ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಳೆಗಾಲದಲ್ಲಿ ಎದುರಾಗಬಹುದಾದ ತುರ್ತು ಪರಿಸ್ಥಿತಿ, ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಮುನ್ನೆಚ್ಚರಿಕೆಯಾಗಿ ಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಂಗಪ್ಪ ಸೂಚನೆ ನೀಡಿದರು.ಜಿಲ್ಲಾ ಪಂಚಾಯತಿ ಹಳೆಯ ಸಭಾಂಗಣದಲ್ಲಿ ಗುರುವಾರ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ನಿಯೋಜಿಸಲಾದ ನೋಡಲ್ ಅಧಿಕಾರಿಗಳು ಹಾಗೂ ವಿವಿಧ ತಾಲೂಕು ತಹಸೀಲ್ದಾರ, ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಜನ-ಜಾನುವಾರುಗಳ ರಕ್ಷಣೆ, ಪುನರ್ವಸತಿ, ಪರಿಹಾರ, ಕಾಳಜಿ ಕೇಂದ್ರಗಳ ಸ್ಥಾಪನೆ ಸೇರಿದಂತೆ ಮುಂಜಾಗ್ರತೆಯಾಗಿ ಎಲ್ಲ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚನೆ ನೀಡಿದರು.
ರಕ್ಷಣಾ ಸಾಮಗ್ರಿಗಳನ್ನು ಸುಸಜ್ಜಿತವಾಗಿಟ್ಟುಕೊಳ್ಳಬೇಕು. ನುರಿತ ಈಜುಗಾರರು, ಹಾವಾಡಿಗರು ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಟ್ಟುಕೊಳ್ಳಬೇಕು. ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕಾಗಿ ನೇಮಕ ಮಾಡಲಾದ ನೋಡಲ್ ಅಧಿಕಾರಿಗಳು, ಸಂಬಂಧಿಸಿದ ತಾಲೂಕುಗಳಿಗೆ ಭೇಟಿ ನೀಡಿ ಗ್ರಾಮಗಳ ಪರಿಸ್ಥಿತಿ ಅವಲೋಕಿಸಬೇಕು. ಪ್ರತಿ ವಾರಕ್ಕೊಮ್ಮೆ ಸಭೆ ನಡೆಸಿ, ತಾಲೂಕುಗಳಲ್ಲಿ ನಡೆದ ಸಭೆಗಳ ಮಾಹಿತಿ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಸಭೆಗಳಲ್ಲಿ ಅಗತ್ಯ ಸಲಹೆ ಸೂಚನೆನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.ಪ್ರವಾಹ ಪೀಡಿತ ಪ್ರದೇಶಗಳನ್ನು ಮುಂಚಿತವಾಗಿ ಗುರುತಿಸಿಕೊಂಡು ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು. ನದಿ ಪಾತ್ರದ ಗ್ರಾಮಗಳಲ್ಲಿ ಡಂಗುರ ಸಾರುವುದು ಸೇರಿದಂತೆ ಸ್ವಚ್ಛವಾಹಿನಿ ಮೂಲಕ ಜನರಿಗೆ ಜಾಗೃತಿ-ಅರಿವು ಮೂಡಿಸಬೇಕು. ಕೆರೆ ಅಥವಾ ಹೊಳೆ ತುಂಬಿದ ಸಂದರ್ಭದಲ್ಲಿ ಆಯಾ ಪ್ರದೇಶದ ಜನರು ಹೊಳೆ, ಕೆರೆಗಳಿಗೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಬೇಕು. ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು, ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲು ಸೂಕ್ತ ಸ್ಥಳಗಳನ್ನು ಗುರುತಿಸಬೇಕು. ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ಕಾರ್ಯನಿರ್ವಹಿಸುತ್ತಿದ್ದು, ತಾಲೂಕು ಮಟ್ಟದಲ್ಲಿಯೂ ಸಹ ಸಹಾಯವಾಣಿ ಆರಂಭಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಮಳೆ-ಗಾಳಿ ರಭಸಕ್ಕೆ ವಿದ್ಯುತ್ ತಂತಿ ಹರಿದುಬಿದ್ದ ಸಂದರ್ಭದಲ್ಲಿ ಹೆಸ್ಕಾಂ ಇಲಾಖೆ ಅಧಿಕಾರಿಗಳು ತಕ್ಷಣ ಇಂತಹ ಅಪಾಯವನ್ನುಂಟು ಮಾಡುವ ತಂತಿ, ಕಂಬಗಳ ತೆರವುಗೊಳಿಸ ಕ್ರಮವಹಿಸಬೇಕು. ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ಹಾನಿ ಉಂಟಾದಲ್ಲಿ ನಿಗದಿತ ಕಾಲಾವಧಿಯಲ್ಲಿ ಪರಿಹಾರ ಒದಗಿಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತೆ ವಹಿಸುವ ಮೂಲಕ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಬಾರದು. ಯಾವುದೇ ಘಟನೆ ಸಂಭವಿಸಿದಲ್ಲಿ ಅಧಿಕಾರಿಗಳನ್ನೇ ನೇರ ಹೊಣೆಗಾರನ್ನಾಗಿಸಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.ನದಿ ಪಾತ್ರದ ಗ್ರಾಮಗಳಲ್ಲಿ ಎದುರಾಗಬಹುದಾದ ಪ್ರವಾಹ ಪರಿಸ್ಥಿತಿ ಎದುರಿಸಲು, ತುರ್ತು ಸಂದರ್ಭಗಳಲ್ಲಿ ಪುನರ್ವಸತಿಗೆ ಪರಿಹಾರ ಕೇಂದ್ರಗಳ ಸ್ಥಾಪನೆ ಸೇರಿದಂತೆ ರಕ್ಷಣಾ ಕಾರ್ಯ ತುರ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಲು ವಿಪತ್ತು ನಿರ್ವಹಣಾ ಕಾಯ್ದೆ 2005ರನ್ವಯ ತಾಲೂಕು ನೊಡಲ್ ಅಧಿಕಾರಿಗಳೆಂದು ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದರು .ಸಭೆಯಲ್ಲಿ ಜಿಪಂ ಸಿಇಒ ಶಶಿಧರ ಕುರೆರ್, ಎಸ್ಪಿ ಅಮರನಾಥ ರೆಡ್ಡಿ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಮಖಂಡಿ ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, ಆಯಾ ತಾಲೂಕಿನ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.ಪ್ರಕೃತಿ ವಿಕೋಪ ಪರಿಹಾರ ಕಾರ್ಯದಲ್ಲಿ ಯಾವುದೇ ಲೋಪವಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಕ್ರಮ ವಹಿಸಲಾಗುವುದು. ಮಳೆಗಾಲ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿರುವುದರಿಂದ ಮುಂಚಿತವಾಗಿಯೇ ನಿಯಂತ್ರಣಕ್ಕಾಗಿ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ವೈದ್ಯಕೀಯ ವ್ಯವಸ್ಥೆಯೊಂದಿಗೆ ಔಷಧಿ ದಾಸ್ಥಾನು ಸಂಗ್ರಹಿಸಿಟ್ಟಿರಬೇಕು. ಮಳೆ ನೀರು ಒಂದೆಡೆ ನಿಲ್ಲದಂತೆ ನೋಡಿಕೊಳ್ಳುವಂತೆ ಜನರಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕು. ಮಳೆಗಾಲ ಸಂದರ್ಭದಲ್ಲಿ ಗಿಡ-ಮರಗಳು ಬಿದ್ದು, ಯಾವುದೇ ಜೀವ ಹಾನಿ ಸಂಭವಿಸದಂತೆ ನೋಡಿಕೊಳ್ಳಬೇಕು. ಅವಘಡ ಸಂಭವಿಸಬಹುದಾದ ಪ್ರದೇಶಗಳಲ್ಲಿ ಅಗತ್ಯ ಕ್ರಮ ವಹಿಸಬೇಕು.
- ಸಂಗಪ್ಪ ಎಂ. ಜಿಲ್ಲಾಧಿಕಾರಿ