥಾನದ ಜೊತೆ ಸಂಬಂಧ ಹೊಂದಿದ್ದು ಹೀಗಾಗಿ ಕಳೆದ ವರ್ಷದ ರಥೋತ್ಸವಕ್ಕೆ ಮೈಸೂರು ಮಹಾರಾಜರನ್ನು ಕರೆಸುವ ಯತ್ನ ಮಾಡಲಾಗಿತ್ತು. ಆದರೆ ಅವರ ದಿನಾಂಕ ಸಿಗದ ಕಾರಣ ಅವರು ಇಲ್ಲಿಗೆ ಬಂದಿರಲಿಲ್ಲ. ಈ ನಿಟ್ಟಿನಲ್ಲಿ ಈ ಬಾರಿ ಸಂಸದ ಯದುವೀರ್ ಅವರನ್ನು ರಥೋತ್ಸವಕ್ಕೆ ಕರೆಸುವ ಎಲ್ಲಾ ಪ್ರಯತ್ನ ಮಾಡೋಣ, ನಾನು ಸಹ ಖುದ್ದಾಗಿ ನಿಮ್ಮ ಜೊತೆ ಅವರನ್ನು ಆಹ್ವಾನಿಸಲು ಬರುತ್ತೇನೆ ಎಂದರು.ರಥೋತ್ಸವಕ್ಕೆ ಮುಜರಾಯಿ, ಕಂದಾಯ, ಪೋಲಿಸ್, ಸೆಸ್ಕ್ ಸೇರಿದಂತೆ ಎಲ್ಲಾ ಇಲಾಖೆಯವರು ಸಹಕಾರ ನೀಡಲಿದ್ದಾರೆ. ದೇವಸ್ಥಾನದ ಉತ್ಸವ ಸಮಿತಿಯ ಸದಸ್ಯರಾಗಿರುವವರು ಕಾರ್ಯಕ್ರಮದ ಆಯೋಜನೆ ಮಾಡಲು ಸಮಯ ಕೊಡಬೇಕು ಯಾರಿಗೆ ಆಸಕ್ತಿ ಇಲ್ಲವೊ ಅಂತಹವರು ತಾವಾಗಿಯೆ ದೂರ ಸರಿದರೆ ಹೊಸ ಸದಸ್ಯರನ್ನು ನೇಮಕ ಮಾಡಬಹುದಾಗಿದೆ. ಈ ಬಾರಿಯ ಜಾತ್ರಾ ಮಹೋತ್ಸವವನ್ನು ನಡೆಸಲು ದೇವಸ್ಥಾನದ ಉತ್ಸವ ಸಮಿತಿಗೆ ನೀಡಲಾಗುತ್ತಿದೆ. ಬಡವರಿಗೆ ಕೈಗೆಟುಕುವ ದರದಲ್ಲಿ ಜಾತ್ರೆಯನ್ನು ಮಾಡಲಾಗುತ್ತದೆ. ಒಟ್ಟಾರೆಯಾಗಿ ಈ ಬಾರಿಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ಯಾವುದೆ ಗೊಂದಲಗಳಿಲ್ಲದೆ ಅಚ್ಚುಕಟ್ಟಾಗಿ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಸುಪ್ರೀತಾ, ತಾ.ಪಂ ಇ.ಒ ಗಂಗಾಧರನ್, ಡಿವೈಎಸ್‌ಪಿ ಮಾಲತೀಶ್, ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ, ದೇವಸ್ಥಾನದ ಉತ್ಸವ ಸಮಿತಿಯ ಬ್ಯಾಕರವಳ್ಳಿ ಜಯಣ್ಣ, ನಂದಿಕೃಪ ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.------ಫೋಟೋ:
ಸಕಲೇಶಪುರ ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಶಾಸಕ ಸಿಮೆಂಟ್ ಮಂಜು ಅಧ್ಯಕ್ಷತೆಯಲ್ಲಿ ಮುಂಬರುವ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಕುರಿತು ಸಭೆ ನಡೆಯಿತು.