ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಕಾಫಿ ಕ್ಯೂರಿಂಗ್ ವರ್ಕ್ಸ್‌ಗಳ ಮಾಲೀಕರಿಂದ ಬೆಳೆಗಾರರ ಶೋಷಣೆ ಮಾಡಲಾಗುತ್ತಿದೆ ಎಂಬ ಆರೋಪ ಬೆಳೆಗಾರರ ವಲಯದಿಂದ ಕೇಳಿ ಬರುತ್ತಿದ್ದರೆ, ನೀವೇ ಬನ್ನಿ ರಫ್ತು ಮಾಡಿ ಎಂದು ಕ್ಯೂರಿಂಗ್ ವರ್ಕ್ಸ್ ಮಾಲೀಕರು ಬೆಳೆಗಾರರನ್ನು ಆಗ್ರಹಿಸುತ್ತಿರುವುದರಿಂದ ಕಾಫಿ ಮಾರುಕಟ್ಟೆಯಲ್ಲಿ ಅಘೋಷಿತ ಯುದ್ಧ ಆರಂಭವಾಗಿದೆ.ಅಂತಾರಾಷ್ಟ್ರೀಯ ಮಾರುಕಟ್ಟೆ ಆಧರಿಸಿ ಕ್ಯೂರಿಂಗ್ ವರ್ಕ್ಸ್ ಮಾಲೀಕರು ಸ್ಥಳೀಯ ಮಾಸರುಕಟ್ಟೆಯಲ್ಲಿ ಕಾಫಿ ದರ ನಿಗದಿಪಡಿಸುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಲವೇ ಡಾಲರ್ ಕುಸಿತಗೊಂಡರೂ ಸ್ಥಳೀಯ ಮಾರುಕಟ್ಟೆಯಲ್ಲಿ ಕುಸಿತಕ್ಕೆ ತಕ್ಕಂತೆ ದರ ಕಡಿತಗೊಳಿಸುವ ಕ್ಯೂರಿಂಗ್ ವರ್ಕ್ಸ್‌ಗಳ ಮಾಲೀಕರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಏರಿಕೆಯಾದರೆ ಇದಕ್ಕೆ ತಕ್ಕಂತೆ ದರ ಏರಿಕೆ ಮಾಡದೆ ವಂಚಿಸುತ್ತಿದ್ದಾರೆ ಎಂಬುದು ಬೆಳೆಗಾರರ ಆರೋಪ.
ಕಾಫಿ ಮಾರುಕಟ್ಟೆ ಮುಕ್ತಗೊಂಡ ನಂತರದ ಮೂರು ದಶಕಗಳಲ್ಲಿ ರೋಬಸ್ಟ್ ಕಾಫಿ ಧಾರಣೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶುಕ್ರವಾರ ದಾಖಲೆ ಬರೆದಿದ್ದು ಶುಕ್ರವಾರದ ಮಾರುಕಟ್ಟೆ ಅಂತ್ಯದ ವೇಳೆಗೆ ಲಂಡನ್ ಮಾರುಕಟ್ಟೆಯಲ್ಲಿ ಒಂದು ಟನ್ ರೋಬಸ್ಟ್ ಕಾಫಿ ಧಾರಣೆ ೫೧೪೯ ಡಾಲರ್ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಕಾರ ಸ್ಥಳೀಯ ಮಾರುಕಟ್ಟೆಯಲ್ಲಿ ಓಟಿ ದರ ೫೧೪ ರು.ಗಳಾಗಬೇಕಿದೆ. ಓಟಿ ಆಧಾರದಲ್ಲಿ ರೋಬಸ್ಟ್ ಕಾಫಿ ಧಾರಣೆ ಪ್ರತಿ ೫೦ ಕೆ.ಜಿಗೆ ೧೨೫೦೦ ರು.ಗಳಿಂದ ೧೫೪೦೦ ರು.ಗಳಾಗಬೇಕಿದೆ. ಆದರೆ, ಇಂದಿಗೂ ಸ್ಥಳೀಯ ಮಾರುಕಟ್ಟೆಯಲ್ಲಿ ಓಟಿ ದರ ೪೦೦ ರು.ಗಳಿದ್ದು ಈ ಪ್ರಕಾರ ಪ್ರತಿ ೫೦ ಕೆ.