ಸಾರಾಂಶ
ಹಾನಗಲ್ಲ: ಬಡತನದ ವಿರುದ್ಧ ಸಮರ ಸಾರಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ದಿನದ ೧೮ ಗಂಟೆ ದೇಶಕ್ಕಾಗಿ ಕೆಲಸ ಮಾಡುತ್ತಾರೆ. ಆರೋಗ್ಯ ಭಾರತದ ಕನಸು ನನಸಾಗಿಸಲು ಪಣತೊಟ್ಟು ಯಶಸ್ಸಿನತ್ತ ದಾಪುಗಾಲು ಹಾಕಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ ಲೋಕಸಭಾ ಚುನಾವಣಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಹಾನಗಲ್ಲಿನ ಸಾವಿತ್ರಮ್ಮ ಉದಾಸಿ ಕಲ್ಯಾಣ ಮಂಟಪದ ಬಯಲಿನಲ್ಲಿ ಬಿಜೆಪಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ೧೧ ಸಾವಿರ ಕೋಟಿ ದಲಿತರ ಅಭಿವೃದ್ಧಿ ಹಣವನ್ನು ಗ್ಯಾರಂಟಿಗಳಿಗೆ ಕೊಟ್ಟಿರುವ ಕಾಂಗ್ರೆಸ್ ಸಿದ್ದರಾಮಯ್ಯ ಸರಕಾರ ದಲಿತ ಅಭಿವೃದ್ಧಿ ಬಗೆಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಗ್ಯಾರಂಟಿಗಳು ಕೇವಲ ಘೋಷಣೆಗಳು. ನಮ್ಮ ಸರಕಾರ ರೈತರ ಮಕ್ಕಳಿಗೆ ನೀಡುತ್ತಿದ್ದ ಅನುದಾನವನ್ನು ನಿಲ್ಲಿಸಿದ ಕಾಂಗ್ರೆಸ್ ರೈತರ ಪರವಾಗಿಲ್ಲ. ಯುವ ನಿಧಿ ಗ್ಯಾರಂಟಿ ಘೋಷಿಸಿದ ಈ ರಾಜ್ಯದ ಕಾಂಗ್ರೆಸ್ ಸರಕಾರ ಎಷ್ಟು ಹಣ ನೀಡಿದೆ? ಎಲ್ಲದಕ್ಕೂ ನಾಳೆ ಬಾ ಎಂದು ಹೇಳುವ, ಖಾಲಿ ಖಜಾನೆ ಸರಕಾರ ಎಂದು ವ್ಯಂಗ್ಯವಾಡಿದರು.ಬಿಜೆಪಿ ನಾಯಕ ಬಿ.ಎಸ್. ಅಕ್ಕಿವಳ್ಳಿ ಮಾತನಾಡಿ, ಬಿಜೆಪಿ ೪೦೦ಕ್ಕೂ ಅಧಿಕ ಸ್ಥಾನಗಳಲ್ಲಿ ಈ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಾಗಿ ಎಲ್ಲ ಸಮೀಕ್ಷೆಗಳು ವರದಿ ನೀಡಿವೆ. ಇಡೀ ಭಾರತದಲ್ಲಿ ಕೇವಲ ೩೮ ಸ್ಥಾನಗಳನ್ನು ಗೆಲ್ಲಲು ಕೂಡ ಕಾಂಗ್ರೆಸ್ ಸಮರ್ಥವಿಲ್ಲ ಎಂದರು.ಬಿಜೆಪಿ ನಾಯಕ ಕಲ್ಯಾಣಕುಮಾರ ಶೆಟ್ಟರ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಇದ್ದುದರಿಂದಲೇ ಸಾವು ನೋವು ಕಡಿಮೆಯಾಯಿತು. ಇಡೀ ಜಗತ್ತಿನಲ್ಲಿ ಉಚಿತವಾಗಿ ಕೊರೋನಾ ಲಸಿಕೆ ನೀಡಿದ್ದು ಭಾರತ ಮಾತ್ರ. ಅಮೆರಿಕಾದಂತಹ ದೇಶಗಳಲ್ಲಿ ಸಾವಿರಾರು ರುಪಾಯಿಗೆ ಕೊರೋನಾ ಲಸಿಕೆ ಮಾರಾಟ ಮಾಡಿದ್ದಾರೆ ಎಂದರು.ಇದೇ ಸಂದರ್ಭದಲ್ಲಿ ನ್ಯಾಯವಾದಿ ವಿನಾಯಕ ಕುರುಬರ ಬಿಜೆಪಿ ಸೇರಿದರು. ಮಾಜಿ ಸಚಿವ ಮನೋಹರ ತಹಶೀಲ್ದಾರ, ಶಿವರಾಜ ಸಜ್ಜನರ, ರಾಜಶೇಖರ ಕಟ್ಟೇಗೌಡರ, ಮಲ್ಲಿಕಾರ್ಜುನ ಹಾವೇರಿ, ಭೋಜರಾಜ ಕರೂದಿ, ಮಾಲತೇಶ ಸೊಪ್ಪಿನ, ಎಸ್.ಎಂ.ಕೋತಂಬರಿ, ಆರ್.ಬಿ.ಪಾಟೀಲ, ಮಹೇಶ ಕಮಡೊಳ್ಳಿ, ನಾಗರಾಜ ಉದಾಸಿ ಮೊದಲಾದವರು ವೇದಿಕೆಯಲ್ಲಿದ್ದರು.