ವಿಜ್ಞಾನ ಶಿಕ್ಷಕ ಎಚ್.ಎಸ್.ಟಿ.ಸ್ವಾಮಿರವರ ನಾ ಕಂಡ ಖಗೋಳ ಪುಸ್ತಕವನ್ನು ಇಸ್ರೋದ ಹಿರಿಯ ವಿಜ್ಞಾನಿ ಶ್ರೀನಾಥ ರತ್ನಾಕರ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ವಿಜ್ಞಾನಿಯಾದ ಕೂಡಲೇ ಯಾವುದೇ ಅಹಂ ಇರಬಾರದು. ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ವೈಜ್ಞಾನಿಕ ಸತ್ಯಗಳ ಮಂಡಿಸಬೇಕೆಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಶ್ರೀನಾಥ್ ರತ್ನಾಕರ ಹೇಳಿದರು.

ಚಿತ್ರದುರ್ಗ ಸೈನ್ಸ್ ಫೌಂಡೇಷನ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸಿಲಿಕಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಶ್ರಯದಲ್ಲಿ ಐಎಂಎ ಹಾಲ್‍ನಲ್ಲಿ ಭಾನುವಾರ ಲೇಖಕ ಎಚ್.ಎಸ್.ಟಿ.ಸ್ವಾಮಿ ರವರ ‘ನಾ ಕಂಡ ಖಗೋಳ ಪುಸ್ತಕ’ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಬಾಹ್ಯಾಕಾಶ ವಿಜ್ಞಾನಕ್ಕೆ ಕರ್ನಾಟಕದ ಬಹುಭಾಗ ಕೊಡುಗೆಯಿದೆ. ಎಚ್ಎಎಲ್, ಡಿಆರ್‌ಡಿಒ ರಾಜ್ಯದಲ್ಲಿದೆ. ಸಾಂಸ್ಕೃತಿಕ, ವೈಜ್ಞಾನಿಕ, ಸಾಹಿತ್ಯಿಕವಾಗಿ ಚಿತ್ರದುರ್ಗ ಗುರುತಿಸಿಕೊಂಡಿದೆ ಎನ್ನುವುದು ಇಂದಿನ ಮಕ್ಕಳಿಗೆ ಗೊತ್ತಾಗಬೇಕಿದೆ ಎಂದರು.

ವಿಜ್ಞಾನಿಗಳನ್ನು ಟೀಕಿಸುವವರು, ದಾಳಿಕೋರರಿದ್ದು, ಎಚ್ಚರಿಕೆಯಿಂದ ಇರಬೇಕು. ವಿಜ್ಞಾನಕ್ಕೆ ಸಂಬಂಧಿಸಿದ ಹಲವು ವಿಚಾರಗಳು ಗಂಭೀರವಾಗಿವೆ. ಗ್ರಹ, ನಕ್ಷತ್ರ, ಗ್ಯಾಲಕ್ಸಿಗೆ ಸಂಬಂಧಿಸಿದ ಲೇಖನಗಳಿರುವ ನಾ ಕಂಡ ಖಗೋಳ ಪುಸ್ತಕ ಮನೆ ಮನೆಗೆ ತಲುಪಬೇಕು. ಸಮಾಜದ ಒಳಿತಿಗಾಗಿ ವಿಜ್ಞಾನ ಯೋಚಿಸಬೇಕು. ವಿಜ್ಞಾನವೆಂದರೆ ಮತ್ತೊಬ್ಬರ ನಂಬಿಕೆ, ಧಾರ್ಮಿಕ ಆಚರಣೆಗಳ ವಿರುದ್ಧವಾಗಿರಬಾರದು. ವಿಜ್ಞಾನಿಯಾದ ಕೂಡಲೆ ಅಹಂ ಬೇಡ. ಸದಾ ಎಚ್ಚರಿಕೆಯಿಂದಿರಬೇಕು. ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸಬೇಕಿದೆ. ವಿಜ್ಞಾನಕ್ಕೆ ಸಂಬಂಧಿಸಿದ 278 ಲೇಖನಗಳಿರುವ ಈ ಪುಸ್ತಕ ಪ್ರತಿಯೊಂದು ಶಾಲೆಗೂ ತಲುಪಬೇಕು ಎಂದರು.

ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಅಧ್ಯಕ್ಷ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿ, ಎಚ್ಎಸ್‌ಟಿ ಸ್ವಾಮಿರವರ ‘ನಾ ಕಂಡ ಖಗೋಳ’ ಪುಸ್ತಕವನ್ನು ಪ್ರತಿಯೊಬ್ಬರು ಓದಿ ಮತ್ತೊಂದು ಪೀಳಿಗೆಗೆ ದಾಟಿಸುವ ಅಗತ್ಯವಿದೆ. ಆದಿ ಮಾನವನಿಂದ ಹಿಡಿದು ಆಧುನಿಕ ಮಾನವ ಇಷ್ಟೊಂದು ಸೌಲಭ್ಯಗಳನ್ನು ಪಡೆಯುತ್ತಿದ್ದಾನೆಂದರೆ ಅದಕ್ಕೆ ವಿಜ್ಞಾನ ಕಾರಣ. ವಿಜ್ಞಾನದಿಂದ ಮಾತ್ರ ಮೂಢನಂಬಿಕೆಯನ್ನು ಓಡಿಸಿ ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗಬಹುದೆಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಕೆ.ಎಂ.ವೀರೇಶ್ ಮಾತನಾಡಿ, ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಚಿತ್ರದುರ್ಗದಲ್ಲಿ ಸಾಕಷ್ಟು ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಾ ಬರುತ್ತಿದೆ. ಖಗೋಳ ಕುರಿತ ಕಾರ್ಯಕ್ರಮಗಳು ಚಿತ್ರದುರ್ಗಕ್ಕೆ ಸೀಮಿತವಾಗಿರದೆ ರಾಜ್ಯ ವ್ಯಾಪ್ತಿಯಾಗಿ ಪಸರಿಸಲಿ. ಖಗೋಳ ವಿಜ್ಞಾನದಲ್ಲಿ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಬೇಕಾಗಿರುವುದರಿಂದ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಪ್ರೋತ್ಸಾಹಿಸಬೇಕು. ಇಂತಹ ಕೃತಿಗಳು ಎಲ್ಲರ ಕೈ ಸೇರಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಎಚ್ಎಸ್‌ಟಿ ಸ್ವಾಮಿರವರ ನಾ ಕಂಡ ಖಗೋಳ ಪುಸ್ತಕದ ಪ್ರಯೋಜನ ಪಡೆಯಲಿ ಎಂದು ಆಶಿಸಿದರು.

ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಸಿಲಿಕಾನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವ್ಯವಸ್ಥಾಪಕ ಡಿ.ಗೋಪಾಲಸ್ವಾಮಿ ನಾಯಕ, ಚಿತ್ರದುರ್ಗ ಸೈನ್ಸ್ ಫೌಂಡೇಷನ್ ನಿರ್ದೇಶಕ ಡಾ.ಈ.ರುದ್ರಮುನಿ, ಖಜಾಂಚಿ ಕೆ.ವಿ.ನಾಗಲಿಂಗರೆಡ್ಡಿ ವೇದಿಕೆಯಲ್ಲಿದ್ದರು.

ಮನೆ ಮನೆಗೆ ವಿಜ್ಞಾನ ಕಾರ್ಯಕ್ರಮ ತಲುಪಿಸಿದ್ದೇನೆ: ಎಚ್‌ಎಸ್‌ಟಿ ಸ್ವಾಮಿ

ಲೇಖಕ ಎಚ್ಎಸ್‌ಟಿ ಸ್ವಾಮಿ ಮಾತನಾಡಿ, ವಿಜ್ಞಾನಿಗಳನ್ನು ಕರೆಸಿ ಚಿತ್ರದುರ್ಗದಲ್ಲಿ ಮನೆ ಮನೆಗೆ ವಿಜ್ಞಾನ ಕಾರ್ಯಕ್ರಮಗಳನ್ನು ತಲುಪಿಸಿದ್ದೇನೆ. ಪ್ರತಿ ವಾರವು ಎರಡೆರಡು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಎಂಟು ವರ್ಷಗಳ ಕಾಲ 600 ಲೇಖನಗಳನ್ನು ಬರೆದಿದ್ದೇನೆ. ಎಲ್ಲರ ಸಹಕಾರದಿಂದ 600 ಪುಟಗಳ ಪುಸ್ತಕವನ್ನು ಹೊರತರಲು ಸಾಧ್ಯವಾಯಿತು. ಕೊರೋನಾ ಸಂದರ್ಭದಲ್ಲಿಯೆ ಈ ಪುಸ್ತಕ ಲೋಕಾರ್ಪಣೆಯಾಗಬೇಕಿತ್ತು. ಕಾರಣಾಂತರಗಳಿಂದ ತಡವಾಯಿತು ಎಂದರು.