ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಮಕ್ಕಳಿಗೆ ಸಂಬಂಧಿಸಿದ ಕಾಯ್ದೆ ಅನುಷ್ಠಾನಗೊಳಿಸುವಾಗ ಕಾಯ್ದೆಯ ಮೂಲತತ್ವ ಪರಿಗಣಿಸಿ ಅನುಷ್ಠಾನಗೊಳಿಸಿ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶೇಖರಗೌಡ ಜಿ. ರಾಮತ್ನಾಳ ಹೇಳಿದರು.ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುನಿಸೆಫ್-ಮಕ್ಕಳ ಸಂರಕ್ಷಣಾ ಯೋಜನೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಬ್ರೆಂಟ್ ಇಂಡಿಯಾ ಸೂಸೈಟಿ, ಕೊಪ್ಪಳ ಇವುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ನಗರಾಭಿವೃದ್ಧಿ ಪ್ರಾಧಿಕಾರದ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಭಾರತವು ಸಹ ಅನುಮೋದಿಸಿದ್ದು, ಸರ್ಕಾರ ಭಾರತ ಸಂವಿಧಾನದಲ್ಲಿ ಪ್ರದತ್ತವಾದ ಅಧಿಕಾರದನ್ವಯ ವಿಶೇಷ ಕಾಯ್ದೆ ಜಾರಿಗೊಳಿಸಿದೆ. ಅವುಗಳಲ್ಲಿ ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015, ತಿದ್ದುಪಡಿ-2021, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ತಿದ್ದುಪಡಿ-2019 ಇನ್ನೂ ಮುಂತಾದವುಗಳು ಜಾರಿಯಲ್ಲಿವೆ. ಕಾಯ್ದೆಯ ಅನುಷ್ಠಾನದ ಸಂದರ್ಭದಲ್ಲಿ, ನಿರ್ಣಯ ಕೈಗೊಳ್ಳುವ ಸಂದರ್ಭದಲ್ಲಿ ಮೂಲತತ್ವ ಪರಿಗಣಿಸಿ ಅನುಷ್ಠಾನಗೊಳಿಸಿ ಎಂದು ಕಾಯ್ದೆಯಲ್ಲಿಯೇ ಹೇಳಿರುವ ಕಾಯ್ದೆ ಇದಾಗಿರುತ್ತದೆ ಎಂದು ಅವರು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಗಂಗಪ್ಪ ಮಾತನಾಡಿ, ಮಕ್ಕಳ ರಕ್ಷಣಾ ನಿರ್ದೇಶನಾಲಯದಡಿಯಲ್ಲಿನ ಸೇವೆಗಳು ಹಾಗೂ ಪೊಲೀಸ್ ಇಲಾಖೆ, ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ತಿದ್ದುಪಡಿ -2021ರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮಕ್ಕಳ ರಕ್ಷಣೆಯನ್ನು ಸರ್ಕಾರವು ಆದ್ಯತಾ ಮತ್ತು ತುರ್ತು ಸೇವೆ ಎಂದು ಗುರುತಿಸಿದೆ. ಕಾನೂನಿನೊಡನೆ ಸಂಘರ್ಷದಲ್ಲಿರುವ, ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳ ಪುನರ್‌ವಸತಿಗಾಗಿ ಸರ್ಕಾರವು “ಮಿಷನ್ ವಾತ್ಸಲ್ಯ” ಯೋಜನೆ ಜಾರಿಗೊಳಿಸಿದ್ದು, ನಿಮ್ಮ ವ್ಯಾಪ್ತಿಯಲ್ಲಿ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳು ಕಂಡುಬಂದಲ್ಲಿ ಅಂತಹ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಎಂದು ತಿಳಿಸಿದರು.
ಯುನಿಸೆಫ್-ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಡಾ. ಕೆ. ರಾಘವೇಂದ್ರ ಭಟ್ ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 ತಿದ್ದುಪಡಿ-2021ರ ಹಾಗೂ ಮಿಷನ್ ವಾತ್ಸಲ್ಯ ಕುರಿತು, ಯುನಿಸೆಫ್-ಮಕ್ಕಳ ಸಂರಕ್ಷಣಾ ಯೋಜನೆಯ ವ್ಯವಸ್ಥಾಪಕ ಹರೀಶ್ ಜೋಗಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ-2012 ಮತ್ತು ತಿದ್ದುಪಡಿ- 2019ರ ಕುರಿತು ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಸಹಾಯಕ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು, ಶಿವಲೀಲಾ ವನ್ನೂರು, ಪ್ರತಿಭಾ ಕಾಶಿಮಠ, ಮಹಾಂತಸ್ವಾಮಿ ಪೂಜಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಪ್ರಶಾಂತ ರಡ್ಡಿ ಸೇರಿದಂತೆ ಇತರರಿದ್ದರು.