ಶಿಲ್ಪಕಲೆಯ ಪರಂಪರೆ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಡಾ. ಎಂ.ಎಸ್. ಕೃಷ್ಣಮೂರ್ತಿ

| Published : Apr 20 2025, 02:00 AM IST

ಶಿಲ್ಪಕಲೆಯ ಪರಂಪರೆ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಡಾ. ಎಂ.ಎಸ್. ಕೃಷ್ಣಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

15 ನೂರು ವರ್ಷಗಳ ಹಿಂದೆ ಬಾದಾಮಿ, ಪಟ್ಟದಕಲ್ಲು, ಐಹೊಳೆಯಂತಹ ಅದ್ಭುತ ಸಮೂಹ ದೇವಾಲಯಗಳಲ್ಲಿ ನಮ್ಮ ದೇಶದ ಸಂಸ್ಕ್ರತಿ, ಪರಂಪರೆಯನ್ನು ಕಲ್ಲಿನಲ್ಲಿ ಕೆತ್ತನೆ ಮೂಲಕ ಚಾಲುಕ್ಯರು ಅಜರಾಮರಗೊಳಿಸಿದ್ದಾರೆ. ಸ್ಮಾರಕಗಳ ಸಂರಕ್ಷಣೆ ಇಲಾಖೆಗೆ ಸೀಮಿತವಲ್ಲ, ಪ್ರತಿಯೊಬ್ಬರ ಜವಾಬ್ದಾರಿ ಎಂದು ಮೈಸೂರು ವಿವಿ ನಿವೃತ್ತ ಪ್ರೊಫೆಸರ್ ಡಾ. ಎಂ.ಎಸ್. ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

15 ನೂರು ವರ್ಷಗಳ ಹಿಂದೆ ಬಾದಾಮಿ, ಪಟ್ಟದಕಲ್ಲು, ಐಹೊಳೆಯಂತಹ ಅದ್ಭುತ ಸಮೂಹ ದೇವಾಲಯಗಳಲ್ಲಿ ನಮ್ಮ ದೇಶದ ಸಂಸ್ಕ್ರತಿ, ಪರಂಪರೆಯನ್ನು ಕಲ್ಲಿನಲ್ಲಿ ಕೆತ್ತನೆ ಮೂಲಕ ಚಾಲುಕ್ಯರು ಅಜರಾಮರಗೊಳಿಸಿದ್ದಾರೆ. ಸ್ಮಾರಕಗಳ ಸಂರಕ್ಷಣೆ ಇಲಾಖೆಗೆ ಸೀಮಿತವಲ್ಲ, ಪ್ರತಿಯೊಬ್ಬರ ಜವಾಬ್ದಾರಿ ಎಂದು ಮೈಸೂರು ವಿವಿ ನಿವೃತ್ತ ಪ್ರೊಫೆಸರ್ ಡಾ. ಎಂ.ಎಸ್. ಕೃಷ್ಣಮೂರ್ತಿ ಹೇಳಿದರು.

ಜಿಲ್ಲೆಯ ಬಾದಾಮಿ ತಾಲೂಕಿನ ಪಟ್ಟದಕಲ್ಲು ದೇವಾಲಯಗಳ ಸಮುಚ್ಛಯದಲ್ಲಿ ಭಾರತೀಯ ಪುರಾತತ್ವ ಇಲಾಖೆ ಆಯೋಜಿಸಿದ್ದ ವಿಶ್ವ ಪರಂಪರೆ ದಿನಾಚರಣೆಯಲ್ಲಿ ಮಾತನಾಡಿ, ಚಾಲುಕ್ಯರು ತಮ್ಮ ಆಡಳಿತಾವಧಿಯಲ್ಲಿ ನಾಗರ, ದ್ರಾವಿಡ, ವೇಸರ ಶಿಖರಗಳ ದೇವಾಲಯಗಳನ್ನು ನಿರ್ಮಿಸಿದರು. ಇವುಗಳು ಒಂದೇ ಸಮೂಹದಲ್ಲಿ ಕಾಣಸಿಗುವುದು ಪಟ್ಟದಕಲ್ಲಿದಲ್ಲಿ ಮಾತ್ರ. ಇದರಿಂದ ಪಟ್ಟದಕಲ್ಲು ವಿಶ್ವ ಪರಂಪರೆ ತಾಣವಾಗಿದೆ. ಇಲಾಖೆಯ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ಶಿಸ್ತು ಮತ್ತು ಸ್ವಚ್ಛತೆ ಮೂಲಕ ಪ್ರವಾಸಿಗರಿಗೆ ಉತ್ತಮ ವಾತವಾರಣ ನಿರ್ಮಿಸಿದ್ದು, ಸ್ಮಾರಕಗಳು ನಮ್ಮ ಪರಂಪರೆ ಬಿತ್ತರಿಸುತ್ತವೆ. ಅವುಗಳಲ್ಲಿನ ವೈಭವವನ್ನು ಸಂಭ್ರಮಿಸುತ್ತ ಮುಂದಿನ ಪೀಳಿಗೆಗೆ ಕೊಡಮಾಡಬೇಕು ಎಂದು ಹೇಳಿದರು.

