ಮುಜರಾಯಿ ದೇವಾಲಯಗಳ ಅರ್ಚಕರ ತಸ್ತಿಕ್ 72 ಸಾವಿರಕ್ಕೇರಿಕೆ : ಸಚಿವ ರಾಮಲಿಂಗಾರೆಡ್ಡಿ

| N/A | Published : Apr 03 2025, 02:46 AM IST / Updated: Apr 03 2025, 12:22 PM IST

ಸಾರಾಂಶ

 ರಾಜ್ಯದಲ್ಲಿ ಮುಜರಾಯಿ ದೇವಾಲಯಗಳ ಅರ್ಚಕರ ತಸ್ತಿಕ್ 60-72 ಸಾವಿರಕ್ಕೆ ಏರಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಹೊಸಕೋಟೆ: ರಾಜ್ಯದಲ್ಲಿ ಮುಜರಾಯಿ ದೇವಾಲಯಗಳ ಅರ್ಚಕರ ತಸ್ತಿಕ್ 60-72 ಸಾವಿರಕ್ಕೆ ಏರಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ನಗರದಲ್ಲಿ ನಡೆದ ಹೊಸಕೋಟೆ ತಾಲೂಕು ಮುಜರಾಯಿ ದೇವಾಲಯಗಳ ಅರ್ಚಕರ ಒಕ್ಕೂಟ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅರ್ಚಕರ ಪರಂಪರೆ ಎನ್ನುವುದು ವಿಶಿಷ್ಟ ಹಾಗೂ ಗೌರವಯುತ ಕೆಲಸ. ಸಕಲ ಜೀವರಾಶಿಗಳಿಗೂ ಒಳಿತನ್ನು ಬಯಸುವವರು ಅರ್ಚಕರು. ತಸ್ತಿಕ್ ಹೆಚ್ಚು ಮಾಡುವುದರ ಜೊತೆಗೆ ಮೃತ ಅರ್ಚಕರ ಕುಟುಂಬಕ್ಕೆ 2 ಲಕ್ಷ ಪರಿಹಾರ, 5 ಸಾವಿರದಿಂದ 1 ಲಕ್ಷದವರೆಗೆ ಅರ್ಚಕರ ಮಕ್ಕಳ ವಿದ್ಯಾರ್ಥಿ ವೇತನ, 35 ಸಾವಿರ ಅರ್ಚಕರಿಗೆ ವಿಮೆ ಜೊತೆಗೆ ಬೆಂಗಳೂರು ನಗರದಲ್ಲಿ ಧಾರ್ಮಿಕ ಸೌಧ ನಿರ್ಮಿಸಿಕೊಡಲಾಗುವುದು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅರ್ಚಕರಿಗೆ ಸಹಾಯ ಮಾಡಿದರೆ ಬಿಜೆಪಿ ವಿನಾಕಾರಣ ವಿರೋಧಿಸುತ್ತಿದೆ. ಆದ್ದರಿಂದ ಅರ್ಚಕರು ಪ್ರತಿದಿನ ದೇವರಿಗೆ ಪೂಜೆ ಸಲ್ಲಿಸುವಾಗ ಬಿಜೆಪಿಯವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುವಂತೆ ಹೇಳಿದರು.

ಪ್ರತಿ ತಾಲೂಕು ಕೇಂದ್ರದಲ್ಲೂ ಒಕ್ಕೂಟ: ಸಚಿವ ಹಾಗೂ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ, ಉಪಾಧಿವಂತರ ಒಕ್ಕೂಟದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಅರ್ಚಕರ ಒಕ್ಕೂಟವನ್ನ ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಲ್ಲಿ ಪ್ರಾರಂಭಿಸಬೇಕಿದೆ. ಹೊಸಕೋಟೆಯಲ್ಲಿ 109ನೇ ಶಾಖೆ ಉದ್ಘಾಟಿಸಲಾಗಿದೆ. ಅರ್ಚಕರ ಸಮಸ್ಯೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲು ಸಂಘಟನೆ ಅತಿ ಮುಖ್ಯ. ಕಳೆದ 20 ವರ್ಷದಿಂದ ಸಂಘದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದು ಅರ್ಚಕರ ಸಮಸ್ಯೆಗಳನ್ನ ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಪರಿಹರಿಸುತ್ತಿದ್ದೇನೆ. ಅರ್ಚಕರು ಧರ್ಮ ಉಳಿಸುವ ಕೆಲಸ ಮಾಡುತ್ತಿದ್ದು, ಅದಕ್ಕೆ ಪೂರಕವಾಗಿ ಸರ್ಕಾರ ಸ್ಪಂದಿಸುತ್ತಿದೆ. ಇದರ ನಡುವೆ ಕೆಲ ವಿರೋಧಿಗಳು ಹಿಂದೂ ದೇವಾಲಯದ ಹಣ ಬೇರೆ ಉದ್ದೇಶಕ್ಕೆ ಬಳಸುತ್ತಾರೆಂದು ಅಪಪ್ರಚಾರ ಮಾಡುತ್ತಿರುವುದನ್ನ ನಿಲ್ಲಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅರ್ಚಕರಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಮುಂದಾಗಿದೆ. ಸರ್ವಧರ್ಮಕ್ಕೂ ಅನುಕೂಲಕರ ಬಜೆಟ್ ನೀಡಿದರೂ ಸಹ ವಿರೋಧಿಗಳು ಹಲಾಲ್ ಬಜೆಟ್ ಎಂದು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ದೇವಾಲಯಗಳ ಜಮೀನು ಏರಿಕೆ:

