ಆದಿಮ ೨೦೩ ನೇ ಹುಣ್ಣಿಮೆ ಹಾಡು ಕಾರ್ಯಕ್ರಮ

| Published : Mar 27 2024, 01:08 AM IST

ಸಾರಾಂಶ

ಹೆಣ್ಣು ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತು ಪುರಸೊತ್ತಿಲ್ಲದೇ ಎಷ್ಟೇ ದುಡಿದರೂ ಗುರುತಿಸುತ್ತಿಲ್ಲ. ಸಾಮಾಜಿಕವಾಗಿ ಶೋಷಿಣೆಗೊಳಪಡಿಸಿ, ಹಕ್ಕುಗಳನ್ನು ನೀಡದೇ ವಂಚಿಸುತ್ತಿದ್ದಾರೆ. ಹುಡುಗ ಹುಡುಗಿಯರು ಪ್ರೀತಿ, ಪ್ರೇಮ ಎಂದು ಜಾತಿ, ಕುಲ ನೋಡದೇ ಪ್ರೀತಿಸಿಬಿಡುತ್ತಾರೆ. ಅವರ ಜಾತಿಗಳು ಒಂದು ಹೀನ ಮತ್ತೊಂದು ಮೇಲು ಜಾತಿಯಾಗಿದ್ದರೆ ಅವರನ್ನು ಹೊರಗೆ ಹಾಕುತ್ತಾರೆ. ಹಿಂಸಿಸುತ್ತಾರೆ,ಈ ವಿಚಾರಗಳಲ್ಲಿ ಮರ್ಯಾದಾ ಹತ್ಯೆಗಳು ಕೂಡ ನಡೆದಿವೆ

ಕನ್ನಡಪ್ರಭ ವಾರ್ತೆ ಕೋಲಾರ

ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಪ್ರಾಕೃತಿಕವಾಗಿ, ದೈವಿಕವಾಗಿ ದೊಡ್ಡ ಸ್ಥಾನಗಳನ್ನು ಕೊಡಲಾಗಿದೆ. ಹೆಣ್ಣು ಸೃಷ್ಟಿಕರ್ತೆ,ಆದರೂ ನೋವಿದೆ, ಹೆಣ್ಣನ್ನು ಬಾಣಲಿಯಲ್ಲಿ ಹಾಕಿ ಹುರಿಯುತ್ತಾರೆ ಎಂದು ಬೆಳಕು ಟ್ರಸ್ಟ್ ಮತ್ತು ಬಾಲ ನ್ಯಾಯ ಮಂಡಳಿ ಸದಸ್ಯೆ ರಾಧಾಮಣಿ ವಿಷಾಧಿಸಿದರು.

ನಗರದ ಹೊರವಲಯದ ಅಂತರಗಂಗೆ ಬೆಟ್ಟದಲ್ಲಿರುವ ಆದಿಮ ಸಾಂಸ್ಕೃತಿಕ ಕೇಂದ್ರದ ೨೦೩ ನೇ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಣ್ಣು ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತು ಪುರಸೊತ್ತಿಲ್ಲದೇ ಎಷ್ಟೇ ದುಡಿದರೂ ಗುರುತಿಸುತ್ತಿಲ್ಲ. ಸಾಮಾಜಿಕವಾಗಿ ಶೋಷಿಣೆಗೊಳಪಡಿಸಿ, ಹಕ್ಕುಗಳನ್ನು ನೀಡದೇ ವಂಚಿಸುತ್ತಿದ್ದಾರೆ. ಹುಡುಗ ಹುಡುಗಿಯರು ಪ್ರೀತಿ, ಪ್ರೇಮ ಎಂದು ಜಾತಿ, ಕುಲ ನೋಡದೇ ಪ್ರೀತಿಸಿಬಿಡುತ್ತಾರೆ. ಅವರ ಜಾತಿಗಳು ಒಂದು ಹೀನ ಮತ್ತೊಂದು ಮೇಲು ಜಾತಿಯಾಗಿದ್ದರೆ ಅವರನ್ನು ಹೊರಗೆ ಹಾಕುತ್ತಾರೆ. ಹಿಂಸಿಸುತ್ತಾರೆ,ಈ ವಿಚಾರಗಳಲ್ಲಿ ಮರ್ಯಾದಾ ಹತ್ಯೆಗಳು ಕೂಡ ನಡೆದಿವೆ ಎಂದರು.

ಪಯಣ ಸಂಸ್ಥೆಯ ಯೋಜನಾ ನಿರ್ದೇಶಕಿ ಚಾಂದಿನಿ ಮಾತನಾಡಿ, ಆದಿಮ ೨೦೩ ನೇ ಹುಣ್ಣಿಮೆ ಹಾಡಿನಲ್ಲಿ ನಮ್ಮ ನಾಟಕ ಅಂದರೆ ಮಂಗಳಮುಖಿಯರ ನಾಟಕ ಪ್ರದರ್ಶನವಾಗುತ್ತಿರುವುದು ಅತ್ಯಂತ ಖುಷಿಯ ವಿಚಾರ. ಕಲೆ ಒಬ್ಬರ ಸ್ವತ್ತಲ್ಲ. ಎಲ್ಲರೂ ಒಂದಲ್ಲ ಒಂದು ಪಾತ್ರವನ್ನು ಜೀವನದಲ್ಲಿ ನಟಿಸಿ ಬದುಕುತ್ತೇವೆ. ನಾವೆಲ್ಲರೂ ರಂಗ ಕಲಾವಿದರೇ ಆಗಿರುತ್ತೇವೆ ಎಂದರು.

