ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು ತಾಲೂಕಿನಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಗೋ ಶಿಬಿರಗಳಿಗೆ ಜಿಲ್ಲಾಧಿಕಾರಿ ಶಿಲ್ಪನಾಗ್ ಭೇಟಿ ನೀಡಿ ಪರಿಶೀಲನೆ ನಡೆಸಿ ಲೋಪದೋಷಗಳು ಬಾರದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹನೂರು ತಾಲೂಕಿನಲ್ಲಿ ತೆರೆಯಲಾಗಿರುವ ಗೋ ಶಿಬಿರಗಳಾದ ಕೌದಳ್ಳಿ, ಶೆಟ್ಟಳ್ಳಿ ಗೋ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಮಾತನಾಡಿದರು.
ಸರ್ಕಾರ ಬರಗಾಲದಿಂದ ತೆರೆಯಲಾಗಿರುವ ಗೋ ಶಿಬಿರಗಳಲ್ಲಿರುವ ಜಾನುವಾರುಗಳಿಗೆ ಅನುಗುಣವಾಗಿ ದಿನನಿತ್ಯ ಮೇವು ನೀಡಬೇಕು, ಜೊತೆಗೆ ಈಗ ಗೊಶಾಲೆಗಳಲ್ಲಿರುವ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಸಹ ಕಲ್ಪಿಸುವ ಮೂಲಕ ಯಾವುದೇ ಲೋಪದೋಷಗಳು ಬರದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ರೈತರು ಸಹ ಕೊಡುತ್ತಿರುವ ನೀವು ಜಾನುವಾರುಗಳಿಗೆ ಸಾಲದು ಹೆಚ್ಚುವರಿ ಆಗಿ ಗೋವುಗಳಿಗೆ ಮೇವು ನೀಡುವಂತೆ ರೈತರು ಜಿಲ್ಲಾಧಿಕಾರಿಗಳ ಜೊತೆ ಮನವಿ ಮಾಡಿದರು.
ಬೇಡಿಕೆ ಹೆಚ್ಚಾಗಿದೆ: ಗೋಶಾಲೆ ಶಿಬಿರಗಳಾದ ಕೌದಳ್ಳಿ, ಕುರಟ್ಟಿ ಹೊಸೂರು ಶೆಟ್ಟಳ್ಳಿ ಅರಬಗೆರೆ 75 ಭದ್ರಯ್ಯನ ಹಳ್ಳಿ ಎಲ್‌ಪಿಎಸ್ ಕ್ಯಾಂಪ್ (ಮುನಿಶೆಟ್ಟಿ ದೊಡ್ಡಿ) ದಂಟಳ್ಳಿ ಚೆನ್ನೂರು ವಿ ಎಸ್ ದೊಡ್ಡಿ ಗ್ರಾಮಗಳಲ್ಲಿ ಈಗಾಗಲೇ 8004, ಜಾನುವಾರು ರಾಸುಗಳು ಸೇರಿದಂತೆ ಎಮ್ಮೆಗಳು 1205 ಒಟ್ಟು, 9209, ಜಾನುವಾರಗಳಿಗೆ ಮೇವಿನ ಸರಬರಾಜು ಮಾಡಲಾಗುತ್ತಿದೆ. ಉಳಿದಂತೆ ಹೆಚ್ಚುವರಿಯಾಗಿ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯಲ್ಲಿಯೂ ಸಹ ಬೇಡಿಕೆ ಇರುವುದರಿಂದ ಗೋಶಾಲೆ ತೆರೆಯಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ಪಶು ಸಂಗೋಪನ ಇಲಾಖೆ ಉಪ ನಿರ್ದೇಶಕ ಹನುಮೇಗೌಡ ಪತ್ರಿಕೆಗೆ ಮಾಹಿತಿ ನೀಡಿ ತಾಲೂಕಿನಲ್ಲಿ 9 ಗೋಶಾಲೆಗಳನ್ನು ತೆರೆಯಲಾಗಿದೆ. ಮೇವು ಸಹ ಸರಬರಾಜು ಮಾಡಲಾಗುತ್ತಿದೆ. ಯಾವುದೇ ಕೊರತೆಯಾಗದಂತೆ ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ. ಮಲೆ ಮಾದೇಶ್ವರ ಬೆಟ್ಟ ಸೇರಿದಂತೆ ಹೆಚ್ಚುವರಿಯಾಗಿ ಮೂರು ಗೋಶಾಲೆಗಳನ್ನು ತೆರೆಯಲು ಅನುಮತಿ ನೀಡಿದ್ದಾರೆ . ಇಲ್ಲಿನ ತಹಸೀಲ್ದಾರ್ ಗುರುಪ್ರಸಾದ್ ಜೊತೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕೆಗೆ ತಿಳಿಸಿದರು. ಈ ವೇಳೆ ಎಡಿಸಿ ಗೀತಾ ಹುಡೇದ್, ತಹಸೀಲ್ದಾರ್ ಗುರುಪ್ರಸಾದ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.