ಜನಪದ ಕಲೆ, ಸಂಗೀತ, ನೃತ್ಯ, ನಾಟಕ, ಚಿತ್ರಕಲೆ ಹಾಗೂ ಸಾಹಿತ್ಯವು ಸಮಾಜದ ಇತಿಹಾಸ, ಜೀವನಶೈಲಿ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿವೆ.
ಬಳ್ಳಾರಿ: ಸಮಾಜದ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಸಾಂಸ್ಕೃತಿಕ ಕಲಾ ವೈಭವಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ತಿಳಿಸಿದರು.
ಸ್ಥಳೀಯ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸಂಡೂರು ತಾಲೂಕಿನ ಎಂ.ಬಸಾಪುರ ಗ್ರಾಮದ ರಂಗನೇಸರ ಸಾಂಸ್ಕೃತಿಕ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಲಾವೈಭವ-2026 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ಜನಪದ ಕಲೆ, ಸಂಗೀತ, ನೃತ್ಯ, ನಾಟಕ, ಚಿತ್ರಕಲೆ ಹಾಗೂ ಸಾಹಿತ್ಯವು ಸಮಾಜದ ಇತಿಹಾಸ, ಜೀವನಶೈಲಿ ಮತ್ತು ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಆಧುನಿಕತೆಯ ಭರಾಟೆಯ ನಡುವೆಯೂ ನಮ್ಮ ಸಾಂಸ್ಕೃತಿಕ ಬೇರುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್ ಅವರು ಡೊಳ್ಳು ನುಡಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತ್ರರ ಸಂಘದ ಜಿಲ್ಲಾಧ್ಯಕ್ಷ ಎನ್.ವೀರಭದ್ರಗೌಡ, ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು, ಹಿರಿಯ ನೃತ್ಯ ನಿರ್ದೇಶಕ ಜಿಲಾನಿಬಾಷಾ ಹಾಗೂ ರಂಗನೇಸರ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ಡಾ.ಕೆ.ಬಸಪ್ಪ ಮಾತನಾಡಿದರು.ಜಾನಪದ ಗಾಯಕ ಜಡೇಶ್ ಎಮ್ಮಿಗನೂರು, ರಂಗನಿರ್ದೇಶಕ ಡಾ.ಅಣ್ಣಾಜಿ ಕೃಷ್ಣಾರೆಡ್ಡಿ, ಸುಬ್ಬಣ್ಣ, ಶ್ರೀನಿವಾಸ ನಾಡಂಗ, ಅಭಿಷೇಕ್ (ಸುಂಕಣ್ಣ) ಉಪಸ್ಥಿತರಿದ್ದರು. ಬಳಿಕ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶರಣಬಸವ ಗವಾಯಿ ಸಿದ್ದರಾಂಪುರ ಮತ್ತು ತಂಡದವರು ಸುಗಮಸಂಗೀತ ಗಾಯನ, ಎಸ್.ಕೆ.ಜಿಲಾನಿ ಭಾಷಾ ಮತ್ತು ತಂಡದಿಂದ ಜಾನಪದ ನೃತ್ಯ, ಶ್ರೀಜಾ ಮತ್ತು ತಂಡದಿಂದ ಸಮೂಹ ನೃತ್ಯ, ನಾಗರಾಜ್ ಮತ್ತು ತಂಡದಿಂದ ಡೊಳ್ಳುಕುಣಿತ, ಹರ್ಷ ಮತ್ತು ತಂಡದಿಂದ ತಾಷಾರಂಡೋಲು ಪ್ರದರ್ಶನ ಜರುಗಿದವು. ವೀರೇಶ್ ಕುರುಗೋಡು ತಬಲಾ ಸಾಥ್ ನೀಡಿದರು. ನಾಗರಾಜ್ ಸಂಜೀವರಾಯನಕೋಟೆ ಹಾಗೂ ಹೇಮೇಶ್ ಕಾರ್ಯಕ್ರಮ ನಿರ್ವಹಿಸಿದರು.