ಸಾರಾಂಶ
ಧಾರವಾಡ:
ಪೊಲೀಸ್ ಇಲಾಖೆಯ ನಿರಂತರ ನಿಗಾ ಮತ್ತು ಕಠಿಣ ಕ್ರಮ, ಜನಜಾಗೃತಿ ಕಾರ್ಯಕ್ರಮಗಳಿಂದಾಗಿ ರಸ್ತೆ ಅಪಘಾತ, ಅಪರಾಧ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿವೆ. ಸಾರ್ವಜನಿಕರ ಸಹಕಾರದಿಂದ ಅಪರಾಧ ಪ್ರಕರಣ ನಿಯಂತ್ರಿಸಲು ಸಾಧ್ಯ ಎಂದು ಎಸ್ಪಿ ಡಾ. ಗೋಪಾಲ ಬ್ಯಾಕೋಡ ಹೇಳಿದರು.ಜಿಲ್ಲಾ ಪೊಲೀಸ್ ಇಲಾಖೆ ಕಚೇರಿಯ ಸಭಾಂಗಣದಲ್ಲಿ ಗುರುವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರಮುಖರ ಕುಂದು-ಕೊರತೆ ಸಭೆ ಜರುಗಿಸಿದ ಅವರು, ಸಾರ್ವಜನಿಕರ ಸಹಕಾರ ಮತ್ತು ಪೊಲೀಸ್ ಇಲಾಖೆ ಕ್ರಮಗಳಿಂದಾಗಿ ಶೇ. 25ರಷ್ಟು ರಸ್ತೆ ಅಪಘಾತಗಳು ಕಡಿಮೆ ಆಗಿವೆ. ಜಿಲ್ಲೆಯ ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಚಾರ ನಿಯಮಗಳು, ಅಪರಾಧ ಮತ್ತು ಡ್ರಗ್ಸ್ ನಿಯಂತ್ರಣ ಕುರಿತು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸಾರ್ವಜನಿಕರು ಸಹನೆಯಿಂದ ವರ್ತಿಸಿದರೆ, ಎಲ್ಲದಕ್ಕೂ ಪರಿಹಾರ ಇರುತ್ತದೆ. ಯಾವುದೇ ಘಟನೆಗಳ ಸಂಭವಿಸುವ ಸಾಧ್ಯೆಗಳಿದ್ದರೆ ಪೊಲೀಸ್ ಮಾಹಿತಿ ನೀಡಬೇಕು. ಇದರಿಂದ ಮುಂಜಾಗ್ರತೆವಹಿಸಿ, ಅಪರಾಧ ನಿಯಂತ್ರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅನೇಕ ಮುಖಂಡರು ಸಹಕಾರ ನೀಡಿದ್ದಾರೆ ಎಂದು ಹೇಳಿದರು.ಯಾವುದೇ ಸಮಸ್ಯೆಗಳಿದ್ದರೂ ಪರಿಹರಿಸಬಹುದು. ಸಂಭಾವ್ಯ ಪ್ರಕರಣ, ಘಟನೆಗಳ ಕುರಿತು ಮಾಹಿತಿ ನೀಡುವುದರಿಂದ ನೋಂದವರಿಗೆ ತಕ್ಷಣ ಪರಿಹಾರ ದೊರಕಿಸಲು ಅನುಕೂಲವಾಗುತ್ತದೆ. ಸಮಾಜದಲ್ಲಿ ಸಹೋದರತ್ವ, ಸಾಮರಸ್ಯ ಮತ್ತು ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪ್ರತಿ ಸಮಾಜಗಳ ಮುಖಂಡರ ಪಾತ್ರ ಮುಖ್ಯವಾಗಿದೆ ಎಂದರು.ಬೀಟ್ ಪೊಲೀಸ್ ಹಾಗೂ ತಹಸೀಲ್ದಾರ್ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮೀಣ ಭಾಗದಲ್ಲಿ ನಾಗರಿಕ ಹಕ್ಕುಗಳು, ಸಮಾನತೆ, ಸಂವಿಧಾನದ ಆಶಯಗಳ ಕುರಿತು ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು. ಯಾವುದೇ ಗ್ರಾಮ, ಪಟ್ಟಣಗಳಲ್ಲಿ ಪ.ಜಾ., ಪಂಗಡದವರಿಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳಲಾಗುವುದು ಎಂದು ಬ್ಯಾಕೋಡ ತಿಳಿಸಿದರು.
ಸಭೆಯಲ್ಲಿ ವಿವಿಧ ಗ್ರಾಮ ಹಾಗೂ ನಗರಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯ ಮುಖಂಡರು ತಮ್ಮ ಹಾಗೂ ಸಮುದಾಯದ ಅಹವಾಲು, ಮನವಿಗಳನ್ನು ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಿದರು.ಹುಬ್ಬಳ್ಳಿ ಗ್ರಾಮೀಣ ಸಿಪಿಐ ಮುರಗೇಶ ಚನ್ನಣ್ಣವರ ಸ್ವಾಗತಿಸಿದರು. ಡಿವೈಎಸ್‌ಪಿ ನಾಗರಾಜ ಎಸ್.ಎಂ. ಪ್ರಾಸ್ತಾವಿಕ ಮಾತನಾಡಿದರು. ಬೆಳಗಾವಿ ಡಿವೈಎಸ್‌ಪಿ ಜೆ.ಆರ್. ನಿಕ್ಕಂ, ಸಮಾಜ ಕಲ್ಯಾಣ ಇಲಾಖೆಯ ಲಲಿತಾ ಹಾವೇರಿ, ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.