ಸಾರಾಂಶ
ಧಾರವಾಡ: ಪ್ರಸ್ತುತ ಜಾಗತಿಕವಾಗಿ ಆರೋಗ್ಯ ಕ್ಷೇತ್ರ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿದ್ದು, ವೈದ್ಯಕೀಯ ಪದವೀಧರರು ಈ ಸವಾಲು ಎದುರಿಸಲು ಸನ್ನದ್ಧರಾಗಬೇಕು ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಭಗವಾನ್ ಬಿ.ಸಿ. ಹೇಳಿದರು.
ಇಲ್ಲಿಯ ಡಾ. ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಗುರುವಾರ ನಡೆದ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ 3ನೇ ಘಟಿಕೋತ್ಸವದಲ್ಲಿ ಭಾಷಣ ಮಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಸವಾಲುಗಳು ಬರುತ್ತಿದ್ದು, ಭವಿಷ್ಯದಲ್ಲಿ ಅವುಗಳನ್ನು ಎದುರಿಸಲು ಆಧುನಿಕ ತಂತ್ರಜ್ಞಾನವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು. ತಾವು ಇಷ್ಟು ವರ್ಷಗಳ ಕಾಲ ಪಡೆದ ವೈದ್ಯಕೀಯ ಜ್ಞಾನವನ್ನು ರೋಗಿಗಳ ಚಿಕಿತ್ಸೆ ಹಾಗೂ ಸಮಾಜದ ಆರೋಗ್ಯಕ್ಕಾಗಿ ಮೀಸಲಿಡಬೇಕು ಎಂಬ ಸಲಹೆ ನೀಡಿದರು.ವೈದ್ಯರಿಗೆ ಬರೀ ಪುಸ್ತಕ, ಶಿಕ್ಷಣ ಸಂಸ್ಥೆಗಳಷ್ಟೇ ಜ್ಞಾನ ನೀಡುವುದಿಲ್ಲ. ರೋಗಿಗಳಿಂದ ಕಲಿಯುವುದು ಸಾಕಷ್ಟಿರುತ್ತದೆ. ಹೀಗಾಗಿ ವೈದ್ಯಕೀಯ ಪದವೀಧರರು, ಜನಸೇವೆಯೇ ಜನಾರ್ದನನ ಸೇವೆ ಎಂದು ಭಾವಿಸಿ ಕಾರ್ಯ ನಿರ್ವಹಿಸಬೇಕು. ವೈದ್ಯರ ಸೇವೆಯು ರೋಗಿಗಳ ಹಾಗೂ ದೇವರ ನಡುವಿನ ಸಂಬಂಧವಾಗಿರುತ್ತದೆ. ಆದ್ದರಿಂದ ಬರೀ ಹಣಕ್ಕಾಗಿ ಸೇವೆ ಮಾಡದೇ ಸಮಾಜದ ಸುಸ್ಥಿರ ಆರೋಗ್ಯಕ್ಕಾಗಿ ವೈದ್ಯಕೀಯ ಸೇವೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಸಮಾಜದಲ್ಲಿ ಅತ್ಯಂತ ಗೌರವ ಕೊಡುವ ಕ್ಷೇತ್ರ ವೈದ್ಯಕೀಯ ಕ್ಷೇತ್ರ. ಹೀಗಾಗಿ ತುಂಬ ಪ್ರೀತಿಯಿಂದ ಈ ಕ್ಷೇತ್ರದಲ್ಲಿ ಸೇವೆ ನೀಡಬೇಕು. ಆರೋಗ್ಯದ ಆಶಾಭಾವದಿಂದ ರೋಗಿಗಳು ಬಂದಾಗ ಯಾವುದೇ ಧರ್ಮ, ಜಾತಿ, ಹಣ ಬಲವನ್ನು ನೋಡದೇ ಸಮಾನ ಚಿಕಿತ್ಸೆ ನೀಡಬೇಕು. ತಮ್ಮನ್ನು ಈ ಹಂತಕ್ಕೆ ತಂದ ಪಾಲಕರ ಮೇಲೆ ಹಾಗೂ ಅವರ ಆರೋಗ್ಯದ ಮೇಲೆ ಗಮನ ಹರಿಸಬೇಕು ಎಂದರು.ಈ ಸಂದರ್ಭದಲ್ಲಿ 375 ಎಂಬಿಬಿಎಸ್ ಮತ್ತು 146 ಎಂಡಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವಿವಿಧ ವಿಭಾಗಗಳಲ್ಲಿ ಹೆಚ್ಚು ಅಂಕ ಗಳಿಸಿದ ಡಾ. ಅನುಶ್ರೀ ಶ್ರೀಧರನ್, ಡಾ. ಅರ್ನವ್ ಡಿ.ಡಿ, ಡಾ. ಶ್ರುತಿ ಶ್ರೀಕರ, ಡಾ. ಚಾರು ಸೋನೆಗಾರ, ಡಾ. ಮುಸ್ಕಾನ್ ಪಿ.ಡಿ. ಅವರಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.
ವಿವಿ ಕುಲಪತಿ ಪ್ರೊ. ನಿರಂಜನ ಕುಮಾರ, ವಿವಿ ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ, ಆಡಳಿತ ನಿರ್ದೇಶಕ ಸಾಕೇತ್ ಶೆಟ್ಟಿ, ಡಾ. ನೈದಿಲ ಶೆಟ್ಟಿ, ಸಹ ಕುಲಪತಿ ವಿ. ಜೀವಂಧರ ಕುಮಾರ, ಹಣಕಾಸು ಅಧಿಕಾರಿ ವಿ.ಜಿ. ಪ್ರಭು ಹಾಗೂ ಅಂಗ ಸಂಸ್ಥೆಗಳ ಮುಖ್ಯಸ್ಥರು ಇದ್ದರು.ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ್ ಕುಲಕರ್ಣಿ ಸ್ವಾಗತಿಸಿದರು. ಕುಲಸಚಿವ ಡಾ. ಚಿದೇಂದ್ರ ಶೆಟ್ಟರ ವಾರ್ಷಿಕ ವರದಿ ಮಂಡಿಸಿದರು. ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಲರಾಮ ನಾಯ್ಕ ಪ್ರತಿಜ್ಞಾವಿಧಿ ಬೋಧಿಸಿದರು. ಪರೀಕ್ಷಾಂಗ ವಿಭಾಗದ ಮುಖ್ಯಸ್ಥ ಡಾ. ಸತ್ಯಬೋಧ ಗುತ್ತಲ ಇದ್ದರು.
;Resize=(128,128))
;Resize=(128,128))