ಸಾರಾಂಶ
ಕೊಪ್ಪಳ: ನಾನು ಸಹ ಕ್ರಷರ್ ಮಾಲೀಕ ಮತ್ತು ಕ್ರಷರ್ ಮಾಲೀಕರು ಸಂಕಷ್ಚದಲ್ಲಿರುವ ಕಾರಣ ವ್ಯಾಪಾರದಲ್ಲಿ ಹಿಡಿತ ಬರಲಿ ಎನ್ನುವ ಕಾರಣಕ್ಕಾಗಿ ಪ್ರೇರಣಾ ಸಂಸ್ಥೆ ಮಾಡಿದ್ದೇವೆ. ಕ್ರಷರ್ ಮಾಲೀಕರ ಹಿತಕ್ಕಾಗಿ ಅದನ್ನು ಮಾಡಿಕೊಂಡಿದ್ದೇವೆ ಎಂದು ಸಂಸದ ರಾಜಶೇಖರ ಹಿಟ್ನಾಳ ಸ್ಪಷ್ಟಪಡಿಸಿದರು.
ಕೊಪ್ಪಳ ಬಳಿ ವಿಮಾನ ತಂಗುದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ವಿನಾಕಾರಣ ಆರೋಪ ಮಾಡಿದರೆ ನಾನು ಸಹಿಸುವುದಿಲ್ಲ. ನನ್ನ ಮೇಲೆ ಈಗ ಆರೋಪ ಮಾಡಿದವರದ್ದು ಬಿಚ್ಚಿಟ್ಟರೆ ದೊಡ್ಡ ರಾದ್ಧಾಂತವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನೂರು ಕೋಟಿ ಉದ್ರಿಯಾಗಿದೆ. ಅದನ್ನು ಯಾರೂ ಕೊಡುತ್ತಿಲ್ಲ. ಹೀಗಾಗಿ, ಕ್ರಷರ್ ನಡೆಸುವುದು ಕಷ್ಟವಾಗಿದೆ. ಈ ಕುರಿತು ಈಗಾಗಲೇ ಗಂಟೆಗಟ್ಚಲೇ ಮೂರು ಸಭೆ ಮಾಡಿದ್ದೇವೆ. ಗುತ್ತಿಗೆದಾರರು ಮತ್ತು ಕ್ರಷರ್ ಮಾಲೀಕರ ನಡುವೆ ಮಾತುಕತೆಯಾಗಿದೆ. ಅದು ಇತ್ಯರ್ಥವಾಗಿಲ್ಲ. ಈಗ ನಾವೇನು ನಮ್ಮ ಬಳಿಯೇ ಖರೀದಿ ಮಾಡಿ ಎಂದು ಹೇಳುತ್ತಿಲ್ಲ. ಎಲ್ಲಿ ಬೇಕಾದರೂ ಖರೀದಿ ಮಾಡಲಿ, ಅವರಿಗೆ ಸ್ವಾತಂತ್ರ್ಯವಿದೆ ಎಂದರು.
ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯೂ ಆಗುವುದಿಲ್ಲ. ದಾರಿ ತಪ್ಪಿಸಲಾಗುತ್ತದೆ. ಕ್ರಷರ್ ಮಾಲೀಕರು ಎಲ್ಲರೂ ಸೇರಿ ಸಂಘ ಮಾಡಿಕೊಂಡಿರುವಂತೆಯೇ ಪ್ರೇರಣಾ ಸಂಸ್ಥೆಯ ಅಡಿಯಲ್ಲಿಯೇ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇದನ್ನು ಮಾಡುವುದಕ್ಕೆ ಗಟ್ಸ್ ಬೇಕಾಗುತ್ತದೆ. ನಾನೇ ಮಾಡಬೇಕು ಎಂದೇನೂ ಇಲ್ಲ. ಯಾರೂ ಬೇಕಾದರೂ ಎಜೆನ್ಸಿ ಮಾಡಿಕೊಳ್ಳಲಿ. ಅದರಲ್ಲಿ ತಪ್ಪೇನೂ ಇಲ್ಲ. ಈಗ ನಾವು ಕ್ರಷರ್ ಮಾಲೀಕರ ಉಳಿವಿಗಾಗಿ ಮಾಡಿದ್ದೇವೆ. ಈಗಾಗಲೇ 17 ಕ್ರಷರ್‌ಗಳು ಬಂದ್ ಆಗಿವೆ. ಇರುವುದೇ 48 ಕ್ರಷರ್‌ಗಳು. ಹೀಗಾಗಿ, ಅವರೆಲ್ಲರೂ ಸೇರಿ ತೀರ್ಮಾನ ಮಾಡಿಕೊಂಡಿದ್ದಾರೆ. ಉದ್ರಿ ಕೊಡಬೇಕು ಎನ್ನುವುದು ಹಕ್ಕು ಅಲ್ಲ, ಆದರೆ, ಅದು ಅವರ ನಡುವಿನ ವ್ಯವಹಾರ ಅಷ್ಟೇ, ಬೇಕಾಗಿದ್ದರೆ ಕೊಡುತ್ತೇವೆ, ಬೇಡದಿದ್ದರೆ ಇಲ್ಲ. ಅದರಲ್ಲಿ ತಪ್ಪೇನು ಇದೆ ಎಂದು ಪ್ರಶ್ನೆ ಮಾಡಿದರು.ಇದು ಕ್ರಷರ್ ಮತ್ತು ಗುತ್ತಿಗೆದಾರರ ನಡುವೆ ಇರುವ ಸಮಸ್ಯೆ. ಯಾವ ಪಕ್ಷವೂ ಇಲ್ಲ, ಪಂಗಡವು ಇಲ್ಲ. ಕ್ರಷರ್ ಮಾಲೀಕರು ಕಾಂಗ್ರೆಸ್‌ನವರೂ ಇದ್ದಾರೆ, ಬಿಜೆಪಿಯವರೂ ಇದ್ದಾರೆ. ಗುತ್ತಿಗೆದಾರರು ಎರಡೂ ಪಾರ್ಟಿಯಲ್ಲಿದ್ದಾರೆ. ಹಲವು ವರ್ಷಗಳಿಂದ ಇರುವ ಗುತ್ತಿಗೆದಾರರು ಯಾರೂ ಹಾಗೆ ಮಾಡುತ್ತಿಲ್ಲ. ಈಗ ಬಂದಿರುವ ಕೆಲವರಿಂದ ಎಲ್ಲರಿಗೂ ಸಮಸ್ಯೆಯಾಗುತ್ತಿದೆ ಎಂದರು.ಗುತ್ತಿಗೆದಾರರು ಮತ್ತು ಕ್ರಷರ್ ಮಾಲೀಕರು ನನ್ನ ಬಳಿ ಬಂದಿದ್ದರು. ಅವರೆಲ್ಲರ ಜತೆ ಚರ್ಚೆ ಮಾಡಿ, ಸಮಸ್ಯೆ ಇತ್ಯರ್ಥ ಮಾಡುತ್ತೇವೆ. ಮುಖ್ಯಮಂತ್ರಿ ಕಾರ್ಯಕ್ರಮ ಮುಗಿದ ತಕ್ಷಣ ಸೇರಿ, ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ನಾನು ಸಹ ಕ್ರಷರ್ ಮಾಲೀಕನಿದ್ದೇನೆ, ನಷ್ಟ ಮಾಡಿಕೊಂಡು ಮಾಡಲು ಆಗುತ್ತದೆಯೇ? ಅದಕ್ಕಾಗಿಯೇ ಎಲ್ಲರೂ ಸೇರಿ ಕ್ರಷರ್ ಉಳಿವಿಗಾಗಿ ಈ ನಿರ್ಧಾರ ಮಾಡಿದ್ದಾರೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.