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ರಾಮಲಿಂಗಾರೆಡ್ಡಿಯವರು ಮುಜರಾಯಿ ಸಚಿವರಾದ ಬಳಿಕ ರಾಜ್ಯದಲ್ಲಿ ಮುಜರಾಯಿ ಇಲಾಖೆ ದೇವಾಲಯಗಳ ಜಮೀನು 3.5 ಸಾವಿರ ಎಕರೆಯಿಂದ 18 ಸಾವಿರ ಎಕರೆಗೆ ಏರಿಕೆ ಮಾಡಿದ್ದಾರೆ. ಇದು ಅವರಿಗೆ ಅರ್ಚಕರ ಮೇಲಿರುವ ಕಾಳಜಿ ತೋರುತ್ತದೆ. ಹೊಸಕೋಟೆ ತಾಲೂಕಿನಲ್ಲಿ ಚೆನ್ನಬೈರೇಗೌಡರ ಕಾಲದಿಂದಲೂ ನಮ್ಮ ಕುಟುಂಬಕ್ಕೆ ಹಾಗೂ ಅರ್ಚಕರಿಗೆ ಅವಿನಾಭಾವ ಸಂಬಂಧವಿದ್ದು ಅರ್ಚಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ ಅರ್ಚಕರ ಬೇಡಿಕೆಗಳ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡುತ್ತೇನೆ ಎಂದರು.

ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಒಕ್ಕೂಟದ ಅಧ್ಯಕ್ಷ ಪ್ರೊ.ಡಾ.ರಾಧಾಕೃಷ್ಣ ಮಾತನಾಡಿ, ರಾಜ್ಯದಲ್ಲಿ 38600 ಮುಜರಾಯಿ ದೇವಾಲಯಗಳಿದ್ದು, 37 ಸಾವಿರ ಸಿ ಕೆಟಗರಿ ದೇವಾಲಯಗಳಿವೆ. 10 ಸಾವಿರ ದಲಿತ ಅರ್ಚಕರು ಕೆಲಸ ಮಾಡುತ್ತಿದ್ದಾರೆ. ಹಿಂದುತ್ವದ ಹೆಸರಿನಲ್ಲಿ 1 ಲಕ್ಷ ಎಕರೆ ದೇವಾಲಯದ ಜಾಗ ಪ್ರಭಾವಿಗಳು ಕಬಳಿಸಿದ್ದಾರೆ. ಈಗಾಗಲೇ 18 ಸಾವಿರ ಎಕರೆ ವಶಕ್ಕೆ ಪಡೆದಿದ್ದೇವೆ. ಉಳಿದದ್ದು ವಶಕ್ಕೆ ಪಡೆಯಬೇಕು. ಪ್ರಮುಖವಾಗಿ ದೇವಾಲಯಗಳನ್ನು ಖಾಸಗೀತನ ಮಾಡುವ ಹುನ್ನಾರ ಎಂದಿಗೂ ಯಾರು ಮಾಡಬಾರದು ಎಂದರು.

ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ, ಉಪಾದಿವಂತರ ಒಕ್ಕೂಟದ ಅಧ್ಯಕ್ಷ ಕೆಎಸ್‌ಎನ್ ದೀಕ್ಷಿತ್, ಜಿಲ್ಲಾ ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ದಿನೇಶ್, ಧಾರ್ಮಿಕ ದತ್ತಿ ತಹಸೀಲ್ದಾರ್ ಹೇಮಾವತಿ, ತಾಲೂಕು ಕಚೇರಿ ಗುಮಾಸ್ತೆ ಕುಮಾರಿ, ಮುಜರಾಯಿ ದೇವಾಲಯಗಳ ಅರ್ಚಕರ ಒಕ್ಕೂಟದ ಗೌರವಾಧ್ಯಕ್ಷ ಶ್ಯಾಮ್ ಸುಂದರ್ ದೀಕ್ಷಿತ್, ಅಧ್ಯಕ್ಷ ಅಶ್ವತ್‌, ಉಪಾಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಸುಧೀಂದ್ರ ಶರ್ಮ, ಉಪಾಧ್ಯಕ್ಷ ರವಿಕುಮಾರ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ನಾಗೇಂದ್ರ ಪ್ರಸಾದ್, ಶೇಷಾದ್ರಿ, ಸಹ ಕಾರ್ಯದರ್ಶಿ ನಟರಾಜ್, ಕಾರ್ಯದರ್ಶಿ ರವಿಚಂದ್ರ, ಸಂಚಾಲಕ ಮಹೇಶ್ ಕುಮಾರ್, ರೇಣುಕಾ ಆರಾಧ್ಯ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಡಾ.ಹೆಚ್.ಎಂ ಸುಬ್ಬರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಬಾಬುರೆಡ್ಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿವಿ ಸತೀಶ್‌ಗೌಡ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಬಚ್ಚೇಗೌಡ, ಪದಾಧಿಕಾರಿಗಳು ಹಾಜರಿದ್ದರು.