ಜಿ ರೋಬಸ್ಟ್ ಕಾಫಿ ಬೆಲೆ ೧೦ ಸಾವಿರದಿಂದ ೧೧ ಸಾವಿರ ಅಸುಪಾಸಿನಲ್ಲಿದೆ. ಆದರೆ, ಒಂದು ತಿಂಗಳ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಟನ್ ಕಾಫಿ ಧಾರಣೆ ೪೧೫೦ ಡಾಲರ್‌ಗಳಿದ್ದ ವೇಳೆ ಸ್ಥಳಿಯ ಮಾರುಕಟ್ಟೆಯಲ್ಲಿ ಓಟಿ ಧಾರಣೆ ೪೦೩ ರು.ಗಳಿತ್ತು. ಇದೇ ಧಾರಣೆ ಇಂದಿಗೂ ಇರುವುದು ಕ್ಯೂರಿಂಗ್ ವರ್ಕ್ಸ್ ಮಾಲೀಕರು ಬೆಳೆಗಾರರ ಶೋಷಣೆಗೆ ಹಿಡಿದಿರುವ ಕೈ ಕನ್ನಡಿಯಾಗಿದೆ ಎಂಬ ಲೆಕ್ಕಚಾರವನ್ನು ಬೆಳೆಗಾರರು ಮುಂದಿಡುತ್ತಿದ್ದಾರೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಧಾರಣೆ ೧೦ ಡಾಲರ್ ಏರಿಕೆ ಕಂಡರೆ ಸ್ಥಳೀಯ ಮಾರುಕಟ್ಟೆಯಲ್ಲಿ ಒಂದು ರು. ಏರಿಕೆಯಾಗಬೇಕಿದೆ. ಆದರೆ, ಕ್ಯೂರಿಂಗ್ ವರ್ಕ್ಸ್ ಮಾಲೀಕರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ೧೦೦ ಡಾಲರ್ ಏರಿಕೆ ಕಂಡರೆ ೨ ರಿಂದ ೩ ರು. ಗಳನ್ನು ಮಾತ್ರ ಏರಿಕೆ ಮಾಡುತ್ತಿದ್ದಾರೆ. ಆದರೆ, ೧೦೦ ಡಾಲರ್ ಇಳಿಕೆ ಕಂಡರೆ ೧೦ ರು.ಗಳ ಇಳಿಕೆ ಮಾಡುವ ಮೂಲಕ ಸ್ಥಳೀಯ ಬೆಳೆಗಾರರು ಹಾಗೂ ವ್ಯಾಪಾರಸ್ಥರನ್ನು ಶೋಷಿಸುತ್ತಿದ್ದಾರೆ ಎಂಬ ಆರೋಪಗಳು ದಟ್ಟವಾಗಿದೆ. ಆದರೆ, ಕ್ಯೂರಿಂಗ್ ವರ್ಕ್ಸ್ ಮಾಲೀಕರ ವಾದವೇ ಬೇರೆ ಇದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯ ಪ್ರಕಾರ ಬೆಲೆ ನಿಗದಿಪಡಿಸದೆ ಇದ್ದಿದ್ದರೆ ೧೮೦ ರು.ಗಳಿಂದ ೪೦೦ ರು.ಗಳಿಗೆ ಓಟಿ ಧಾರಣೆ ಏರಿಕೆಯಾಗುತ್ತಿದ್ದು ಹೇಗೆ ಮಾರುಕಟ್ಟೆಯಲ್ಲಿ ದರ ವ್ಯತ್ಯಾಸ ಆಗಲಿದೆ, , ತೂಕ ನಷ್ಟ, ಗುಣಮಟ್ಟ ನಿಗದಿಯಂತ ಹಲವು ತಾಂತ್ರಿಕ ಅಂಶಗಳಿದ್ದು ಬೆಳೆಗಾರರಿಗೆ ಇದು ಅರ್ಥವಾಗುತ್ತಿಲ್ಲ. ಕ್ಯೂರಿಂಗ್ ವರ್ಕ್ಸ ಮಾಲೀಕರು ಬೆಳೆಗಾರರನ್ನು ಶೋಷಿಸುತ್ತಾರೆಂಬದು ಸತ್ಯವಾದರೆ ಚಿಕ್ಕಮಗಳೂರು,ಹಾಸನ,ಕೂಡಗು ಜಿಲ್ಲೆಯಲ್ಲಿರುವ ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಬೆಳೆಗಾರರ ಸಂಘ,ಕೂರ್ಗ ಆಶೋಷಿಯೆಷನ್ ಎಂಬ ಸಂಘಟನೆಗಳು ಬೆಳೆಗಾರರ ಪ್ರತಿನಿಧಿಗಳಾಗಿದ್ದು ಇವರೆ ಬೆಳೆಗಾರರಿಂದ ಕಾಫಿ ಖರೀಧಿಸಿ ರಪ್ತುಮಾಡಬಹುದಲ್ಲ, ಕಾಫಿ ರಪ್ತುಮಾಡುವ ಉದ್ದೇಶದಿಂದ ಕೂಡಗಿನಲ್ಲಿ ಬೆಳೆಗಾರರೇ ರಚಿಸಿಕೊಂಡಿರುವ ಬಯೋಟ ಎಂಬ ಸಂಸ್ಥೆ ಸಹ ಇದೇ ಧಾರಣೆಗೆ ಏಕೆ ಕಾಫಿ ಖರೀದಿಸುತ್ತಿಲ್ಲ ಎಂಬ ಪ್ರಶ್ನೆ ಎತ್ತಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕ್ಯೂರಿಂಗ್ ವರ್ಕ್ಸ್ ಮಾಲೀಕರು ನಷ್ಟ ಎದುರಿಸುತ್ತಿದ್ದು ಪ್ರತಿವರ್ಷ ಒಂದಲ್ಲ ಒಂದು ಕ್ಯೂರಿಂಗ್ ವರ್ಕ್ಸ್‌ಗಳು ಬಾಗಿಲು ಮುಚ್ಚುತ್ತಿವೆ. ಟ್ರೇಡರ್‌ಗಳು ಆತ್ಮಹತ್ಯೆಗೆ ತುತ್ತಾಗುತ್ತಿದ್ದರೆ. ಕಳೆದ ೧೦ ವರ್ಷಗಳಲ್ಲಿ ಹೊಸದಾಗಿ ಯಾವುದೇ ಕಂಪನಿಯು ಕ್ಯೂರಿಂಗ್ ವರ್ಕ್ಸ್ ಸ್ಥಾಪಿಸಿರುವುದು, ಅಭಿವೃದ್ಧಿಪಡಿಸಿರುವ ಇತಿಹಾಸವೇ ಇಲ್ಲದಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಮಾರುಕಟ್ಟೆಯಷ್ಟು ಪಾರದರ್ಶಕ ಮಾರುಕಟ್ಟೆ ಮತ್ತೊಂದಿಲ್ಲ. ಹೀಗಿದ್ದರೂ ವಂಚನೆಯಾಗುತ್ತಿದೆ ಎಂಬುದರಲ್ಲಿ ಅರ್ಥವಿಲ್ಲ. ಕೇವಲ ಮೂರು ವರ್ಷಗಳ ಹಿಂದೆ ನಾಲ್ಕು ಸಾವಿರದ ಅಸುಪಾಸಿನಲ್ಲಿದ್ದ ರೋಬಸ್ಟ್ ಕಾಫಿ ಧಾರಣೆ ಸದ್ಯ ೧೦ ಸಾವಿರ ಗಡಿದಾಟಿದರೂ ಬೆಳೆಗಾರರಿಗೆ ತೃಪ್ತಿ ಇಲ್ಲ. ನಿರಂತರ ಕಾಫಿ ಧಾರಣೆ ಏರಿಕೆಯಾದರೆ ಗ್ರಾಹಕರ ಮೇಲೂ ಇದರ ಪರಿಣಾಮ ಬೀರಲಿದೆ. ಎರಡು ವರ್ಷಗಳ ಹಿಂದೆ ಭಾರತದಲ್ಲಿ ಒಂದು ಕಪ್ ಕಾಫಿ ಬೆಲೆ ೨೦೦ ರುಗಳಾಗಿದ್ದರೆ, ಸದ್ಯ ೩೧೮ ರು.ಗಳಿಗೆ ತಲುಪಿದೆ. ಹೊರದೇಶಗಳಲ್ಲಿ ಒಂದು ಕಫ್ ಕಾಫಿ ಬೆಲೆ 300 ರೂಗಳಿಂದ 500 ರು. ಗಳಾಗಿದೆ. ಹೀಗೆ ನಿರಂತರವಾಗಿ ಕಾಫಿಬೆಲೆ ಏರಿಕೆಯಾಗುವುದರಿಂದ ಕಾಫಿ ಸೇವನೆ ಮಾಡುವವರ ಸಂಖ್ಯೆ ಕುಸಿಯಲಿರುವುದರಿಂದ ಭವಿಷ್ಯದಲ್ಲಿ ಕಾಫಿ ಮಾರುಕಟ್ಟೆಯ ಮೇಲೆ ನಕರಾತ್ಮಕ ಪರಿಣಾಮ ಬಿರಲಿದೆ ಎಂಬ ವಾದ ರಫ್ತುದಾರರು ಹಾಗೂ ಕ್ಯೂರಿಂಗ್ ವರ್ಕ್ಸ್ ಮಾಲೀಕರ ವಲಯದಿಂದ ಕೇಳಿ ಬರುತ್ತಿದೆ.