ಪಯಣ ಸಂಸ್ಥೆಯ ಕಾರ್ಯದರ್ಶಿ ಸವಿತಾ ಮಾತನಾಡಿ, ಆದಿಮ ಬಹಳ ಎತ್ತರಕ್ಕೆ ಬೆಳೆದಿದೆ ಮತ್ತಷ್ಟು ಬೆಳೆವಣಿಗೆಗೆ ಎಲ್ಲರ ಸಹಕಾರ ಅಗತ್ಯ ಎಂದರು.

ಕಲಾವಿದ ಕೆ.ವಿ.ಕಾಳಿದಾಸ ಗದ್ದುಗೆ ಗೌರವ ಸ್ವೀಕರಿಸಿದ ಮೋತಕಪಲ್ಲಿ ರತ್ನಮ್ಮನವರ ಬದುಕು ಮತ್ತು ಕಲೆ ಕುರಿತು ಮಾತನಾಡಿದರು.

ರಂಗಕರ್ಮಿ ನಾವೆಂಕಿ ಕೋಲಾರ ೨೦೨೪ ನೇ ವರ್ಷದ ವಿಶ್ವ ರಂಗಭೂಮಿ ದಿನಾಚರಣೆ ಕುರಿತು ಮಾತನಾಡಿ. ನಾರ್ವೆ ದೇಶದ ಕವಿ, ಕಾದಂಬರಿಕಾರ, ನಾಟಕಕಾರ ೨೦೨೩ ರ ನೋಬೆಲ್ ಪ್ರಶಸ್ತಿ ಪುರಸ್ಕ್ರತ ಜಾನ್ ಫೊಸ್ಸೆ ನೀಡಿರುವ ವಿಶ್ವ ರಂಗಭೂಮಿ ದಿನಾಚರಣೆಯ ಸಂದೇಶವನ್ನು ಓದಿದರು.

ಪಯಣ ಸಂಸ್ಥೆ ಅರ್ಪಿಸಿದ ಮಂಗಳಮುಖಿಯರು ಅಭಿನಯಿಸಿದ ನಾಟಕ ‘ತಲ್ಕಿ’ ಪ್ರೇಕ್ಷಕರ ಗಮನ ಸೆಳೆಯಿತು.

ಮಗುವಾಗಿದ್ದಾಗ ಒಬ್ಬೊಬ್ಬರೂ ಒಂದೊಂದು ಕನಸು ಕಾಣುತ್ತಾ ಗುರಿ ಇಟ್ಟುಕೊಂಡಿರುತ್ತಾರೆ. ಒಟ್ಟಾರೆ ಬದುಕಿನ ದುರಂತ ಕಥನಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ರಂಗದ ಮೇಲೆ ಸಾದರ ಪಡಿಸಿದರು.

ರಂಗದ ಹಿಂದೆ ತ್ರಿಮೂರ್ತಿ, ಸವಿತಾ, ಹನೀಷ್, ಮದನ್, ಬೆಳಕು ನಿರ್ವಹಣೆಯಲ್ಲಿ ಸಹಕರಿಸಿದ ತುರಂಡಳ್ಳಿ ಶ್ರೀನಿವಾಸ್ ಇದ್ದರು.

ಆದಿಮ ಪರವಾಗಿ ಇಂಚರ ನಾರಾಯಣಸ್ವಾಮಿ ವಂದಿಸಿ, ಮಣಿ ಸ್ಟುಡಿಯೋ ಸುಬ್ರಮಣಿ ನಿರೂಪಿಸಿದರು.

ಆದಿಮ ನೀಲಕಂಠೇಗೌಡ, ಹಮಾ ರಾಮಚಂದ್ರ, ಗಂಗನಬೀಡು ಎಂ ವೆಂಕಟಸ್ವಾಮಿ, ಚಾಂದಿನಿ, ರಾಧಾಮಣಿ, ಸವಿತಾ ಗದ್ದುಗೆ ಗೌರವ ನಡೆಸಿಕೊಟ್ಟರು. ಬಾಲಾಜಿ ಪ್ರಿಂಟರ್ಸ್ ಶ್ರೀನಿವಾಸ್, ನಾರಾಯಣಸ್ವಾಮಿ ಶಿಕ್ಷಕರು, ಸಾಹಿತಿ ನ.ಗುರುಮೂರ್ತಿ, ಶಂಕರ್ , ಪ್ರವೀಣ್, ಸಂವಾದ ಪದಾಧಿಕಾರಿಗಳು, ಮಹಿಳಾ ಸಂಘಟನೆಗಳ ಕಾರ್ಯಕರ್ತರು, ರಂಗಾಸಕ್ತರು, ವಿದ್ಯಾರ್ಥಿಗಳು ಇದ್ದರು.