ಸಾರಾಂಶ
ಸರ್ಕಾರ ಪ್ರತಿ ವಿದ್ಯಾರ್ಥಿಗೆ 1ರಿಂದ 5 ನೇ ತರಗತಿವರೆಗೆ 5.45ರು, 6ರಿಂದ 10 ನೇ ತರಗತಿವರೆಗೆ 8.17 ರು. ಪ್ರತಿದಿನ ಖರ್ಚು ಮಾಡುತ್ತಿದೆ. ಇದರಲ್ಲಿ ತರಕಾರಿಗೆ ಎಂದು ಪ್ರತಿ ವಿದ್ಯಾರ್ಥಿಗೆ 1ರಿಂದ 5 ನೆ ತರಗತಿವರೆಗೆ 1.49 ರು,6ರಿಂದ 10ನೇ ತರಗತಿವರೆಗೆ ರು. 2.24 ವ್ಯಯ ಮಾಡುತ್ತಿದೆ. ಿದು ಸಾಕಾಗುತ್ತಿಲ್ಲ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿರುವ ಅಕ್ಷರ ದಾಸೋಹ ಯೋಜನೆಗೆ ಪ್ರತಿದಿನ ಆಹಾರದಲ್ಲಿ ಬಳಕೆಯಾಗಲೇ ಬೇಕಾಗಿರುವ ಆಹಾರ ಧಾನ್ಯ ಹಾಗೂ ತರಕಾರಿಗಳ ಬೆಲೆ ಸರ್ಕಾರ ನಿಗದಿಪಡಿಸಿದ ಅನುದಾನದಲ್ಲಿ ಈ ಪದಾರ್ಥಗಳನ್ನು ಹೊಂದಿಸುವುದು ಕಷ್ಟ. ಹೀಗಾಗಿ ಅಕ್ಷರ ದಾಸೋಹ ಯೋಜನೆ ಒಂದು ಸವಾಲಾಗಿ ಪರಿಣಮಿಸಿದೆ.ಜಿಲ್ಲೆಯಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಬಿಸಿಯೂಟ ನೀಡಲಾಗುತ್ತಿದೆ. ಸರ್ಕಾರ ಪ್ರತಿ ವಿದ್ಯಾರ್ಥಿಗೆ 1ರಿಂದ 5 ನೇ ತರಗತಿವರೆಗೆ 5.45ರು, 6ರಿಂದ 10 ನೇ ತರಗತಿವರೆಗೆ 8.17 ರು. ಪ್ರತಿದಿನ ಖರ್ಚು ಮಾಡುತ್ತಿದೆ. ಇದರಲ್ಲಿ ತರಕಾರಿಗೆ ಎಂದು ಪ್ರತಿ ವಿದ್ಯಾರ್ಥಿಗೆ 1ರಿಂದ 5 ನೆ ತರಗತಿವರೆಗೆ 1.49 ರು,6ರಿಂದ 10ನೇ ತರಗತಿವರೆಗೆ ರು. 2.24 ವ್ಯಯ ಮಾಡುತ್ತಿದೆ.ತರಕಾರಿ ದರ ಹೆಚ್ಚಳ
ಆದರೆ ಟೊಮೆಟೋ, ಈರುಳ್ಳಿ ಸೇರಿದಂತೆ ಎಲ್ಲಾ ತರಕಾರಿಗಳ ಬೆಲೆ ಗಗನಕೇರಿದ್ದರಿಂದ ಊಟದಲ್ಲಿ ಟೊಮೆಟೋ ಬದಲು ಹುಣಸೆಹಣ್ಣು ಬಳಸಲಾಗುತ್ತಿದೆ. ಶಾಲೆಗಳಿಗೆ ಬಿಸಿ ಊಟದ ತರಕಾರಿ ಅಡುಗೆ ಅನಿಲ ಸೇರಿ ಬಿಸಿಯೂಟ ನೌಕರರು ಹಾಗೂ ಶಿಕ್ಷಕರು ಕೈಯಿಂದ ಹಣ ಹಾಕಿ ಖರೀದಿಸಿ ತರುತ್ತಿದ್ದಾರೆ. ಅಕ್ಷರ ದಾಸೋಹ ಯೋಜನೆ ಅಡಿ ಸರ್ಕಾರ ವಾರದ 6 ದಿನಕ್ಕೆ ಊಟದ ಮೆನು ರೂಪಿಸಿದೆ. ಆದರೆ ಸರ್ಕಾರ ಒದಗಿಸಿದ ಅನುದಾನದಲ್ಲಿ ಟೊಮೆಟೋ ಮತ್ತು ತರಕಾರಿ ಹೊಂದಿಸುವುದು ಮುಖ್ಯ ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿದೆ. ಶಿಕ್ಷಕರಿಗೆ ಸವಾಲಾದ ಬಿಸಿಯೂಟಮಾರುಕಟ್ಟೆಯಲ್ಲಿ ತರಕಾರಿ ಹಾಗೂ ಮೊಟ್ಟೆ ಬೆಲೆಗಗನಕ್ಕೇರಿದ್ದು, ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟ ಒದಗಿಸುವುದು ಶಿಕ್ಷಕರಿಗೆ ಸವಾಲು ಆಗಿದೆ. ಶಾಲೆಯಲ್ಲಿ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ ಒಬ್ಬ ವಿದ್ಯಾರ್ಥಿಗೆ 6 ರು. ಸಹಾಯಧನ ನಿಗದಿ ಪಡಿಸಲಾಗಿದೆ.