ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣ ಜೀವನ ರೂಪಿಸುತ್ತದೆ. ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತ ಭದ್ರ ಬುನಾದಿಯಾಗಿದೆ ಎಂದು ಹೋಬಳಿ ಶಿಕ್ಷಣ ಸಂಯೋಜಕ ರವಿಕುಮಾರ್ ತಿಳಿಸಿದರು.ಮಾರಗೌಡನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಕಲಿಕೋತ್ಸವ ಸಂಭ್ರಮದಲ್ಲಿ ಮಾತನಾಡಿ, ಶಾಲೆಯಲ್ಲಿ ಕಲಿಕೆಯ ಹಬ್ಬದ ವಾತಾವರಣವಿದೆ. ತಾಲೂಕಿಗೆ ಇದು ಮಾದರಿ ಶಾಲೆಯಾಗಿದೆ. ಈ ಮಣ್ಣು ಎಲ್ಲರಲ್ಲೂ ಪ್ರಗತಿ ಉಂಟುಮಾಡಲು ಪ್ರೇರೇಪಿಸುತ್ತದೆ ಎಂದರು.
ಮಕ್ಕಳಲ್ಲಿ ಸೃಜನಶೀಲತೆ ಉಂಟು ಮಾಡಲು ಶಿಕ್ಷಕರು ಸಾಕಷ್ಟು ಶ್ರಮಿಸಿದ್ದಾರೆ. ಮಕ್ಕಳು ತಯಾರಿಸಿರುವ ಪ್ರತಿ ಕೃತಿಗಳು ಉತ್ತಮವಾಗಿವೆ. ಗ್ರಾಮಸ್ಥರು, ಪೋಷಕರು ನಮ್ಮ ಇಲಾಖೆ ಜೊತೆ ಕೈಜೋಡಿಸಿರುವುದರಿಂದ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ತಿಳಿಸಿದರು.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ವಿದ್ಯಾರ್ಥಿಗಳು, ಹೆಚ್ಚು ಲ್ಯಾಪ್ ಟ್ಯಾಪ್ ಪಡೆದ ವಿದ್ಯಾರ್ಥಿಗಳು, ತಾಲೂಕಿನಲ್ಲೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಡೆಸುವ ಎನ್ಎಂಎಸ್ಎಸ್ ಪರೀಕ್ಷೆಯಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಆಯ್ಕೆ ಆಗಿರುವುದು ಈ ಶಾಲೆಯಿಂದ. ಈ ಶಾಲೆ ಮುಖ್ಯಶಿಕ್ಷಕರು ಸದಾಕಾಲ ಮಕ್ಕಳ ಹಿತ ಚಿಂತನೆ ಬಯಸುತ್ತಾರೆ. ಇವರಿಗೆ ಸಹಶಿಕ್ಷಕರು ಬೆಂಬಲವಾಗಿ ನಿಂತಿರುವುದು ಯಶಸ್ಸಿಗೆ ಕಾರಣ ಎಂದು ಹೇಳಿದರು.
ಶಾಲೆ ಶಿಕ್ಷಕ ಬಸವರಾಜು ಮಾತನಾಡಿ, ವಿದ್ಯಾರ್ಥಿಗಳು ಚಿತ್ರನಟರ ಆದರ್ಶಗಳನ್ನು ಮೈಗೂಡಿಸಿಕೊಳ್ಳದೆ ಈ ಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಹುದ್ದೆಯಲ್ಲಿರುವವರ ಮಾರ್ಗದರ್ಶನದಲ್ಲಿ ನೀವು ಸಹ ಉತ್ತಮ ಶಿಕ್ಷಣ ಪಡೆದು ಗ್ರಾಮ, ಶಾಲೆ, ಪೋಷಕರಿಗೆ ಹೆಸರು ತರುವಂತೆ ಕಿವಿಮಾತು ಹೇಳಿದರು.ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವರ್ಣಮಾಲೆ ಅಕ್ಷರಗಳು ಎಲ್ಲರ ಗಮನ ಸೆಳೆದವು. ವಿದ್ಯಾರ್ಥಿಗಳು ಅರ್ಥಪೂರ್ಣ ಪ್ರತಿ ಕೃತಿಗಳನ್ನು ತಯಾರಿಸಿ ಪೋಷಕರ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಗ್ರಾಮದ ಮುಖಂಡ ಜವರೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತೊರೆಕಾಡನಹಳ್ಳಿ ಗ್ರಾಪಂ ಅಧ್ಯಕ್ಷ ಕೆ.ಸಿ.ಗೌಡ, ಗ್ರಾಮ ಅಭಿವೃದ್ಧಿ ಅಧಿಕಾರಿ ಪ್ರಸಾದ್, ಎಸ್ಡಿಎಂಸಿ ಅಧ್ಯಕ್ಷ ಚಿಕ್ಕಸ್ವಾಮಿ, ಉಪಾಧ್ಯಕ್ಷ ಉಮೇಶ್ ಮತ್ತು ಸದಸ್ಯರು, ಗ್ರಾಮದ ಮುಖಂಡ ಜವರೇಗೌಡ, ಮುಖ್ಯ ಶಿಕ್ಷಕ ಶಿವಮಲ್ಲಯ್ಯ, ಪುಟ್ಟಸ್ವಾಮಿ, ಬಸವರಾಜು, ಜಿ.ಎಸ್.ಕೃಷ್ಣ, ವಿಷಕಂಠೇಗೌಡ, ಪುಟ್ಟರಾಜು, ಶಿಕ್ಷಕರಾದ ಎಸ್.ಎಸ್. ಸುರೇಶ್, ಎನ್.ವೈ.ಇಂದುಮತಿ, ಬಿ. ಎನ್.ಶ್ವೇತ ಮತ್ತು ಇತರರು ಇದ್ದರು.