ಬೆಳ್ತಂಗಡಿ: ಎಲ್ಲರೂ ಕನ್ನಡ ಭಾಷೆ ಬಳಸಿ, ಉಳಿಸಿ, ಬೆಳೆಸಿದಾಗ ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಯೂ ಆಗುತ್ತದೆ. ತುಳುನಾಡಿನಲ್ಲಿ ಕನ್ನಡ ಮಾತೃಭಾಷೆಯಾದರೂ ನಮ್ಮ ಆಡು ಭಾಷೆ ತುಳು ಆಗಿದೆ. ಕರಾವಳಿ ಕರ್ನಾಟಕದಲ್ಲಿ ಯಕ್ಷಗಾನ ಜನಪ್ರಿಯ ಜಾನಪದ ಕಲೆಯಾಗಿದ್ದು ತುಳು ಮತ್ತು ಕನ್ನಡದಲ್ಲಿ ಯಕ್ಷಗಾನ ತಾಳಮದ್ದಳೆ ಹಾಗೂ ಬಯಲಾಟ ಪ್ರದರ್ಶನದ ಮೂಲಕ ಕಲೆ, ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಭಾವನೆ ಮತ್ತು ಪ್ರಸಾರದೊಂದಿಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರೇರಣೆ, ಮಾರ್ಗದರ್ಶನ ನೀಡಲಾಗುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಶನಿವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಬೆಂಗಳೂರಿನ ಜ್ಞಾನಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗ, ಈರಮ್ಮ ನಾಗರಾಜಪ್ಪ ಪ್ರತಿಷ್ಠಾನ, ಮಣ್ಣೆ ಮೋಹನ್ ಪುಸ್ತಕಮಾಲೆ ಮತ್ತು ಪರಿಮಳ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ದಕ್ಷಿಣಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ ರಾಷ್ಟ್ರಮಟ್ಟದ ಸಾಹಿತ್ಯ ಸೌರಭ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಧರ್ಮಸ್ಥಳದಲ್ಲಿ ಪ್ರತಿವರ್ಷ ಕಾರ್ತಿಕಮಾಸದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೂ ಪೋತ್ಸಾಹ ನೀಡಲಾಗುತ್ತದೆ ಎಂದರು.

ಏಳು ಕವನ ಸಂಕಲನ ಮತ್ತು ಇಪ್ಪತ್ತು ಹೊಸ ಕೃತಿಗಳನ್ನು ಲೋಕಾರ್ಪಣೆ ಮಾಡಿದ ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಪ್ರಸ್ತುತ ಸಾಹಿತ್ಯದ ಒಲವು ಕಡಿಮೆಯಾಗುತ್ತಿರುವುದು ವಿಷಾದನೀಯ. ಪ್ರತಿ ಮನೆಯಲ್ಲಿಯೂ ಸಣ್ಣ ಗ್ರಂಥಾಲಯವನ್ನು ಆರಂಭಿಸಿ ಎಲ್ಲರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಜ್ಞಾನಗಂಗ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗದ ಅಧ್ಯಕ್ಷ ಮಣ್ಣೆ ಮೋಹನ್, ರಾಜ್ಯದ 31 ಜಿಲ್ಲೆಗಳಲ್ಲಿಯೂ ಸಾಹಿತ್ಯ ಸೌರಭ ಕಾರ್ಯಕ್ರಮಗಳನ್ನು ಆಯೋಜಿಸಿ ಉದಯೋನ್ಮುಖ ಕಲಾವಿದರು ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸಲಾಗುತ್ತದೆ ಎಂದರು.

ಸಾಧಕರ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಉಜಿರೆಯ ಡಾ. ಎಂ.ಪಿ. ಶ್ರೀನಾಥ್, ಬೆಳ್ತಂಗಡಿಯ ಯದುಪತಿ ಗೌಡ, ಧರ್ಮಸ್ಥಳದ ಹೆಗ್ಗಡೆಯವರ ಆಪ್ತಕಾರ್ಯದರ್ಶಿ ಎ.ವಿ. ಶೆಟ್ಟಿ ಮತ್ತು ಸುಬ್ರಹ್ಮಣ್ಯ ಪ್ರಸಾದ, ಪುರಂದರ ಭಟ್, ಲಕ್ಷ್ಮಿ ಬೆಂಗಳೂರು, ಡಾ. ಸರಸ್ವತಿ ಚಂದ್ರಶೇಖರ್, ಚೆನ್ನಪ್ಪ ಗೌಡ, ಪ್ರವೀಣ್ ಅಮ್ಮೆಂಬಳ ಮೊದಲಾದವರನ್ನು ಅಭಿನಂದಿಸಲಾಯಿತು. ಕವಿಗೋಷ್ಠಿ, ಕವನವಾಚನ ಮತ್ತು ನೃತ್ಯ ಪ್ರದರ್ಶನ ನಡೆಯಿತು. ಬೆಂಗಳೂರಿನ ಪರಿಮಳ ಪ್ರಕಾಶನದ ಅಧ್ಯಕ್ಷರಾದ ಪರಿಮಳ ಸ್ವಾಗತಿಸಿದರು. ಪರಮಾನಂದ ಬಳ್ಳೊಳ್ಳಿ ವಂದಿಸಿದರು. ಬೆಂಗಳೂರಿನ ತೇಜಸ್ವಿನಿ, ಅನುಪಮಾ ಚಂದ್ರು, ಲಕ್ಕೂರು ನಾಗರಾಜು ಮತ್ತು ಗೀತಾ ವಿ.ಆರ್. ಕಾರ್ಯಕ್ರಮ ನಿರ್ವಹಿಸಿದರು.