ಕರ ವಸೂಲಿಗೆ‌‌ ಆದ್ಯತೆ ನೀಡಿ: ಡಿಸಿ ಗೋವಿಂದ ರೆಡ್ಡಿ

| Published : Jul 21 2024, 01:26 AM IST

ಸಾರಾಂಶ

ಈಗಾಗಲೇ ಸಾರ್ವಜನಿಕರಿಂದ ನರೇಗಲ್‌ ಪಟ್ಟಣಕ್ಕೆ ಆ್ಯಂಬುಲೆನ್ಸ್‌ ಸೇವೆ ಅವಶ್ಯಕತೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ಕೂಡಲೇ ಸಂಬಂಧಿಸಿದ ಆರೋಗ್ಯ ಇಲಾಖೆಯ ಡಿಎಚ್ಓ ಅವರನ್ನು‌ ಸಂಪರ್ಕಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್‌ ಒದಗಿಸುವ ಕುರಿತು ಕ್ರಮ ಕೈಗೊಳ್ಳುತ್ತೇನೆ

ನರೇಗಲ್‌: ನರೇಗಲ್‌ ಪಪಂ ಅಭಿವೃದ್ಧಿಯಿಂದ ಹಿನ್ನಡೆ ಅನುಭವಿಸುತ್ತಿದ್ದು, ಅಭಿವೃದ್ಧಿಗಾಗಿ ಕರ ವಸೂಲಿಗೆ ಪಪಂ ಅಧಿಕಾರಿಗಳು ಆದ್ಯತೆ ನೀಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.

ಅವರು ಸ್ಥಳೀಯ ಪಪಂಗೆ ಶನಿವಾರ ದಿಢೀರ್ ಭೇಟಿ ನೀಡಿ, ಪಪಂ ಕಟ್ಟಡ ಹಾಗೂ ಆಸ್ತಿಗೆ ಸಂಬಂಧಿಸಿದ ದಾಖಲೆ ಪರಿಶೀಲಿಸಿ ಮಾತನಾಡಿದರು.

ಪಪಂ ಆದಾಯಕ್ಕೆ ಕತ್ತರಿಯಾಗಿರುವ ವಾಣಿಜ್ಯ ಮಳಿಗೆಗಳನ್ನು ಆದಷ್ಟು ಬೇಗನೆ ಟೆಂಡರ್ ಕರೆಯಲಾಗುವುದು. ಒಂದು ವೇಳೆ ಈಗಾಗಲೇ ಆ ವಾಣಿಜ್ಯ ಮಳಿಗೆಗಳಲ್ಲಿ ವ್ಯಾಪಾರ-ವಹಿವಾಟು ಮಾಡುತ್ತಿರುವ ಉದ್ಯೋಗಿಗಳಿಂದ ಬರಬೇಕಾದ ಹಳೆ ಬಾಕಿ ಮೊತ್ತ ಪಾವತಿಸಲು ಅವರು ಹಿಂದೇಟು ಹಾಕಿದ್ದಲ್ಲಿ ಆ ವ್ಯಾಪಾರಸ್ಥರ ಮನೆಗಳ ಮೇಲೆ ಭೋಜಾ ಹೇರುವಂತೆ ತಿಳಿಸಿದರು.‌

ಈಗಾಗಲೇ ಸಾರ್ವಜನಿಕರಿಂದ ನರೇಗಲ್‌ ಪಟ್ಟಣಕ್ಕೆ ಆ್ಯಂಬುಲೆನ್ಸ್‌ ಸೇವೆ ಅವಶ್ಯಕತೆ ಇರುವ ಬಗ್ಗೆ ಗಮನಕ್ಕೆ ಬಂದಿದ್ದು, ಕೂಡಲೇ ಸಂಬಂಧಿಸಿದ ಆರೋಗ್ಯ ಇಲಾಖೆಯ ಡಿಎಚ್ಓ ಅವರನ್ನು‌ ಸಂಪರ್ಕಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್‌ ಒದಗಿಸುವ ಕುರಿತು ಕ್ರಮ ಕೈಗೊಳ್ಳುತ್ತೇನೆ ಎಂದರು.

ಪಪಂ ಸದಸ್ಯರು ಕಳೆದ ಒಂದು ವರ್ಷದಿಂದ ಪಪಂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ತೆರವುಗೊಂಡಿರುವ ಕುರಿತು ಪ್ರಶ್ನಿಸಿದರು. ಸದಸ್ಯರ ಪ್ರಶ್ನೆಗೆ ಜಿಲ್ಲಾಧಿಕಾರಿ ಅವರು, ರಾಜ್ಯದ ಬಹುತೇಕ ಪಪಂ, ಪುರಸಭೆಗಳಲ್ಲಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳು ತೆರವುಗೊಂಡಿದ್ದು, ಸರ್ಕಾರದಿಂದ ಆದಷ್ಟು ಬೇಗನೇ ಮೀಸಲಾತಿ ಪ್ರಕಟಿಸುವ ಬಗ್ಗೆ ಚಿಂತನೆ ನಡೆದಿದೆ. ಸದಸ್ಯರ ಅವಧಿ ಇನ್ನೂ ಎರಡೂವರೆ ವರ್ಷ ಇದೆ. ಯಾವುದೇ ಕಾರಣಕ್ಕೂ ಸದಸ್ಯರು ಆತಂಕಕ್ಕೆ ಒಳಗಾಗ ಬಾರದು ಎಂದು ಭರವಸೆ ನೀಡಿದರು.

ಈ ವೇಳೆ ಪಪಂ ಸದಸ್ಯರಾದ ಈರಪ್ಪ ಜೋಗಿ, ಮುತ್ತಪ್ಪ ನೂಲ್ಕಿ, ಕುಮಾರಸ್ವಾಮಿ ಕೋರಧ್ಯಾನಮಠ, ಶ್ರೀಶೈಲಪ್ಪ ಬಂಡಿಹಾಳ, ನಿಂಗಪ್ಪ ಚಲವಾದಿ, ಯಲ್ಲಪ್ಪ ಮಣ್ಣೊಡ್ಡವರ, ಕಾರ್ಯನಿರ್ವಾಹಕ ಅಭಿಯಂತರ ಎಸ್.ಬಿ.‌ ಮರಿಗೌಡ್ರ, ಅಭಿಯಂತರ ಉಮೇಶ ಓಜನಳ್ಳಿ, ಮುಖ್ಯಾಧಿಕಾರಿ ರಮೇಶ ಹೊಸಮನಿ, ಆರೋಗ್ಯ ನಿರೀಕ್ಷಕ ರಾಮಚಂದ್ರ ಕಜ್ಜಿ, ರಮೇಶ ಹಲಗಿಯವರ ಸೇರಿದಂತೆ ಸಾರ್ವಜನಿಕರು ಹಾಗೂ ಸಿಬ್ಬಂದಿಗಳು ಇದ್ದರು.