ನೀಲನಕ್ಷೆ ತಯಾರಿಸಿ ಹಂತ ಹಂತವಾಗಿ ಪಾಂಡವಪುರ ಪಟ್ಟಣ ಅಭಿವೃದ್ಧಿ: ದರ್ಶನ್ ಪುಟ್ಟಣ್ಣಯ್ಯ

| Published : Sep 08 2025, 01:00 AM IST

ನೀಲನಕ್ಷೆ ತಯಾರಿಸಿ ಹಂತ ಹಂತವಾಗಿ ಪಾಂಡವಪುರ ಪಟ್ಟಣ ಅಭಿವೃದ್ಧಿ: ದರ್ಶನ್ ಪುಟ್ಟಣ್ಣಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವೇಶ್ವರಯ್ಯನಗರ ಅಥವಾ ಪಾಂಡವಪುರ ತಾಲೂಕಿನ ಹಿರೇಮರಳಿ ಗೇಟ್ ಸಮೀಪ ರಂಗಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹೇಮವತಿ ಬಡಾವಣೆಯ ಹಿಂಬದಿ 15 ಎಕರೆ ಜಮೀನಿನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೂ ಅಗತ್ಯ ಕ್ರಮ ವಹಿಸಲಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪುರಸಭೆ ವ್ಯಾಪ್ತಿ ಗಡಿ ವಿಸ್ತಾರಗೊಂಡಿದೆ. ಅದಕ್ಕೆ ತಕ್ಕಂತೆ ನೀಲನಕ್ಷೆ ತಯಾರಿಸಿ ಹಂತ ಹಂತವಾಗಿ ಪಟ್ಟಣವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ರೈತಸಂಘ ಟೌನ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಯುಜಿಡಿ ಕಾಮಗಾರಿಗೆ ಅಗತ್ಯವಾಗಿದ್ದ 11.62 ಕೋಟಿ ಹಣವನ್ನು ಸರ್ಕಾರ ಮಂಜೂರು ಮಾಡಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಪಟ್ಟಣದ ಹೃದಯ ಭಾಗದ ಸಂತೆ ಮಐದಾನವನ್ನು 80 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ ರೈತರು ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಯೋಜನೆ ತಯಾರಿಸಲಾಗಿದೆ. ಈ ಯೋಜನೆಗೆ ಸರ್ಕಾರ ಅನುದಾನ ನೀಡಲಿದೆ ಎಂದರು.

ವಿಶ್ವೇಶ್ವರಯ್ಯನಗರ ಅಥವಾ ತಾಲೂಕಿನ ಹಿರೇಮರಳಿ ಗೇಟ್ ಸಮೀಪ ರಂಗಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹೇಮವತಿ ಬಡಾವಣೆಯ ಹಿಂಬದಿ 15 ಎಕರೆ ಜಮೀನಿನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೂ ಅಗತ್ಯ ಕ್ರಮ ವಹಿಸಲಾಗಿದೆ ಎಂದರು.

ಪುರಸಭೆ ಪೌರಕಾರ್ಮಿಕರಿಗೆ ನಿವೇಶನ ವಿತರಿಸುವ ವಿಚಾರದಲ್ಲಿ ಕೆಲ ಗೊಂದಲಗಳಿವೆ. ಪುರಸಭೆಯಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ನಿವೇಶನ ಸಿಗಬೇಕು. ಸದ್ಯದ ಯೋಜನೆಯಿಂದ ಕೆಲವರಿಗಷ್ಟೇ ಲಾಭವಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿರುವ ಕಾರಣ ನಿವೇಶನ ಹಂಚಿಕೆ ಮಾಡಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಹಾರೋಹಳ್ಳಿ ಹೊಸ ಬಡಾವಣೆಯ ರಸ್ತೆ ನಿರ್ಮಾಣಕ್ಕೆ ಶೀಘ್ರ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.

ಸ್ವರಾಜ್ ಉತ್ಸವ ಯಶಸ್ವಿಯಾಗಬೇಕು:

ಮಹಿಳೆಯರು, ಯುವಕರ ಆರ್ಥಿಕ ಸಬಲೀಕರಣ ಮತ್ತು ಸ್ವಾವಲಂಬನೆ ಬದುಕಿಗಾಗಿ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಸೆ.13ರಿಂದ ಮೂರು ದಿನಗಳ ಕಾಲ ಸ್ವರಾಜ್ ಉತ್ಸವ ಎಂಬ ವಿನೂತನ ಕಾರ್ಯಕ್ರಮವನ್ನು ಪುಟ್ಟಣ್ಣಯ್ಯ ಫೌಂಡೇಷನ್ ಮತ್ತು ವಿವಿಧ ಉದ್ಯಮಗಳ ಸಂಸ್ಥೆಯಿಂದ ಆಯೋಜಿಸಲಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಸುಮಾರು 30 ಹೆಚ್ಚು ಸರ್ಕಾರೇತರ ಸಂಸ್ಥೆಗಳು ಭಾಗವಹಿಸಲಿವೆ. ಮಹಿಳೆಯರು ಮತ್ತು ಯುವಕರು ಹೇಗೆ ಸ್ವಾವಲಂಬಿಗಳಾಗಬೇಕು ಎಂಬ ವಿಚಾರದ ಜತೆಗೆ ಕೃಷಿ, ನೀರಾವರಿ, ವ್ಯವಸಾಯ, ಶಿಕ್ಷಣ ಸೇರಿದಂತೆ 12 ಮಹತ್ವದ ವಿಚಾರಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಿದ್ದಾರೆ ಎಂದರು.

ಈ ವೇಳೆ ರೈತ ಮುಖಂಡರಾದ ರಾಘವ, ಮುರುಳೀ, ಲವಕುಮಾರ್, ಶ್ರೀನಿವಾಸ್, ಬೀರಶೆಟ್ಟಹಳ್ಳಿ ಮಂಜುನಾಥ್, ನಾಗೇಂದ್ರ ಇತರರು ಇದ್ದರು.