ಪ್ರತಿಭಟನೆ, ಆಕ್ರೋಶ, ಸಭೆ: ರಫ್ತುದಾರರು ಹಾಗೂ ಕ್ಯೂರಿಂಗ್ ವರ್ಕ್ಸ್ ಮಾಲೀಕರು ಧಾರಣೆಯಲ್ಲಿ ಬೆಳೆಗಾರರನ್ನು ಶೋಷಿಸುತ್ತಿದ್ದಾರೆಂದು ಆರೋಪಿಸಿ ಇತ್ತೀಚೆಗೆ ಕೂಡಗಿನಲ್ಲಿ ಪ್ರತಿಭಟನೆ ನಡೆಸಲಾಗಿದ್ದರೆ, ಹಾಸನ ಜಿಲ್ಲೆಯಲ್ಲಿ ಬೆಳೆಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಗಮನಿಸಿದ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಕುಮಾರ್, ತಿಂಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಬೆಳೆಗಾರರು ಹಾಗೂ ಕ್ಯೂರಿಂಗ್ ವರ್ಕ್ಸ್ ಮಾಲೀಕರು ಹಾಗೂ ರಫ್ತುದಾರರ ಸಭೆ ನಡೆಸಿ ವಾಸ್ತವ ತಿಳಿಸುವ ಪ್ರಯತ್ನ ನಡೆಸಿದ್ದಾರೆ. ಆದರೂ ಬೆಳೆಗಾರರು ಹಾಗೂ ರಫ್ತುದಾರರ ನಡುವೆ ಹೊಂದಾಣಿಕೆ ಕಾಣೆಯಾಗಿದೆ. ಒಟ್ಟಿನಲ್ಲಿ ಬೆಳೆಗಾರರು ಹಾಗೂ ಕ್ಯೂರಿಂಗ್ ವರ್ಕ್ಸ್ ಮಾಲೀಕರ ನಡುವೆ ಮಾತ್ರ ಆರೋಪ ಪ್ರತ್ಯರೋಪ ನಡೆಯುತ್ತಿರುವುದು ಮಾತ್ರ ಸುಳ್ಳಲ್ಲ.
*ಹೇಳಿಕೆ1ಅಂತಾರಾಷ್ಟ್ರೀಯ ಮಾರುಕಟ್ಟೆಯಂತೆ ಸ್ಥಳೀಯ ಮಾರುಕಟ್ಟೆಯಲ್ಲಿ ದರ ನಿಗದಿಪಡಿಸುವಂತೆ ಬೆಳೆಗಾರರು ಆಗ್ರಹಿಸುತ್ತಿದ್ದಾರೆ. ಆದರೆ ಆ ಧಾರಣೆ ನೀಡಲು ಸಾಧ್ಯವಿಲ್ಲ ಎಂಬುದು ಕ್ಯೂರಿಂಗ್ ವರ್ಕ್ಸ್ ಮಾಲೀಕರ ವಾದವಾಗಿದೆ. ಈ ಸಂಬಂಧ ಒಂದು ಸಭೆ ನಡೆಸಿದ್ದು, ಮತ್ತೊಂದು ಸಭೆಯನ್ನು ಸಕಲೇಶಪುರದಲ್ಲಿ ಆಯೋಜಿಸಲಾಗುವುದು.
ದಿನೇಶ್ ಕುಮಾರ್, ಅಧ್ಯಕ್ಷರು, ಕಾಫಿ ಮಂಡಳಿ.*ಹೇಳಿಕೆ2
ರಪ್ತುದಾರರು ಕ್ಯೂರಿಂಗ್ ವರ್ಕ್ಸ್ ಮಾಲೀಕರು ಹಲವು ಸಮಸ್ಯೆ ಎದುರಿಸುತ್ತಿದ್ದು, ತಾಂತ್ರಿಕ ಅಂಶಗಳು ಇವರನ್ನು ನಷ್ಟದ ಸುಳಿಗೆ ಎಳೆದೊಯ್ಯುತ್ತಿವೆ. ಇದರಿಂದಾಗಿ ಪ್ರತಿವರ್ಷ ಒಂದಲ್ಲ ಒಂದು ಕ್ಯೂರಿಂಗ್ ವರ್ಕ್ಸ್‌ಗಳು ಬಾಗಿಲು ಮುಚ್ಚುತ್ತಿವೆ. ಇದನ್ನು ಕಾಫಿ ಬೆಳೆಗಾರರು ಅರ್ಥಮಾಡಿಕೊಳ್ಳಬೇಕು.ಧರ್ಮರಾಜ್, ಕಾಫಿ ಟ್ರೇಡರ್ಸ್, ಹೊಂಕರವಳ್ಳಿ.