ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಮುಂಬರುವ ಹೇಮಾವತಿ ಸಕ್ಕರೆ ಕಾರ್ಖಾನೆ ಚುನಾವಣೆ ಸೇರಿದಂತೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ನಾಯಕತ್ವದಲ್ಲಿ ಒಗ್ಗಟ್ಟಾಗಿ ಎದುರಿಸಲು ತಾಲೂಕು ಕಾಂಗ್ರೆಸ್ ಮುಖಂಡರು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.ಮಾಜಿ ಸಚಿವ, ಎಚ್. ಸಿ. ಶ್ರೀಕಂಠಯ್ಯ ಅವರ ಪುತ್ರ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್. ಎಸ್. ವಿಜಯಕುಮಾರ್ ನಿವಾಸದಲ್ಲಿ ನಡೆದ ಪಕ್ಷದ ಪ್ರಮುಖ ಮುಖಂಡರ ಉನ್ನತ ಮಟ್ಟದ ಸಭೆಯಲ್ಲಿ ಈ ರಾಜಕೀಯ ನಿರ್ಣಯ ತೆಗೆದುಕೊಳ್ಳಲಾಗಿದೆ.
ಗ್ರಾಮ ಮಟ್ಟದಿಂದಲೇ ಪಕ್ಷ ಸಂಘಟನೆಗೆ ಪಣ:ಸಭೆಯ ಆತಿಥ್ಯ ವಹಿಸಿ ಮಾತನಾಡಿದ ಎಚ್.ಎಸ್. ವಿಜಯಕುಮಾರ್, ಹೇಮಾವತಿ ಸಕ್ಕರೆ ಕಾರ್ಖಾನೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಗೆಲ್ಲಿಸುವ ಮೂಲಕ ತಾಲೂಕಿನಲ್ಲಿ ಪಕ್ಷದ ಅಸ್ತಿತ್ವವನ್ನು ಗಟ್ಟಿಗೊಳಿಸಬೇಕಿದೆ. ಇದರ ಸಂಪೂರ್ಣ ನೇತೃತ್ವವನ್ನು ಶ್ರವಣಬೆಳಗೊಳ ಕ್ಷೇತ್ರದ ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಎಂ.ಎ. ಗೋಪಾಲಸ್ವಾಮಿ ವಹಿಸಿ ಕೊಳ್ಳಲಿದ್ದಾರೆ. ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಗಮದ ಅಧ್ಯಕ್ಷ ಲಲಿತ್ ರಾಘವ್ (ದೀಪು) ಅವರು ಪಕ್ಷಸಂಘಟನೆಗೆ ಹೆಚ್ಚಿನಬೆಂಬಲ ನೀಡಲಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸಭೆ ನಡೆಸಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು. ಇದೇ ವೇಳೆ ತಾಲೂಕು ಕೇಂದ್ರದಲ್ಲಿ ಅತಿ ಜರೂರಾಗಿ ಕಾಂಗ್ರೆಸ್ ಭವನ ನಿರ್ಮಿಸಲು ಬೂತ್ ಮಟ್ಟದಲ್ಲಿ ಧನಸಂಗ್ರಹಣೆ ಮಾಡಲು ನಿರ್ಧರಿಸಲಾಯಿತು.
ಭವನ ನಿರ್ಮಾಣಕ್ಕೆ ಸಹಕರಿಸಲು ಮನವಿ:
ನಾಯಕತ್ವದ ಜವಾಬ್ದಾರಿ ವಹಿಸಿಕೊಂಡು ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಶಿವಕುಮಾರ್ ನೇತೃತ್ವದ ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ೫ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಇದನ್ನು ಜನರಿಗೆ ತಲುಪಿಸಬೇಕಿದೆ ಎಂದರು. ಸುಮಾರು ₹ ೧ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಂಗ್ರೆಸ್ ಭವನದ ಭೂಮಿಪೂಜೆ ನೆರವೇರಿದ್ದು, ಕಾರ್ಯಕರ್ತರು ಉದಾರವಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು. ತಾಲೂಕಿನ ಮುಖಂಡರು ಒಟ್ಟಾಗಿ ನೀಡಿದ ಈ ಜವಾಬ್ದಾರಿಯನ್ನು ಗೌರವಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮುನ್ನಡೆಯುವುದಾಗಿ ಅವರು ಭರವಸೆ ನೀಡಿದರು.ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜೆ.ಎಂ. ರಾಮಚಂದ್ರು, ಎಂ.ಕೆ. ಮಂಜೇಗೌಡ, ಪಿ.ಎಲ್. ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಶಂಕರ್, ಪ್ರಮುಖರಾದ ಉದಯ್ ಕುಮಾರ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದು, ಮುಂಬರುವ ಸರಣಿ ಚುನಾವಣೆಗಳ ತಂತ್ರಗಾರಿಕೆ ಕುರಿತು ಸುದೀರ್ಘ ಚರ್ಚೆ ನಡೆಸಿದರು.
===* ಹೇಳಿಕೆ
೯ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಸ ಬೈರೇಗೌಡ ಅವರ ಸಲಹೆಯಂತೆ ನಾವೆಲ್ಲರೂ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗಳನ್ನು ಎದುರಿಸಲಿದ್ದೇವೆ, ಆಗ ಮಾತ್ರ ಮುಂದಿನ ೨೦೨೮ರ ವಿಧಾನಸಭಾ ಚುನಾವಣೆಯಲ್ಲಿ ಶ್ರವಣಬೆಳಗೊಳ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಲು ಸಾಧ್ಯ. - ಎಂ.ಎ. ಗೋಪಾಲಸ್ವಾಮಿ, ಮಾಜಿ ವಿಧಾನ ಪರಿಷತ್ ಸದಸ್ಯ