ಧಾರವಾಡ ಕೆಸಿಡಿ ನಿವೃತ್ತ ರಿಜಿಸ್ಟ್ರಾರ್ ಡಾ.ಎಸ್. ರಾಜಶೇಖರ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ,

ಚಾಲುಕ್ಯರ ಸ್ಮಾರಕಗಳ ಅಧ್ಯಯನದಲ್ಲಿ ಬಹಳಷ್ಟು ಆಳವಾದ ವಿಷಯಗಳಿವೆ. ಇಂದಿನ ವಿದ್ಯಾರ್ಥಿಗಳು ಪ್ರವಾಸಿ ತಾಣ ಮತ್ತು ಸ್ಮಾರಕಗಳ ಅಡಿಯಲ್ಲಿಯೇ ಸಾಕಷ್ಟು ಅಧ್ಯಯನ ಮಾಡುವ ಮೂಲಕ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಬೇಕು. ಪಟ್ಟದಕಲ್ಲಿನ ಸ್ಮಾರಕಗಳು ಕೇವಲ ದೇಶಕ್ಕೆ ಸೀಮಿತವಿಲ್ಲ. ಇದು ಜಗತ್ತಿನ ಮಾನವನ ಬದುಕು ಒಳಗೊಂಡಿರುವ ಅತ್ಯದ್ಭುತ ಶಿಲ್ಪಕಲೆಯ ಸೊಬಗಿನ ಸಮೂಹವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಎಸ್‌ಐ, ನಿವೃತ್ತ ಪ್ರಾದೇಶಿಕ ನಿರ್ದೇಶಕ ಡಾ.ಎಸ್.ವಿ. ವೆಂಕಟೇಶಯ್ಯ ಮಾತನಾಡಿ, ಧಾರವಾಡ ವಲಯದಲ್ಲಿ ಅಧಿಕಾರಿ ಇದ್ದಾಗ ಮೂರು ಪ್ರವಾಸಿ ತಾಣಗಳಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು ಅದು ನನ್ನ ಸೌಭಾಗ್ಯ. ರಾಷ್ಟ್ರಕೂಟರ ಕುರಿತು ಅಧ್ಯಯನ ಮಾಡುವಾಗ ನನ್ನ ಗುರು ಡಾ.ಎಂ.ಎಸ್.ಕೃಷ್ಣಮೂರ್ತಿ ಅವರೊಂದಿಗೆ ಈ ಭಾಗದಲ್ಲಿ ಸಂಚರಿಸಿ ಅಧ್ಯಯನ ಮಾಡಿದ್ದರ ಫಲವಾಗಿ ಕೆಲಸ ಮಾಡುವ ಅವಕಾಶ ದೊರೆಕಿತ್ತು. ಯುವ ಜನತೆ ಇಲ್ಲಿನ ಇತಿಹಾಸ ಅಧ್ಯಯನದ ಮೂಲಕ ಅರಿಯಬೇಕು. ಉದ್ಯೋಗಿಗಳಾಗುವ ಜತೆಗೆ ಪ್ರವಾಸೋದ್ಯಮ ಬೆಳೆಸಲು ಸಹಕರಿಸಬೇಕು ಎಂದರು.

ಭಾರತೀಯ ಪುರಾತತ್ವ ಇಲಾಖೆಯ ಧಾರವಾಡ ವಲಯ ಎಸ್‌ಎ ಅಧಿಕಾರಿ ರಮೇಶ ಮೂಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಬಿಎಂ ಪದವಿ ಕಾಲೇಜಿನ ಉಪನ್ಯಾಸಕ ಎಸ್.ಎಸ್. ದೊಡಮನಿ, ಪುರಾತತ್ವಿದ ಡಾ. ಶ್ರೀಗುರು ಭಾಗಿ ಸೇರಿದಂತೆ ಇಲಾಖೆಯ ಅಧಿಕಾರಿಗಳಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಕೊಡಮಾಡಲಾಯಿತು. ಅಧಿಕಾರಿ ದೇವರಾಜ ಸ್ವಾಗತಿಸಿ ವಂದಿಸಿದರು.