ಡೆಂಘೀ ನಿಯಂತ್ರಣಕ್ಕೆ ಸೊಳ್ಳೆ ಉತ್ಪತ್ತಿ ತಡೆಗಟ್ಟಿ: ಡಾ. ತಿಮ್ಮಯ್ಯ

| Published : May 17 2024, 12:34 AM IST / Updated: May 17 2024, 12:35 AM IST

ಡೆಂಘೀ ನಿಯಂತ್ರಣಕ್ಕೆ ಸೊಳ್ಳೆ ಉತ್ಪತ್ತಿ ತಡೆಗಟ್ಟಿ: ಡಾ. ತಿಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ಡೆಂಘೀ ದಿನದ ಅಂಗವಾಗಿ ವೆನ್‍ಲಾಕ್ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಗುರುವಾರ ಜಾಗೃತಿ ಜಾಥಾ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಳೆಗಾಲದಲ್ಲಿ ಡೆಂಘೀ ರೋಗವು ಹೆಚ್ಚಾಗಿ ಹರಡುವ ಸಾದ್ಯತೆ ಇದ್ದು, ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಸುತ್ತಮುತ್ತ ಸೊಳ್ಳೆಗಳ ಉತ್ಪತ್ತಿ ಆಗದಂತೆ ತಡೆಯಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್. ತಿಮ್ಮಯ್ಯ ಹೇಳಿದ್ದಾರೆ.

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಡೆಂಘೀ ದಿನದ ಅಂಗವಾಗಿ ವೆನ್‍ಲಾಕ್ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಗುರುವಾರ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸೊಳ್ಳೆಗಳು ಉತ್ಪತ್ತಿ ಆಗದಂತೆ ಮನೆಯಲ್ಲಿ ಸಂಗ್ರಹವಾಗಿರುವ ನೀರಿನ ಮೂಲಗಳನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಿ ಲಾರ್ವ ಬೆಳೆಯದಂತೆ ಕ್ರಮ ವಹಿಸಬೇಕು ಎಂದರು.

ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನವೀನ್‍ಚಂದ್ರ ಕುಲಾಲ್ ಮಾತನಾಡಿ, ನಾವು ಬಳಕೆ ಮಾಡಿ ಎಸೆದಂತಹಾ ತ್ಯಾಜ್ಯಗಳು, ತೆಂಗಿನ ಚಿಪ್ಪುಗಳು, ಪ್ಲಾಸ್ಟಿಕ್ ಬಾಟಲಿಗಳು, ಟಯರುಗಳು, ಮನೆಯ ಮೇಲಿನ ಛಾವಣಿಯಲ್ಲಿ ನಿಂತ ನೀರಿನಲ್ಲಿ ಡೆಂಘೀ ಹರಡಿಸುವ ಈಡಿಸ್ ಸೊಳ್ಳೆ ಉತ್ಪತ್ತಿಯಾಗುತ್ತದೆ. ಮೂಲದಲ್ಲಿಯೇ ಸೊಳ್ಳೆ ಉತ್ಪಾದನೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಕೈಜೋಡಿಸಿದರೆ ಡೆಂಘೀ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.ಈ ಜಾಥವು ವೆನ್‍ಲಾಕ್ ಜಿಲ್ಲಾಸ್ಪತ್ರೆಯಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯವರೆಗೆ ಸಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿತು.

ರಾಜ್ಯ ಸಾಂಕ್ರಾಮಿಕ ರೋಗಗಳ ಸಂಶೋದನಾಧಿಕಾರಿ ಡಾ. ನಾಗರಾಜ್, ವೆನ್ಲಾಕ್ ಆಸ್ಪತ್ರೆ ಶಸ್ತ್ರಚಿಕಿತ್ಸಕಿ ಡಾ. ಜೆಸಿಂತಾ, ವೆನ್ಲಾಕ್ ಆಸ್ಪತ್ರೆಯ ಆರ್‌ಎಂಒ ಡಾ. ಸುಧಾಕರ್, ಎಂಪಿಡಬ್ಲ್ಯು ಕಾರ್ಯಕರ್ತರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಜಾಥದಲ್ಲಿ ಭಾಗವಹಿಸಿದ್ದರು.