ಕೊಪ್ಪಳ ಅಭಿವೃದ್ಧಿಗೆ ₹10 ಸಾವಿರ ಕೋಟಿ: ರಾಘವೇಂದ್ರ ಹಿಟ್ನಾಳ

| Published : Oct 07 2025, 01:03 AM IST

ಸಾರಾಂಶ

ಯಲಬುರ್ಗಾ ತಾಲೂಕಿನಲ್ಲಿ ಯಾವುದೇ ನೀರಿನ ಮೂಲಗಳು ಇಲ್ಲ, ನದಿಯೂ ಇಲ್ಲ. ಹೀಗಾಗಿ, ಇಲ್ಲಿ ₹650 ಕೋಟಿಯ ಕೆರೆ ನಿರ್ಮಾಣ ಯೋಜನೆಗೆ ಅನುಮೋದನೆ ನೀಡುವಂತೆ ಬಸವರಾಜ ರಾಯರಡ್ಡಿ ಮನವಿ ಮಾಡಿದರು. ಸಿದ್ದರಾಮಯ್ಯ ಅಸ್ತು ಎಂದರು.

ಕೊಪ್ಪಳ: ಕೊಪ್ಪಳ ಮೇಲಿನ ವಿಶೇಷ ಪ್ರೀತಿಯಿಂದ ಮುಖ್ಯಮಂತ್ರಿ ಸಿದ್ದರಾಮ್ಯಯ ಅವರು ತಮ್ಮ ಅಧಿಕಾರವಧಿಯಲ್ಲಿ ಈ ವರೆಗೆ ಹತ್ತು ಸಾವಿರ ಕೋಟಿ ಅನುದಾನ ನೀಡಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದ್ದಾರೆ.

ಕೊಪ್ಪಳ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಇದು ದಾಖಲೆಯ ಅನುದಾನವೇ ಸರಿ. ಇಷ್ಟೊಂದು ಅನುದಾನವನ್ನು ಯಾರೂ ನೀಡಿರಲಿಲ್ಲ ಎಂದರು.

ಕೊಪ್ಪಳದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ತಾವೇ ಅಡಿಗಲ್ಲು ಹಾಕಿ, ಅದನ್ನು ತಾವೇ ಉದ್ಘಾಟಿಸಿದ್ದರು. ಅದಾದ ಮೇಲೆ ಮೆಡಿಕಲ್ ಕಾಲೇಜು ಆಸ್ಪತ್ರೆ ನಿರ್ಮಾಣಕ್ಕೂ ತಾವೇ ಅಡಿಗಲ್ಲು ಹಾಕಿ, ಆನಂತರ ಈಗ ಉದ್ಘಾಟನೆ ನೆರವೇರಿಸಿದ್ದಾರೆ. ಈಗ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದರು.

ಕೊಪ್ಪಳ ತಾಲೂಕಿನ ಏತ ನೀರಾವರಿ ಯೋಜನೆಗಳ ಮೂಲಕ ಬರೋಬ್ಬರಿ ೭೭ ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ್ದಾರೆ. ಇದರಿಂದ ಸಾಕಷ್ಟು ಅನುಕೂಲವಾಗಿದ್ದು, ರೈತರು ಅಭಿವೃದ್ಧಿಯಾಗುವುದಕ್ಕೆ ಸಾಕ್ಷಿಯಾಗಿದೆ. ಅದರ ಜತೆಗೆ ಕೊಪ್ಪಳ ಜಿಲ್ಲೆಯಲ್ಲಿ ಆರ್ಥಿಕವಾಗಿ ಬೆಳವಣಿಗೆಯಾಗುತ್ತಿದೆ. ಕೈಗಾರಿಕೆಗಳು ಸಾಕಷ್ಟು ಇವೆ. ಹೀಗಾಗಿ, ತುರ್ತಾಗಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಅಗತ್ಯವಿದ್ದು, ಮಂಜೂರಿ ಮಾಡಿಕೊಡುವಂತೆ ಮನವಿ ಮಾಡಿದರು. ಆದರೆ, ಆನಂತರ ಮಾತನಾಡಿದ ಸಿದ್ದರಾಮಯ್ಯ ಅವರು ಈ ವಿಷಯ ಪ್ರಸ್ತಾಪ ಮಾಡಲಿಲ್ಲ. ಕೊಪ್ಪಳ ವಿವಿ ಈಗಾಗಲೇ ಇದ್ದು, ಅದು ಕೊಪ್ಪಳದಲ್ಲಿ ಆಗಬೇಕಾಗಿದೆ. ಅದಕ್ಕೊಂದು ಸುಸಜ್ಜಿತ ಕಟ್ಟಡದ ಅಗತ್ಯವಿದ್ದು, ಇದನ್ನು ಸಹ ಮಂಜೂರಿ ಮಾಡಿಕೊಡುವಂತೆ ಕೋರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳದ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಅವರ ಮೇಲೆ ಕೊಪ್ಪಳ ಜಿಲ್ಲೆಯ ಜನರು ಸಹ ಅಷ್ಟೇ ಪ್ರೀತಿ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿರುವುದು ಎಂದರು.