ತಾಲೂಕಿಗೊಂದು ಮೇವು ಬ್ಯಾಂಕ್ ಆರಂಭಕ್ಕೆ ಸಿದ್ಧತೆ

| Published : Feb 20 2024, 01:49 AM IST

ತಾಲೂಕಿಗೊಂದು ಮೇವು ಬ್ಯಾಂಕ್ ಆರಂಭಕ್ಕೆ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಜಿಲ್ಲೆಯಲ್ಲಿ ಮುಂದಿನ 12 ರಿಂದ 13 ವಾರಕ್ಕೆ ಬೇಕಾಗುವಷ್ಟು ಸುಮಾರು 1,38,492 ಟನ್ ಮೇವು ದಾಸ್ತಾನು ಇದೆ. ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗುತ್ತದೆ. ಶೀಘ್ರದಲ್ಲಿ ಹುಬ್ಬಳ್ಳಿ ತಾಲೂಕಿನ ಶೇರೆವಾಡ ಮತ್ತು ಶಿರಗುಪ್ಪಿಯಲ್ಲಿ ಮೇವು ಬ್ಯಾಂಕ್ ಆರಂಭಿಸಲು ಸಿದ್ಧತೆ ಮಾಡಲಾಗಿದೆ

ಧಾರವಾಡ: ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಗತ್ಯ ಕುಡಿವ ನೀರು, ಜನ-ಜಾನುವಾರುಗಳಿಗೆ ಮೇವು ಮತ್ತು ಜನರ ಬೇಡಿಕೆಗೆ ಅನುಗುಣವಾಗಿ ಉದ್ಯೋಗ ನೀಡಲು ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ತಾಲೂಕಿನ ಮಾದನಭಾವಿ ಗ್ರಾಮದಲ್ಲಿ ಸ್ಥಾಪಿಸಿರುವ ಸರ್ಕಾರಿ ಗೋಶಾಲೆಗೆ ಸೋಮವಾರ ಭೇಟಿ ನೀಡಿದ ಅವರು, 20ನೇ ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ 2,33,461 ದೊಡ್ಡ ಮತ್ತು 1,53,938 ಸಣ್ಣ ಪ್ರಾಣಿಗಳು ಸೇರಿ ಒಟ್ಟು 3,87,399 ಪ್ರಾಣಿಗಳಿವೆ. ಸಣ್ಣ ಮತ್ತು ದೊಡ್ಡ ಪ್ರಾಣಿಗಳಿಗೆ ಅನುಗುಣವಾಗಿ ಅಂದಾಜು ಪ್ರತಿದಿನ ಆರು ಕೆಜಿಯಂತೆ ಪ್ರತಿ ವಾರಕ್ಕೆ ಸರಾಸರಿ 10.261 ಟನ್ ಮೇವು ಬೇಕಾಗುತ್ತದೆ. ಕೆಲವು ರೈತರು ಮುಂಗಾರಿನಲ್ಲಿ ಮತ್ತು ಹಿಂಗಾರಿನಲ್ಲಿ ಸ್ವಂತ ಮೇವು ಸಂಗ್ರಹ ಹೊಂದಿದ್ದಾರೆ. ಆದರೂ ಜಿಲ್ಲಾಡಳಿತದಿಂದ ಮೇವು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಮೇವು ದಾಸ್ತಾನು: ಪ್ರಸ್ತುತ ಜಿಲ್ಲೆಯಲ್ಲಿ ಮುಂದಿನ 12 ರಿಂದ 13 ವಾರಕ್ಕೆ ಬೇಕಾಗುವಷ್ಟು ಸುಮಾರು 1,38,492 ಟನ್ ಮೇವು ದಾಸ್ತಾನು ಇದೆ. ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗುತ್ತದೆ. ಶೀಘ್ರದಲ್ಲಿ ಹುಬ್ಬಳ್ಳಿ ತಾಲೂಕಿನ ಶೇರೆವಾಡ ಮತ್ತು ಶಿರಗುಪ್ಪಿಯಲ್ಲಿ ಮೇವು ಬ್ಯಾಂಕ್ ಆರಂಭಿಸಲು ಸಿದ್ಧತೆ ಮಾಡಲಾಗಿದೆ. ಫೆಬ್ರವರಿ ತಿಂಗಳ ಅಂತ್ಯದೊಳಗೆ ರೈತರ ಬೇಡಿಕೆಗೆ ಅನುಗುಣವಾಗಿ ಪ್ರತಿ ತಾಲೂಕಿಗೆ ಒಂದು ಮೇವು ಬ್ಯಾಂಕ್ ಆರಂಭಿಸಲಾಗುತ್ತದೆ. ಜಿಲ್ಲೆಯ ಮಾದನಭಾವಿಯಲ್ಲಿ ಕಳೆದ ಒಂದು ವರ್ಷದ ಹಿಂದೆ ಸರ್ಕಾರಿ ಗೋಶಾಲೆ ಆರಂಭಿಸಲಾಗಿದೆ. ಈ ಗೋಶಾಲೆಯಲ್ಲಿ ಈಗಾಗಲೇ ಸುಮಾರು 15ಕ್ಕೂ ಹೆಚ್ಚು ಆಕಳು, ಕರು ಮತ್ತು 17ಕ್ಕೂ ಹೆಚ್ಚು ಎಮ್ಮೆ ಮತ್ತು ಕರುಗಳಿವೆ. ರೈತರು ತಮಗೆ ಪಶುಪಾಲನೆಗೆ ತೊಂದರೆ, ಅನಾನುಕೂಲವಿದ್ದಲ್ಲಿ ತಮ್ಮ ಹಸುಗಳನ್ನು ಈ ಗೋಶಾಲೆಗೆ ನೀಡಬಹುದು ಎಂದರು.