ಆದರೆ, ಅಂಗಡಿ ಯಲ್ಲಿ ಒಂದು ಮೊಟ್ಟೆ 7 ರು.ಗೆ ಮಾರಾಟವಾಗುತ್ತಿದೆ. ಹಾಗಾಗಿ ಬಿಸಿಯೂಟ ಮಾಡಿಸುತ್ತಿರುವ ಶಿಕ್ಷಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ಜಿಲ್ಲೆಯಲ್ಲಿ 1632 ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸುಮಾರು 92 ಸಾವಿರ ಮಂದಿ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿ ಯೂಟ ಯೋಜನೆಯ ಫಲಾನುಭವಿಗಳಾಗಿದ್ದಾರೆ. 1ರಿಂದ 5 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಒಬ್ಬ ವಿದ್ಯಾರ್ಥಿಗೆ ಸಾಂಬಾರು ಪದಾರ್ಥ, ಉಪ್ಪು, ಬೇಳೆ,ಎಣ್ಣೆ, ಇಂಧನ ಮತ್ತು ಇತರೆ ವೆಚ್ಚ ಖರೀದಿಗಾಗಿ ರು. 3.96, 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ 5.92 ರು. ಸರ್ಕಾರ ನೀಡುತ್ತಿದೆ.ತರಕಾರಿ ಖರೀದಿಗೆ ಸ್ವಂತ ಹಣ
ತರಕಾರಿ ಬೆಲೆಯು ಏರಿಕೆಯಾಗಿದ್ದು, ಸರ್ಕಾರ ನೀಡುವ ಅನುದಾನದಲ್ಲಿ ತರಕಾರಿ ಖರೀದಿಸಲು ಸಾಧ್ಯವಾಗದೆ ತಮ್ಮ ಜೇಬಿನಿಂದ ಹಣ ವೆಚ್ಚ ಮಾಡಿ ಶಿಕ್ಷಕರು ತರಕಾರಿ ಖರೀದಿಸುತ್ತಿದ್ದಾರೆ. ಸರ್ಕಾರ, ಅಕ್ಷರ ದಾಸೋಹ ಇಲಾಖೆಯ ಮೂಲಕ ಬಿಸಿಯೂಟಕ್ಕಾಗಿ ಅಕ್ಕಿ, ಬೇಳೆ, ಅಡುಗೆ ಅನಿಲ, ಗೋಧಿ, ಎಣ್ಣೆ, ಸರಬರಾಜು ಮಾಡುತ್ತಿದೆ. ಇನ್ನು ಉಳಿದಂತೆ ಸಾಂಬಾರು ಪದಾರ್ಥಗಳು, ಉಪ್ಪು, ತರಕಾರಿ ಶಾಲೆಯವರೇ ಖರೀದಿಸಬೇಕಾಗಿದೆ. ಈಗಿನ ಬೆಲೆಗಳಲ್ಲಿ ಒಬ್ಬ ವಿದ್ಯಾರ್ಥಿಗೆ ಸರಾಸರಿ 14 ರು. ಖರ್ಚಾಗುತ್ತಿದೆ. ಸರ್ಕಾರ ನಿಗದಿ ಮಾಡಿರುವ ಹಣಕ್ಕಿಂತ ಇದು 5.83 ರು.ಗಳು ಹೆಚ್ಚುವರಿಯಾಗಿದ್ದು, ಶಿಕ್ಷಕರಿಗೆ ಹೊರೆಯಾಗುತ್ತಿದೆ. ಪ್ರಸ್ತುತ ಸರ್ಕಾರದಿಂದ ನಮಗೆ ಬಿಡುಗಡೆಯಾಗುವ ಅನುದಾನವನ್ನು ಆಯಾ ಶಾಲೆಗಳ ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯ ಶಿಕ್ಷಕರ ಜಂಟಿ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಬಿಸಿಯೂಟಕ್ಕೆ ನೀಡುವ ದರವೂ ಪರಿಷ್ಕರಣೆಯಾಗಿದೆ. ಈ ವರ್ಷದಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಸಂಪೂರ್ಣ ಅಂಕಿ ಅಂಶಗಳ ಚಿತ್ರಣ ದೊರೆತರೆ ಉತ್ತಮ ಪರಿಹಾರ ಕಂಡುಕೊಳ್ಳಲು ಸಾಧ್ಯ.