ಸುಮಾರು 1ಸಾವಿರ ದನಗಳಿರುವ ಖಾಸಗಿಯಾಗಿ 10 ಗೋಶಾಲೆಗಳು ಜಿಲ್ಲೆಯಲ್ಲಿವೆ. ಇವುಗಳಿಗೆ ಪುಣ್ಯಕೋಟಿ ಹಾಗೂ ಪಿಂಜಾರಪೋಳ ಯೋಜನೆಗಳಡಿ ಸರ್ಕಾರದ ಸಹಾಯಧನ ಹಾಗೂ ದಾನಿಗಳ ನೇರವು ನೀಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಜೂನ್ ತಿಂಗಳವರೆಗೂ ಅಗತ್ಯವಿರುವಷ್ಟು ಮೇವು ದಾಸ್ತಾನು ಹೊಂದಲಾಗಿದೆ. ಹಿಂಗಾರಿನ ಮೇವು ಸಹ ರೈತರಿಗೆ ಸಿಗುತ್ತದೆ. ಮೇವು ಪೂರೈಕೆಗಾಗಿ ಟೆಂಡರ್ ಕರೆದು ಪೂರೈಕೆದಾರರಿಗೆ ಕಾರ್ಯಾದೇಶ ನೀಡಲಾಗಿದೆ. ಮೇವು ಬೇಡಿಕೆ ಬರಬಹುದಾದ ಹೋಬಳಿ ಗುರುತಿಸಲಾಗಿದ್ದು, ಅಗತ್ಯವಿದ್ದಲ್ಲಿ ಮೇವು ಬ್ಯಾಂಕ್ ತೆರಯಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ. ರವಿ ಸಾಲಿಗೌಡರ, ಸಹಾಯಕ ನಿರ್ದೇಶಕ ಡಾ. ಪ್ರಕಾಶ ಬೆನ್ನೂರ, ಡಾ. ಸುರೇಶ ಅರಕೇರಿ ಹಾಗೂ ಗೋಶಾಲೆ ಸಿಬ್ಬಂದಿ ಇದ್ದರು.